ಟರ್ನ್ ಓವರ್ ಫಿಕ್ಸ್ಚರ್ ಕುರಿತು ಲೋಹಕಾರ್ಯದ ಮೇ 2020 ಸಂಚಿಕೆಯಲ್ಲಿ ವಿವರಗಳನ್ನು ತಿಳಿದುಕೊಂಡೆವು. ಈ ಫಿಕ್ಚ್ಸರ್ ಗಳು ಒಂದು ಬದಿಯಿಂದ ಇನ್ನೊಂದು ಬದಿಗೆ ತಿರುಗಿಸಿದ ನಂತರ ಬೇರೆಬೇರೆ ದಿಕ್ಕುಗಳಲ್ಲಿ ಒಂದೇ ಕಾರ್ಯವಸ್ತುವಿನಲ್ಲಿ ಡ್ರಿಲ್ಲಿಂಗ್ ಮಾಡಲಾಗುತ್ತದೆ. ಓರೆಯಾಗಿರುವ ಸರ್ಫೇಸ್ ನಲ್ಲಿ ನಿರ್ದೋಷವಾದ ಹಾಗೆಯೇ ಯೋಗ್ಯವಾಗಿರುವ ಡ್ರಿಲ್ಲಿಂಗ್ ಹೇಗೆ ಮಾಡಲಾಗುತ್ತದೆ, ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ಓರೆಯಾಗಿರುವ ಸರ್ಫೇಸ್ ನಲ್ಲಿ ಡ್ರಿಲ್ಲಿಂಗ್
ಚಿತ್ರ ಕ್ರ. 1 ರಲ್ಲಿ ಓರೆಯಾಗಿರುವ ಸರ್ಫೇಸ್ ನಲ್ಲಿ ಡ್ರಿಲ್ಲಿಂಗ್ ಮಾಡಲಾಗುವ ಜಿಗ್ ತೋರಿಸಲಾಗಿದೆ. ಈ ವಿಧದ ಡ್ರಿಲ್ಲಿಂಗ್ ಮಾಡುವಾಗ ಏನೇನು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಎಂಬುದನ್ನು ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಚಿತ್ರ ಕ್ರ. 2 ರಲ್ಲಿ ಸಮತಟ್ಟಾದ ಸರ್ಫೇಸ್ ನಲ್ಲಿ ಲಂಬರೂಪದಲ್ಲಿ ಡ್ರಿಲ್ಲಿಂಗ್ ಮಾಡುವಾಗ ಪ್ರಾರಂಭದಲ್ಲಿ ಡ್ರಿಲ್ ನ ಎರಡೂ ತುದಿಗಳು ಒಂದೇ ವೇಳೆಯಲ್ಲಿ ಸರ್ಫೇಸ್ ನಲ್ಲಿ ಒರಗುತ್ತವೆ. ಇದರಿಂದಾಗಿ ಉಂಟಾಗುವ ಪ್ರತಿಕ್ರಿಯೆಯು ಸಮಾನವಾಗಿರುವುದರಿಂದ ಡ್ರಿಲ್ ನ ಎರಡೂ ತುದಿಗಳಲ್ಲಿ ಉಂಟಾಗುವ ಬಲವು ಸಮಾನವಾಗಿರುತ್ತದೆ. ಇದರಿಂದಾಗಿ ಡ್ರಿಲ್ ನಲ್ಲಿ ವಿಪರೀತವಾದ ಪರಿಣಾಮವು ಉಂಟಾಗುವುದಿಲ್ಲ ಮತ್ತು ಡ್ರಿಲ್ ತುಂಡಾಗುವುದಿಲ್ಲ.
