ಈ ಹಿಂದಿನ ಲೇಖನದಲ್ಲಿ ನಾವು ಟೆಂಪ್ಲೇಟ್ ಹೇಗೆ ತಯಾರಿಸಬೇಕು, ಟೆಂಪ್ಲೇಟ್ ನಲ್ಲಿ ಯಾವ ಮಾಹಿತಿಯನ್ನು ಸೇರ್ಪಡಿಸುವುದು ಆವಶ್ಯಕವಾಗಿದೆ, ಇದರಿಂದಾಗಿ ಉಂಟಾಗುವ ನೇರವಾದ ಮತ್ತು ಅಪ್ರತ್ಯಕ್ಷವಾದ ಲಾಭಗಳ ಕುರಿತು ವಿಸ್ತಾರವಾದ ಮಾಹಿತಿಯನ್ನು ತಿಳಿದುಕೊಂಡೆವು. ಹಾಗೆಯೇ ‘ಬ್ಲಾಕ್’ ಎಂಬ ಸುಲಭವಾದ ಕಮಾಂಡ್ ಸೂಕ್ತ ರೀತಿಯಲ್ಲಿ ಬಳಸಿದಲ್ಲಿ ಡ್ರಾಯಿಂಗ್ ಮಾಡುವಾಗ ಎಷ್ಟು ಪ್ರಮಾಣದಲ್ಲಿ ಲಾಭವಾಗುತ್ದದೆ, ಎಂಬುದನ್ನು ಉದಾಹರಣೆಯೊಂದಿಗೆ ತಿಳಿದುಕೊಳ್ಳಲಾಯಿತು. ಬ್ಲಾಕ್ ಲೈಬ್ರರಿಯ ಸ್ವರೂಪದಲ್ಲಿ ನಾವು ಯಾವಾಗಲೂ ಬೇಕಾಗುವ ಕೆಲಸದ ಪ್ರಕ್ರಿಯೆಯ ಮಾಹಿತಿಯನ್ನು ಶೇಖರಿಸುವ ರೀತಿಯನ್ನೂ ತಿಳಿದುಕೊಂಡೆವು.
ಪ್ರಸ್ತುತ ಈ ಲೇಖನದಲ್ಲಿ ನಾವು ಇನ್ನೂ ಕೆಲವಾರು ಹೊಸ, ಅತ್ಯಾಧುನಿಕ ಕಮಾಂಡ್ ಗಳನ್ನು ಯೋಗ್ಯ ರೀತಿಯಲ್ಲಿ ಬಳಸುವುದು ಮತ್ತು ಅದರ ಉಪಯುಕ್ತತೆಯ ಕುರಿತು ವಿವರವಾಗಿ ತಿಳಿದುಕೊಳ್ಳೋಣ. ಇದರಿಂದಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನು ಹೇಗೆ ಪೂರ್ತಿಗೊಳಿಸಬಹುದು, ಕಮಾಂಡ್ ಗಳನ್ನು ಪರಿಶೀಲಿಸುತ್ತಾ ಅವುಗಳನ್ನು ಹೇಗೆ ಒಟ್ಟಾಗಿ ಬಳಸಬಲ್ಲೆವು, ಎಂಬುದರ ಕುರಿತೂ ಈ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ. ಯಾವುದೇ ಕೆಲಸದಲ್ಲಿ ತುಂಬಾ ಕಡಿಮೆ ಅಂಶಗಳನ್ನು ಕೈಗೆತ್ತಿಕೊಳ್ಳುವುದು, ನಿಪುಣತೆಯ ಅಂಶವಾಗಿದೆ. ಕಡಿಮೆ ಪ್ರಮಾಣದ ನಿರ್ವಹಣೆಯನ್ನು ಮಾಡಿದಲ್ಲಿ ಅದರಿಂದ ತುಂಬಾ ಕಡಿಮೆ ಪ್ರಮಾಣದ ದೋಷಗಳು ಉದ್ಭವಿಸುತ್ತವೆ. ಇದೇ ನೀತಿಯನ್ನು ನಾವು ಕೆಲವಾರು ಕಮಾಂಡ್ ಗಳನ್ನು ಬಳಸಿ ತಮ್ಮ ದೈನಂದಿನ ಡ್ರಾಯಿಂಗ್ ನ ಕೆಲಸಗಳನ್ನು ಪೂರ್ತಿಗೊಳಿಸಬೇಕು.