ಚಿತ್ರ ಕ್ರ. 2 ಬಿಯಲ್ಲಿ ಸಮತಟ್ಟಾದ ಮತ್ತು ಓರೆಯಾಗಿರುವ ಸರ್ಫೇಸ್ ನಲ್ಲಿ ಡ್ರಿಲ್ಲಿಂಗ್ ಮಾಡುವುದನ್ನು ತೋರಿಸಲಾಗಿದೆ. ಡ್ರಿಲ್ ಈ ಸರ್ಫೇಸ್ ನಲ್ಲಿ ಒರಗುವಾಗ ಡ್ರಿಲ್ ನ ಒಂದೇ ತುದಿಯು ಮೊದಲಾಗಿ ಒರಗುತ್ತದೆ. ಇದರಿಂದಾಗಿ ಕೇವಲ ಅದೇ ತುದಿಯಲ್ಲಿ ಉಂಟಾಗಿರುವ ಬಲದಿಂದಾಗಿ ಡ್ರಿಲ್ ಬಗ್ಗುತ್ತದೆ ಅಥವಾ ತುಂಡಾಗುತ್ತದೆ, ಎಂಬುದು ಗಮನಕ್ಕೆ ಬರುತ್ತದೆ. ಹಾಗೆಯೇ ಯಾವ ಕೇಂದ್ರದಲ್ಲಿ ರಂಧ್ರಗಳನ್ನು ಮಾಡಬೇಕೋ, ಆ ಜಾಗದಲ್ಲಿ ರಂಧ್ರಗಳನ್ನು ಮಾಡದೇ ಬೇರೆಯೇ ಜಾಗದಲ್ಲಿ ರಂಧ್ರಗಳು ತಯಾರಾಗುತ್ತವೆ. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ವಸ್ತುವಿನ ಸ್ಥಿತಿಯೂ ಹಾಗೆಯೇ ಇದೆ. ಡ್ರಿಲ್ ಕಾರ್ಯವಸ್ತುವಿನಲ್ಲಿ ಒರಗಿದಾಗ ಡ್ರಿಲ್ ನ ಒಂದೇ ತುದಿಯಲ್ಲಿ ಮೊದಲಾಗಿ ಒರಗುತ್ತದೆ, ಇದೊಂದು ಸಮಸ್ಯೆಯಾಗಿದೆ. ಈ ಜಿಗ್ ನಲ್ಲಿ ಈ ರೀತಿಯ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬುದು ತಮಗೆ ತಿಳಿಯಬಹುದು. ಈ ಲೇಖನದಲ್ಲಿ ಜಿಗ್ ಗಳ ವಿವಿಧ ಭಾಗಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.
1. ಜಿಗ್ಸ್ ನ ಬಾಡಿ
ಈ ಬಾಡಿ ಡಿಸೈನ್ ಪ್ರಕಾರವೇ ಇರಬೇಕು. ಅದಕ್ಕೆ ಆವಶ್ಯಕವಿರುವ ಗಾತ್ರದ ಪ್ಲೇಟ್ ವೆಲ್ಡಿಂಗ್ ಮಾಡಿ ತಯಾರಿಸಿರುವುದರಿಂದ ಈ ಬಾಡಿಯ ಸ್ಟ್ರೆಸ್ ರಿಲೀವಿಂಗ್ ಮಾಡುವುದು ತುಂಬಾ ಅಗತ್ಯವಾಗಿದೆ. ಇದರಿಂದಾಗಿ ಅದರ ಮಾಪನಗಳು ಸ್ಥಿರವಾಗಿರುತ್ತವೆ. ಕಾರ್ಯವಸ್ತು ಯಾವ ಸರ್ಫೇಸ್ ನಲ್ಲಿ ಇಡಲಾಗುತ್ತದೆಯೋ, ಆ ಜಾಗದಲ್ಲಿ ಹಾರ್ಡ್ ಪ್ಯಾಡ್ ಅಳವಡಿಸಲಾಗಿದೆ. ಇದರಿಂದಾಗಿ ಕಾರ್ಯವಸ್ತು ಆಗಾಗ ಅಳವಡಿಸಿದರಿಂದಾಗಿ ಮತ್ತು ಕ್ಲ್ಯಾಂಪ್ ಮಾಡಿರುವುದರಿಂದ ಜಿಗ್ ನ ಸರ್ಫೇಸ್ ಹಾಳಾಗುವುದಿಲ್ಲ. ಕಾರ್ಯವಸ್ತುವಿನಲ್ಲಿ ಯಾವ ರಂಧ್ರಕ್ಕೆ ಯಂತ್ರಣೆಯನ್ನು ಮಾಡುವುದಿದೆಯೋ ಅದು ಓರೆಯಾಗಿದೆ. ಇದರಿಂದಾಗಿ ಕಾರ್ಯವಸ್ತು ಈ ರೀತಿಯಲ್ಲಿ ಓರೆ ಮಾಡಬೇಕಾಗುತ್ತದೆ. ಆದ್ದರಿಂದ ಯಾವ ರಂಧ್ರವನ್ನು ಮಾಡುವುದಿದೆಯೋ ಅದನ್ನು ಡ್ರಿಲ್ಲಿಂಗ್ ಸ್ಪಿಂಡಲ್ ನ ರೇಖೆಯಲ್ಲಿ ಬರುತ್ತದೆ. ಈ ಕೋನವು ಕಾರ್ಯವಸ್ತುವಿನ ರಂಧ್ರದ ಕೋನದಲ್ಲಿ ನಿರ್ಧರಿಸಲಾಗುತ್ತದೆ. ಈ ಕೋನ ತಪ್ಪಿದಲ್ಲಿ ಕಾರ್ಯವಸ್ತು ಹಾಳಾಗುತ್ತದೆ. ಚಿತ್ರ ಕ್ರ. 1 ರಲ್ಲಿ ತೋರಿಸಿದಂತೆ ಒಂದು ಕೆಂಪು ಬಣ್ಣದ ‘T’ ರಂಧ್ರವು ಕಾಣುತ್ತಿದೆ. ಇದಕ್ಕೆ ಟೂಲಿಂಗ್ ಹೋಲ್ ಎಂದು ಹೇಳಲಾಗುತ್ತದೆ. ಈ ಟೂಲಿಂಗ್ ಹೋಲ್ ಕಾರ್ಯವಸ್ತುವನ್ನು ಯಾವ ಸರ್ಫೇಸ್ ನಲ್ಲಿ ಒರಗಿರುತ್ತದೆಯೋ, ಅದರಿಂದಲೇ ನಿಯಂತ್ರಿಸಲಾಗುತ್ತದೆ. (L1+/-0.05). ಟೂಲಿಂಗ್ ರಂಧ್ರಗಳ ಈ ಮಾಪನವನ್ನು ನಾವು ನಮ್ಮ ವ್ಯವಸ್ಥೆಗೆ ತಕ್ಕಂತೆ ಕಾರ್ಯವಸ್ತುವಿನ ಅಕ್ಷದಲ್ಲಿ ಅಳವಡಿಸಬಹುದು. ಜಿಗ್ ಪ್ಲೇಟ್ ಈ ಬಾಡಿಯಲ್ಲಿ ಸ್ಕ್ರೂ ಮತ್ತು ಡಾವೆಲ್ ನ ಸಹಾಯದಿಂದ ಅಳವಡಿಸಲಾಗುತ್ತದೆ. ಈ ರಂಧ್ರದಿಂದ ಜಿಗ್ ಪ್ಲೇಟ್ ನಲ್ಲಿ ಬುಶ್ ಗೋಸ್ಕರ ಬೇಕಾಗುವ ರಂಧ್ರಗಳ ಬೋರಿಂಗ್ H7 ಟಾಲರನ್ಸ್ ನಲ್ಲಿ ಮಾಡಲಾಗುತ್ತದೆ. ಜಿಗ್ ಪ್ಲೇಟ್ ಬಾಡಿಯಲ್ಲಿ ಅಳವಡಿಸಿ ಈ ಬೋರಿಂಗ್ ಮಾಡಬೇಕಾಗುತ್ತದೆ. ಇದಕ್ಕೆ ಆನ್ ಅಸೆಂಬ್ಲಿ ಬೋರಿಂಗ್ (L2+/-0.05) ಎಂದು ಹೇಳುತ್ತಾರೆ.