ಅಲೈನ್ ಕಮಾಂಡ್
ಯಾವಾಗಲೂ ಬೇಕಾಗುವ ಆಕಾರವನ್ನು ಬ್ಲಾಕ್ ಲೈಬ್ರರಿಯಲ್ಲಿ ಹೇಗೆ ಶೇಖರಿಸಬೇಕು, ಎಂಬುದನ್ನು ಈ ಹಿಂದಿನ ಲೇಖನದಲ್ಲಿ ಅರಿತುಕೊಂಡೆವು. ಅದರಲ್ಲಿರುವ ಹಲವಾರು ಡ್ರಾಯಿಂಗ್ ಗಳಲ್ಲಿ ಅವುಗಳನ್ನು ಹೇಗೆ ಬಳಸಬಹುದು, ಎಂಬುದನ್ನು ಪ್ರಸ್ತುತ ಲೇಖನದಲ್ಲಿ ತಿಳಿದುಕೊಳ್ಳೋಣ. ವಿಶೇಷವಾಗಿ ‘ಫ್ರೇಮ್ ಅಥವಾ ಕೇಸಿಂಗ್’ನ ಡ್ರಾಯಿಂಗ್ ಮಾಡುವಾಗ ಕೆಲವೇ ಆಯ್ಕೆ ಮಾಡಿರುವ ಆಕಾರಗಳನ್ನು ವಿಶಿಷ್ಟ ಕೋನದಲ್ಲಿ ಅಲವಡಿಸುವ ಆವಶ್ಯಕತೆ ಇರುತ್ತದೆ. ಆಗ ನಾವು ಲೈಬ್ರರಿಯಲ್ಲಿ ತಯಾರಿಸಿರುವ ಆಕಾರ (ಚಿತ್ರ ಕ್ರ. 1) ಡ್ರಾಯಿಂಗ್ ನಲ್ಲಿ ಅಳವಡಿಸಿ ಅದನ್ನು ಯೋಗ್ಯ ಜಾಗದಲ್ಲಿ ಮತ್ತು ಬೇಕಾಗಿರುವ ಕೋನದಲ್ಲಿ ಅಳವಡಿಸಲು ‘ಅಲೈನ್’ ಈ ಕಮಾಂಡ್ ಖಂಡಿತವಾಗಿಯೂ ಬಳಸಬಲ್ಲೆವು. ಈ ಕಮಾಂಡ್ ಹೇಗೆ ಬಳಸುವುದು, ಎಂಬುದನ್ನು ಈ ಮುಂದೆ ನೀಡಲಾಗಿದೆ.
• ಮೊತ್ತ ಮೊದಲಾಗಿ ಡ್ರಾಯಿಂಗ್ ನಲ್ಲಿ ತಮಗೆ ಬೇಕಾಗಿರುವ ಆಕಾರವನ್ನು ಮುಂಚೆಯೇ ತಯಾರಿಸಿರುವ ಲೈಬ್ರರಿಯಿಂದ ಆಯ್ಕೆ ಮಾಡಬೇಕು ಮತ್ತು ಅದನ್ನು ಡ್ರಾಯಿಂಗ್ ನಲ್ಲಿ ಅಳವಡಿಸಬೇಕು.
• ಆ ವಿಶಿಷ್ಟ ರೀತಿಯ ಆಕಾರವನ್ನು ಆಯ್ಕೆ ಮಾಡಬೇಕು ಮತ್ತು ನಂತರವೇ ‘ಮಾಡಿಫೈ’ ಎಂಬ ಪ್ರಮುಖ ಪರ್ಯಾಯವನ್ನು ಬಳಸಿ ಅಲೈನ್ ಎಂಬ ಉಪ ಪರ್ಯಾಯವನ್ನು ಬಳಸಬೇಕು.
• ತಮಗೆ ಬೇಕಾಗಿರುವ ವಿಶಿಷ್ಟ ಕೋನದಲ್ಲಿ ಅಳವಡಿಸಬೇಕಾಗಿರುವ ಪಾಯಿಂಟ್ ಚುನಾಯಿಸಬೇಕು.
• ಈ ರೀತಿಯ ಮಾಡಿದ ತಕ್ಷಣ ಮೊದಲ ಆಕಾರ ಇನ್ನೊಂದು ಆಕಾರದೊಂದಿಗೆ ಕೋನದಲ್ಲಿಯೇ ಅಳವಡಿಸಲ್ಪಡುತ್ತದೆ.