(L2+/-0.05) ಮಾಪನವನ್ನು ತ್ರಿಕೋನದ ಸಹಾಯದಿಂದ ಪಡೆಯಬೇಕಾಗುತ್ತದೆ. ಈ ಮಾಪನಗಳ ನಿಯಂತ್ರಣೆಯನ್ನು ಕಾರ್ಯವಸ್ತುಗಳ ನಿಖರತೆಯ ಆವಶ್ಯಕತೆಗೆ ಅವಲಂಬಿಸಿರುತ್ತದೆ. ಬಾಡಿಯ ಕೆಳಭಾಗದಲ್ಲಿ A ವ್ಯಾಸದ ರಂಧ್ರವನ್ನು ಮಾಡಲಾಗಿದೆ. ಇದರಿಂದಾಗಿ ಲೊಕೇಟರ್ ಅಳವಡಿಸಿದ ನಂತರ ಕೆಳಭಾಗದಲ್ಲಿ ನಟ್ ದೃಢವಾಗಿ ಅಳವಡಿಸಲಾಗುತ್ತದೆ. ಜಿಗ್ ನ ಜೋಡಣೆಯ ಮತ್ತು ಯಂತ್ರಣೆಯ ಆಳದ ಕುರಿತು ವಿಚಾರ ಮಾಡಿದಾಗ ಉಚ್ಚಗುಣಮಟ್ಟ ನೀಡುವ ಜಿಗ್ ತಯಾರಿಸಬಲ್ಲೆವು, ಎಂಬುದು ಗಮನಕ್ಕೆ ಬರುತ್ತದೆ.
ಇದಕ್ಕೋಸ್ಕರ ಈ ಕೆಳಗಿನ ಅಂಶಗಳ ಕುರಿತು ವಿಚಾರ ಮಾಡಬೇಕು.
1. ಟೂಲಿಂಗ್ ರಂಧ್ರವು ಎಲ್ಲಿದೆ.
2. ರೆಸ್ಟ್ ಪ್ಯಾಡ್ ಫಿನಿಶ್ ಮಾಡಿಯೇ ಅಳವಡಿಸಬೇಕು.
3. ಟೂಲಿಂಗ್ ರಂಧ್ರವನ್ನು ತಯಾರಿಸಲು ಅಳವಡಿಸಿರುವ ರೆಸ್ಟ್ ಪ್ಯಾಡ್ ನಿಂದಲೇ ರೆಫರನ್ಸ್ ಪಡೆಯಬೇಕು.
4. D1 ರಂಧ್ರಗಳನ್ನು ತಯಾರಿಸಲು T ಟೂಲಿಂಗ್ ರಂಧ್ರಗಳ ರೆಫರನ್ಸ್ ಪಡೆಯುವುದು ಅತ್ಯಾವಶ್ಯಕವಾಗಿದೆ.
ಡೈಮಂಡ್ ಪಿನ್
ಕಾರ್ಯವಸ್ತುವಿನಲ್ಲಿರುವ ಚಿಕ್ಕದಾದ d ರಂಧ್ರವಿದೆ. ಅದಕ್ಕೆ ಡೈಮಂಡ್ ಪಿನ್ ಅಳವಡಿಸಲಾಗಿದೆ. ಈ ಪಿನ್ ಬಾಡಿಯಲ್ಲಿ ಸೆಟ್ ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿದೆ. ಚೌಕೋನದ ಆಕಾರದಿಂದಾಗಿ ಕಾರ್ಯವಸ್ತುವನ್ನು ತೆಗೆಯುವುದು ಮತ್ತು ಅಳವಡಿಸುವುದು ಸುಲಭವಾಗಿದೆ. ಲೊಕೇಟಿಂಗ್ ಪಿನ್ ನ ಉದ್ದ ಹೆಚ್ಚು ಇರುವುದರಿಂದ ಕಾರ್ಯವಸ್ತು ಮೊದಲಾಗಿ ಲೊಕೇಟಿಂಗ್ ಪಿನ್ ನಲ್ಲಿ ಅಳವಡಿಸಲ್ಪಡುತ್ತದೆ ಮತ್ತು ನಂತರ ಅದು ಡೈಮಂಡ್ ಪಿನ್ ನಲ್ಲಿ ಅಳವಡಿಸುವುದು ಸುಲಭವಾಗುತ್ತದೆ.
ಲೊಕೇಟಿಂಗ್ ಪಿನ್
ಈ ಪಿನ್ ಹೆಕ್ಸ್ ನಟ್ ಮತ್ತು ವಾಶರ್ ನ ಸಹಾಯದಿಂದ ಅಳವಡಿಸಲಾಗಿದೆ. ಈ ಪಿನ್ ನಲ್ಲಿ ಕಾರ್ಯವಸ್ತುವಿನ D ವ್ಯಾಸವನ್ನು ಲೊಕೇಟ್ ಮಾಡಲಾಗಿದೆ. ಹಾಗೆಯೇ ವಿಶೇಷವಾದ ಪಾಮ್ ಗ್ರಿಪ್ ನ ಕಾರ್ಯವಸ್ತುವನ್ನು ದೃಢವಾಗಿ ಹಿಡಿದಿಡಲಾಗಿದೆ. ಅದಕ್ಕೋಸ್ಕರವೇ ಇದರ ಎರಡೂ ಬದಿಗಳಿಗೆ ಕಚ್ಚುಗಳನ್ನು ನೀಡಲಾಗಿದೆ. ಈ ಕಚ್ಚುಗಳನ್ನು ಸಾಫ್ಟ್ ಮಾಡಿ ಇಡಬೇಕಾಗುವುದರಿಂದ ಲೊಕೇಟರ್ ಕೇಸ್ ಹಾರ್ಡ್ ಮಾಡಬೇಕಾಗುತ್ತದೆ. ಕಾರ್ಯವಸ್ತುವಿನಲ್ಲಿ ಯಾವ ರಂಧ್ರಗಳ ಯಂತ್ರಣೆಯನ್ನು ಮಾಡಬೇಕಾಗಿದೆಯೋ, ಅದಕ್ಕಿಂತ ಸ್ವಲ್ಪ ದೊಡ್ಡ ರಂಧ್ರವನ್ನು ಲೊಕೇಟರ್ ನಲ್ಲಿ ಮಾಡಲಾಗಿದೆ ಮತ್ತು ಅದು ನೀಲಿ ಬಣ್ಣದಿಂದ ತೋರಿಸಲಾಗಿದೆ. ಕಾರಣ ರಂಧ್ರಗಳನ್ನು ಆರುಪಾರಾಗಿ ಮಾಡಬೇಕಾಗಿರುವುದರಿಂದ ಡ್ರಿಲ್ ಕಾರ್ಯವಸ್ತುವಿನ ಸ್ವಲ್ಪ ಹೊರಗೆ ಬರುವುದು