• ಈ ಪ್ರಕ್ರಿಯೆಯಾಗುತ್ತಿರುವಾಗ ನಾವು ಅದಕ್ಕೆ ಅದರ ಅಳತೆಯೊಂದಿಗೆ ಸರಿಹೊಂದಾಣಿಸಲು ಸೂಚಿಸಬಲ್ಲೆವು.
• ಚಿತ್ರ ಕ್ರ. 2 ರಲ್ಲಿ ತೋರಿಸಿರುವ ಫ್ರೇಮ್ ನ ಆಕೃತಿಯಲ್ಲಿ ಆಕಾರ ‘A’ ಯಂತಿರುವ ಆಕಾರದ ಆವಶ್ಯಕತೆ ಉದ್ಭವಿಸುತ್ತದೆ. ಈ ಆಕಾರವನ್ನು ನಾವು ಈ ಹಿಂದೆಯೇ ಲೈಬ್ರರಿಯಲ್ಲಿ ಸೇರಿಸಿದ್ದೇವೆ. ಆದ್ದರಿಂದಲೇ ನಾವು ತಕ್ಷಣವೇ ಆ ಆಕಾರವನ್ನು ತಯಾರಿಸಿ ಬಳಸುವುದು ಸಾಧ್ಯ.
ಈ ಕಮಾಂಡ್ ನಿಂದಾಗಿ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಲಭಿಸುವ ಲಾಭಗಳು
• ರೊಟೇಟ್, ಮೂವ್ ಈ ಕಮಾಂಡ್ ಗಳನ್ನು ಬಳಸುವುದನ್ನು ತಡೆಯಬಹುದು. ಅಲ್ಲದೇ ಒಂದೇ ಕಮಾಂಡ್ ನಲ್ಲಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.
• ಹೊಸ ಆಕಾರವನ್ನು ತಯಾರಿಸುವ ಆವಶ್ಯಕತೆ ಇಲ್ಲ. ಇದರಿಂದಾಗಿ ಸಮಯದ ಉಳಿತಾಯವಾಗಬಲ್ಲದು.
• ಒಂದು ಆಕಾರವನ್ನು ಇನ್ನೊಂದು ಆಕಾರದೊಂದಿಗೆ ನಿಖರವಾಗಿ ಜೋಡಿಸುವುದೂ ಸಾಧ್ಯ.
• ಕಮಾಂಡ್ ಗಳನ್ನು ಕನಿಷ್ಠ ಪ್ರಮಾಣದಲ್ಲಿ ಬಳಸುವುದರಿಂದ ದೋಷಗಳು ಉದ್ಭವಿಸುವ ಸಾಧ್ಯತೆಯು ತುಂಬಾ ಕಡಿಮೆಯಾಗುತ್ತದೆ.
ಯಾವುದೇ ಅತ್ಯಾಧುನಿಕ ಕಮಾಂಡ್ ಜಾಣತನದಿಂದ ಹೇಗೆ ಬಳಸಬೇಕು ಈ ಕುರಿತು ನಾವು ಮೇಲಿನಂತೆ ವಿಶ್ಲೇಷಿಸಿದೆವು. ಈಗ ನಾವು ನಮಗೆ ಯಾವಾಗಲೂ ಬೇಕಾಗುವ ಮತ್ತು ತುಂಬಾ ಮಹತ್ವದ ಡ್ರಾಯಿಂಗ್ ನ ಕುರಿತಾದ ರಿವ್ಯೂ ಸುಲಭವಾಗಿ ಹೇಗೆ ಮಾಡಬಹುದು, ಅದರಲ್ಲಿ ಸಮಯದ ಉಳಿತಾಯದೊಂದಿಗೆ ತಪ್ಪುಗಳ ಪ್ರಮಾಣವು ಹೇಗೆ ಕಡಿಮೆಯಾಗಬಲ್ಲದು, ಎಂಬಿತ್ಯಾದಿಗಳ ಕುರಿತಾದ ಅಂಶಗಳನ್ನು ತಿಳಿದುಕೊಳ್ಳೋಣ.
ಸಾಫ್ಟ್ ವೇರ್ ಬಳಸಿ ಡ್ರಾಯಿಂಗ್ ಶೀಟ್ ನ್ನು ಹೋಲಿಸುವ ಸಹಜ-ಸುಲಭ ರೀತಿ
ಇಂಜಿನಿಯರಿಂಗ್ ಡ್ರಾಯಿಂಗ್ ಕುರಿತು ವಿಚಾರ ಮಾಡಿದಲ್ಲಿ ಅದನ್ನು ತಯಾರಿಸುವಾಗ ತಮಗೆ ಅನೇಕ ವಸ್ತುಗಳ ಡ್ರಾಯಿಂಗ್ ತಯಾರಿಸಬೇಕಾಗುತ್ತದೆ. ಇದರಿಂದ ನೇರವಾಗಿ ವಸ್ತುಗಳನ್ನು ಉತ್ಪಾದಿಸುವಾಗ ಅದರಲ್ಲಿರುವ ಸೂಕ್ಷ ಅಂಶಗಳೊಂದಿಗೆ ಎಲ್ಲ ಮಾಹಿತಿಯು ಒಟ್ಟಾಗಿ ಲಭ್ಯವಾಗಬಲ್ಲದು. ಡ್ರಾಯಿಂಗ್ ತಯಾರಿಸಲು ಮೂಲಭೂತವಾದ ಅನೇಕ ಹಂತಗಳಿರುತ್ತವೆ. ಇದರ ಕುರಿತು ತಿಳಿದುಕೊಳ್ಳೋಣ.
• ಮೊದಲಾಗಿ ನಾವು ಮಾದರಿಗೋಸ್ಕರ ಆ ವಸ್ತುವಿನ ಕಾಲ್ಪನಿಕ ಚಿತ್ರವನ್ನು ಬರೆಯುತ್ತೇವೆ.
• ಅದರ ನಂತರ ನಾವು ಅಳತೆಗೆ ಅನುಪಾತಕ್ಕೆ ಅನುಸಾರವಾಗಿ ಅದನ್ನು ಅಳವಡಿಸುತ್ತೇವೆ.
• ನಂತರ ಅದರ ವಿನ್ಯಾಸವನ್ನು ಶಾಸ್ತ್ರೀಯ ರೀತಿಯಲ್ಲಿ ಬರೆಯುತ್ತೇವೆ. ಅದರಲ್ಲಿ ಅದರ ಘಟಕಗಳು, ಪದ್ಧತಿ, ಅದರ ಕುರಿತಾದ ತಾಂತ್ರಿಕ ಮಾಹಿತಿ ಮುಂತಾದ ಅಂಶಗಳನ್ನು ಉಲ್ಲೇಖಿಸುತ್ತೇವೆ.
ಈ ರೀತಿಯಲ್ಲಿ ತಾವು ಉತ್ಪಾದಿಸುವ ವಸ್ತುಗಳ ಡ್ರಾಯಿಂಗ್ ತಯಾರಾಗುತ್ತದೆ. ಅದರ ನಂತರ ಅದರಲ್ಲಿ ಆವಶ್ಯಕತೆಗೆ ಅನುಸಾರವಾಗಿ ಅಥವಾ ಯಾವುದೇ ರೀತಿಯ ವಿಶಿಷ್ಟ ರೀತಿಯ ಕಾರಣದಿಂದಾಗಿ ಬದಲಾವಣೆಗಳಾಗುತ್ತಿರುತ್ತವೆ. ಉದಾಹರಣೆ, ಉದ್ದ, ಅಗಲ ಅಥವಾ ಎತ್ತರದಲ್ಲಿ ಬದಲಾವಣೆಗಳು, ಯಾವುದೊಂದು ಫೀಚರ್ ಬೇಕಾಗಿರುವುದು ಅಥವಾ ಬೇಡವಾಗಿರುವುದು, ಅದರ ಆಕಾರಮಾನಗಳಲ್ಲಾದ ಬದಲಾವಣೆಗಳು ಮುಂತಾದ ಕಾರಣಗಳಿಂದಾಗಿ ನಾವು ಸುಧಾರಿತ ಡ್ರಾಯಿಂಗ್ ತಯಾರಿಸುತ್ತೇವೆ. ಆದರೆ ಆ ಡ್ರಾಯಿಂಗ್ ಪೂರ್ತಿಯಾದ ನಂತರ ಮತ್ತೆ ಅದನ್ನು ನಾವು ಪರೀಕ್ಷಿಸಿಯೇ ಮುಂದಿನ ಕಾರ್ಯಾಚರಣೆಗೆ ನೀಡಬಹುದಾಗಿದೆ. ಇದರಲ್ಲಾಗುವ ಬದಲಾವಣೆಗಳನ್ನು ರಿವಿಜನ್ ಮಾಡಿರುವ ಆವೃತ್ತಿ ಎಂಬುದಾಗಿ ಕರೆಯುತ್ತಾರೆ. ಅದರ ಕುರಿತಾಗಿ ಅಲ್ಪ-ಸ್ವಲ್ಪ ಮಾಹಿತಿಯನ್ನು ನಾವು ಟೆಂಪ್ಲೇಟ್ ತಯಾರಿಸುವ ಕುರಿತಾದ ಮಾಹಿತಿ ಇರುವ ಲೇಖನದಲ್ಲಿ ತಿಳಿದುಕೊಂಡಿದ್ದೇವೆ.