ಅತ್ಯಾವಶ್ಯಕವಾಗಿದೆ. ಒಂದು ವೇಳೆ ಈ ರಂಧ್ರಗಳನ್ನು ನೀಡದಿದ್ದಲ್ಲಿ ಡ್ರಿಲ್ ಹಾರ್ಡ್ ಲೊಕೇಟರ್ ನಲ್ಲಿ ಅಪ್ಪಳಿಸಿ ತುಂಡಾಗುವ ಸಾಧ್ಯತೆ ಇರುತ್ತದೆ. ಅದರಂತೆ ಕಚ್ಚು ಕೂಡಾ ನೀಲಿ ಬಣ್ಣದಿಂದ ತೋರಿಸಲಾಗಿದೆ. ಈ ಕಚ್ಚಿನ ಕಾರಣಗಳನ್ನು ಈ ಹಿಂದಿನ ಸಂಚಿಕೆಯನ್ನು ತಿಳಿದುಕೊಂಡಿದ್ದೇವೆ. ಈ ರಂಧ್ರಗಳ ಯಂತ್ರಣೆಯನ್ನು ಮಾಡುವಾಗ ಉಂಟಾಗಿರುವ ಬರ್ ನಿಂದಾಗಿ (ಚಿತ್ರ ಕ್ರ. 3) ಕಾರ್ಯವಸ್ತು ಹೊರಗೆ ತೆಗೆಯುವಾಗಿ ಸಿಲುಕುತ್ತದೆ ಮತ್ತು ಅದನ್ನು ತೆಗೆಯುವುದು ತುಂಬಾ ಕಷ್ಟಕರವಾಗುತ್ತದೆ. ಅದಕ್ಕಾಗಿ ಈ ಕಚ್ಚನ್ನು ನೀಡಲಾಗಿದೆ. ಚಿತ್ರ ಕ್ರ. 3 ರಲ್ಲಿ ಡ್ರಿಲ್ಲಿಂಗ್ ಮಾಡುವಾಗ ಬರ್ ಹೇಗೆ ತಯಾರಾಗುತ್ತದೆ ಎಂಬುದು ಇದರಿಂದ ತಿಳಿದಿರಬಹುದು.
ವಿಶೇಷವಾದ ಪಾಮ್ ಗ್ರಿಪ್
ಈ ಪಾಮ್ ಗ್ರಿಪ್ ವಿಶೇಷವಾಗಿರುವ ಕಾರಣವೆಂದರೆ ಈ ಗ್ರಿಪ್ ಅಥವಾ ನಟ್ ಸ್ವಲ್ಪ ತಿರುಗಿಸಿ ಸಡಿಲವಾಗಿ ಮಾಡಿದ ನಂತರ ಓರೆಯಾದಲ್ಲಿ ಬಿಡಿಸಲ್ಪಡುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾದ ಗ್ರಿಪ್ ಅಥವಾ ನಟ್ ನಂತೆಯೇ ಇದನ್ನು ಸಂಪೂರ್ಣವಾಗಿ ತಿರುಗಿಸಿಯೇ ತೆಗೆಯಬೇಕಾಗುವುದಿಲ್ಲ. ಇದರಿಂದಾಗಿ ಕೆಲಸಗಾರರ ವೇಳೆ ಮತ್ತು ಶ್ರಮದಲ್ಲಿ ಉಳಿತಾಯವಾಗುತ್ತದೆ. ವಿಶೇಷವಾದ ಗ್ರಿಪ್ ಬಳಸುವುದರಿಂದ ಮುಂದಿನ ಲಾಭಗಳು ಕಂಡುಬರುತ್ತದೆ. (ಚಿತ್ರ ಕ್ರ. 4)
1. ಸ್ಪ್ಯಾನರ್ ಬಳಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಕಾರ್ಯವಸ್ತುವನ್ನು ದೃಢವಾಗಿ ಹಿಡಿಯುವುದು ಮತ್ತು ಸಡಿಲ ಮಾಡುವುದು, ಇದಕ್ಕೋಸ್ಕರ ಬೇಕಾಗುವ ಸಮಯದಲ್ಲಿ ಉಳಿತಾಯವಾಗುತ್ತದೆ.