ಆದರೆ ಅದಕ್ಕೋಸ್ಕರ ಸಹಜವಾಗಿಯೇ ಡ್ರಾಯಿಂಗ್ ನಲ್ಲಿರುವ ಎಲ್ಲ ಅಳತೆಗಳನ್ನು ಮತ್ತೆ ಪರಿಶೀಲಿಸಬೇಕಾಗುತ್ತದೆ. ಕಾರಣ ಯಾವುದೇ ಅಳತೆಯಲ್ಲಿ ಆಗಿರುವ ಬದಲಾವಣೆಯು ಡ್ರಾಯಿಂಗ್ ನ ಇನ್ನಿತರ ಘಟಕಗಳಿಗೂ, ಅದರ ಮಾಪನಗಳಿಗೂ ಇದರಿಂದ ಪರಿಣಾಮ ಬೀರಬಲ್ಲದು. ಇದಕ್ಕೋಸ್ಕರ ನಾವು ಬದಲಾವಣೆಗಳನ್ನು ‘ಹೈಲೈಟ್’ ಮಾಡಿಯೇ ಪರೀಕ್ಷಿಸುತ್ತೇವೆ. ಇದಕ್ಕೆ ತುಂಬಾ ಸಮಯವೂ ಬೇಕಾಗುತ್ತದೆ. ಇದಕ್ಕೋಸ್ಕರ ಸಾಫ್ಟ್ ವೇರ್ ಸೂಕ್ತವಾದ ರೀತಿಯಲ್ಲಿ ಬಳಸಿ ನಾವು ಇದೇ ಕ್ಲಿಷ್ಟ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭವಾಗಿ ಮಾಡಬಲ್ಲೆವು. ಇದಕ್ಕೋಸ್ಕರ ‘DWG ಕಂಪೇಯರ್’ ಈ ಕಮಾಂಡನ್ನು ಬಳಸಿದಲ್ಲಿ ನಾವು ಮುಂಚಿನ ಡ್ರಾಯಿಂಗ್ ಮತ್ತು ಬದಲಾವಣೆಗಳನ್ನು ಮಾಡಿದ ನಂತರದ ಡ್ರಾಯಿಂಗ್ ಇವುಗಳನ್ನು ಹೋಲಿಸಬಲ್ಲೆವು. ಈ ಕಮಾಂಡ್ ಉಪಯೋಗಿಸುವಾಗ ಈ ಕೆಳಗಿನ ಹಂತಗಳನ್ನು ಬಳಸಬೇಕು.
• ಮೊತ್ತಮೊದಲಾಗಿ ‘ಕೊಲ್ಯಾಬರೇಟ್’ ಈ ಪರ್ಯಾಯವನ್ನು ಬಳಸಬೇಕು.
• ಅದರ ನಂತರ ‘DWG ಕಂಪೇಯರ್’ ಎಂಬ ಉಪ-ಪರ್ಯಾಯವನ್ನು ಆಯ್ಕೆ ಮಾಡಿರಿ.
• ಇದರಲ್ಲಿ ನಿಮಗೆ ಎರಡು ಪರ್ಯಾಯಗಳು ಕಂಡುಬರುತ್ತವೆ. ಮೊದಲನೆಯ ಪರ್ಯಾಯವೆಂದರೆ, ಹೋಲಿಸಬೇಕಾಗಿರುವ ಡ್ರಾಯಿಂಗ್ ಮತ್ತು ಮುಂಚಿನ ಡ್ರಾಯಿಂಗ್. ಇನ್ನೊಂದು ಪರ್ಯಾಯವೆಂದರೆ ಸುಧಾರಿತ ಡ್ರಾಯಿಂಗ್.
• ಈ ರೀತಿಯಲ್ಲಿ ನೀವು ಎರಡೂ ಡ್ರಾಯಿಂಗ್ ನಲ್ಲಿರುವ ವ್ಯತ್ಯಾಸಗಳನ್ನು ಸೂಕ್ತ ರೀತಿಯಲ್ಲಿ ತಿಳಿಸಬಲ್ಲಿರಿ.
ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಎರಡು ಡ್ರಾಯಿಂಗ್ ನಲ್ಲಿರುವ ವ್ಯತ್ಯಾಸ ತಕ್ಷಣ ಗುರುತಿಸಬಹುದು. ‘ಲೇಯರ್’ಗೆ ಸಂಬಂಧಪಟ್ಟ ಹೆಚ್ಚಿನ ಪರ್ಯಾಯಗಳು ಇದರಲ್ಲಿ ಲಭ್ಯವಿರುತ್ತವೆ. ಎರಡು ಬೇರೆಬೇರೆ ಡ್ರಾಯಿಂಗ್ ಗಳನ್ನು ಗುರುತಿಸಲು ಅದರ ಕಲರ್ ಕೋಡಿಂಗ್ ನಿರ್ಧರಿಸಲಾಗುತ್ತದೆ. ಹಾಗೆಯೇ ಮಾಡಿರುವ ಸುಧಾರಣೆಗಳು ‘ಹೈಲೈಟ್’ ಆಗುತ್ತವೆ. ಈ ಎಲ್ಲದರ ಒಟ್ಟು ಪರಿಣಾಮದಿಂದಾಗಿ ಈ ಮುಂದಿನ ಲಾಭಗಳನ್ನು ಪಡೆಯಬಹುದು.
• ಡ್ರಾಯಿಂಗ್ ಪರೀಕ್ಷಿಸುವ ಸಮಯವು ತುಂಬಾ ಕಡಿಮೆಯಾಗುತ್ತದೆ.
• ಬದಲಾವಣೆ ಮಾಡಿದ್ದರಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇನ್ನಿತರ ಘಟಕಗಳಲ್ಲಿಯೂ ಪರಿಣಾಮವನ್ನು ಬೀರುತ್ತದೆ. ಈ ಪರಿಣಾಮವು ತಕ್ಷಣವೇ ಗಮನಕ್ಕೆ ಬರುತ್ತದೆ.
• ಸೂಕ್ಷ್ಮವಾದ, ಚಿಕ್ಕ-ಪುಟ್ಟ ದೋಷಗಳನ್ನು ತಡೆಯುವುದೂ ಸುಲಭವಾಗುತ್ತದೆ.
• ಪ್ರತಿಯೊಂದು ಬಾರಿ ಡ್ರಾಯಿಂಗ್ ಪರಿಶೀಲಿಸಲು ಪ್ರತಿಗಳನ್ನು ಪ್ರಿಂಟ್ ಮಾಡುವ ಆವಶ್ಯಕತೆ ಇರುವುದಿಲ್ಲ.
ಇದರಿಂದಾಗಿ ಕಾಗದದ ಉಳಿತಾಯವಾಗುತ್ತದೆ. ಅಲ್ಲದೇ ಕೆಲಸವು ಪರಿಸರ ಮಾಲಿನ್ಯವನ್ನು ತಡೆಗಟ್ಟಬಲ್ಲದು. ಇದರಿಂದ ಪರಿಸರದ ರಕ್ಷಣೆಯನ್ನು ಮಾಡುವುದೂ ಸಾಧ್ಯ.
ಅಮಿತ್ ಘೋಲೆ ಇವರು ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದಾರೆ. ಅವರು ಎಟ್ ಲಾಸ್ ಕ್ಯಾಪ್ಕೋ, ಥಿಸೆನ್ ಕ್ರುಪ್ ಇಂತಹ ಮಲ್ಟಿನ್ಯಾಶನಲ್ ಕಂಪನಿಗಳಲ್ಲಿ ಡಿಸೈನ್ ವಿಭಾಗದಲ್ಲಿ ಅನೇಕ ವರ್ಷಗಳ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸಿದ ನಂತರ ಅವರು ‘ಇಮ್ಯಾಜಿಕಾ ಟೆಕ್ನೋಸಾಫ್ಟ್’ ಎಂಬ ಇಂಜಿನಿಯರಿಂಗ್ ಡಿಸೈನ್ ಸೊಲ್ಯುಶನ್ ಮತ್ತು ಕಾರ್ಪೊರೇಟ್ ತರಬೇತಿಯನ್ನು ನೀಡುವ ಕನ್ಸಲ್ಟನ್ಸಿಯನ್ನು ಸ್ಥಾಪಿಸಿದರು.