2. ಕಾರ್ಯವಸ್ತುವನ್ನು ದೃಢವಾಗಿ ಹಿಡಿದಿಡಲು ಕೈಯಿಂದ ಶಕ್ತಿಯನ್ನು ಬಳಸಿದ್ದರಿಂದ ಅಗತ್ಯವಿಲ್ಲದಿದ್ದಾಗ ವಿನಾಕಾರಣ ಶಕ್ತಿಯನ್ನು ಬಳಸಲಾಗುವುದಿಲ್ಲ.
3. ಈ ಗ್ರಿಪ್ ಹೆಚ್ಚೆಂದರೆ ಅರ್ಧದಿಂದ ಒಂದು ಕಚ್ಚುಗಳಷ್ಟು ತಿರುಗಿಸಿ ಮತ್ತು ಓರೆಯಾಗಿ ಮಾಡಿ ಸಹಜವಾಗಿ ತೆಗೆಯುವುದು ಸಾಧ್ಯವಾಗಿದೆ. ಅದಕ್ಕೋಸ್ಕರವೇ ಇದಕ್ಕೆ ಕ್ವಿಕ್ ಕ್ಲ್ಯಾಂಪಿಂಗ್ ಗ್ರಿಫ್ ಅಥವಾ ನಟ್ ಎಂದು ಕರೆಯುತ್ತಾರೆ.
ವಿಶೇಷವಾದ ಸ್ಲಿಪ್ ಬುಶ್
ಇಲ್ಲಿ ಪ್ರಮಾಣೀಕೃತವಾದ (ಸ್ಟ್ಯಾಂಡರ್ಡ್) ಬುಶ್ ಬಳಸುವುದು ಅಸಾಧ್ಯವಾಗಿದೆ. ಮೇಲೆ ತಿಳಿದುಕೊಂಡಂತೆ ಡ್ರಿಲ್ ಕಾರ್ಯವಸ್ತುವಿನಲ್ಲಿ ಒರಗುವಾಗ ಅದರಲ್ಲಿ ಅಸಂತುಲಿತ ಶಕ್ತಿಯು ಕೆಲಸ ನಿರ್ವಹಿಸುತ್ತದೆ ಮತ್ತು ಇದರಿಂದಾಗಿ ಡ್ರಿಲ್ ತುಂಡಾಗುತ್ತದೆ. ಈ ಸಮಸ್ಯೆಯನ್ನು ದೂರ ಮಾಡಲು ಬುಶ್ ಸಾಧ್ಯವಾದಷ್ಟು ಮಟ್ಟಿಗೆ ಕಾರ್ಯವಸ್ತುವಿನ ಸರ್ಫೇಸ್ ನ ಸಮೀಪ (L3, ಚಿತ್ರ ಕ್ರ. 1) ಇರುವುದು ಅತ್ಯಾವಶ್ಯಕವಾಗಿದೆ. ಪ್ರಮಾಣೀಕೃತವಾದ ಬುಶ್ ನ ಕೆಳಭಾಗದ ಸರ್ಫೇಸ್ ಅಕ್ಷಕ್ಕೆ ಸಮಾನಾಂತರವಾಗಿ ಅಳವಡಿಸುವಂತಹದ್ದು ಆಗಿರುವುದರಿಂದ ಅದು ಕಾರ್ಯವಸ್ತುವಿನ ಹತ್ತಿರ ತಲುಪಿ ತಡೆಯಲ್ಪಡುತ್ತದೆ ಮತತು ಇದರಿಂದಾಗಿ ಡ್ರಿಲ್ ಗೆ ಯೋಗ್ಯವಾಗ ಆಧಾರ ಸಿಗುವುದಿಲ್ಲ. ಇದೇ ಕಾರಣಕ್ಕೋಸ್ಕರ ಬುಶ್ ನ ಕೆಳಭಾಗಕ್ಕೆ ಓರೆಯಾಗಿ ಮಾಡಿರುವ ತುಂಡಿನಿಂದಾಗಿ ಬುಶ್ ನ ಕೆಳಭಾಗದ ಸರ್ಫೇಸ್ ಕಾರ್ಯವಸ್ತುವಿನ ಸರ್ಫೇಸ್ ಗೆ ಸಮಾನಾಂತರವಾಗುತ್ತದೆ. ಈ ಜಾಗದಲ್ಲಿ ಅಳವಡಿಸಲು ಪ್ರಮಾಣೀಕೃತ ಬುಶ್ ಗಳು ಸಿಗುವುದಿಲ್ಲ. ಬುಶ್ ಗಳ ಹೊರಗಿನ ಗೈಡ್ ವ್ಯಾಸದಲ್ಲಿ ಗ್ರೈಂಡಿಂಗ್ ಕಡಿಮೆ ಮಾಡಲು ರಿಲೀಫ್ ನೀಡಲಾಗಿದೆ. ಹಾಗೆಯೇ ಡ್ರಿಲ್ ಗೈಡ್ ಮಾಡಲು ಇರುವ ಬುಶ್ ನ ವ್ಯಾಸವು F7 ಟಾಲರನ್ಸ್ ನಲ್ಲಿ ನಿಯಂತ್ರಿಸಲ್ಪಟ್ಟಿರುತ್ತದೆ. ಈ ವ್ಯಾಸಕ್ಕಿಂತ ದೊಡ್ಡ ವ್ಯಾಸವು ಬುಶ್ ನ ಒಳಭಾಗದಲ್ಲಿ ಕಂಡುಬರುತ್ತದೆ. ಕಾರಣ ಡ್ರಿಲ್ ಗೈಡ್ ಮಾಡುವ ವ್ಯಾಸದ ಮಾಪನವು ಗ್ರೈಂಡಿಂಗ್ ನಿಂದಲೇ ಸಿಗಬೇಕಾಗುತ್ತದೆ. ಈ ವ್ಯಾಸವು ಚಿಕ್ಕದಾಗಿರುವುದರಿಂದ ಅದಕ್ಕೆ ಹೆಚ್ಚು ಉದ್ದದ ತನಕ ಗ್ರೈಂಡ್ ಮಾಡುವಲ್ಲಿ ಮಿತಿಗಳಿರುತ್ತವೆ. ಅದಕ್ಕೋಸ್ಕರ ಕಾರ್ಯವಸ್ತುವಿನ ಸಮೀಪ ಡ್ರಿಲ್ ಗೈಡ್ ಮಾಡಲಾಗುತ್ತದೆ ಮತ್ತು ಉಳಿದಿರುವ ವ್ಯಾಸಕ್ಕೆ ರಿಲೀಫ್ ನೀಡಲಾಗುತ್ತದೆ. ಈ ಬುಶ್ ನ ಉದ್ದವೂ ತುಂಬಾ ಸಲ ಸ್ವಲ್ಪ ಜಾಸ್ತಿಯೇ ಇರುತ್ತದೆ. ಕಾರ್ಯವಸ್ತುವಿನ ಸರ್ಫೇಸ್ ಓರೆಯಾಗಿದ್ದಲ್ಲಿ ಅಥವಾ ಅಂಕುಡೊಂಕಾಗಿದ್ದಲ್ಲಿ ಈ ರೀತಿಯ ಮುತುವರ್ಜಿಯನ್ನು ವಹಿಸುವುದು ಅತ್ಯಾವಶ್ಯಕವಾಗಿದೆ. ಈ ಪರಿಸ್ಥಿತಿಯಲ್ಲಿ ಒಂದು ವೇಳೆ ಒಂದೇ ರಂಧ್ರವಿದ್ದಲ್ಲಿ ಸ್ಲಿಪ್ ಬುಶ್ ನೀಡುವುದು ಅತ್ಯಾವಶ್ಯಕವಾಗಿರುತ್ತದೆ. ಕಾರಣ ಕಾರ್ಯವಸ್ತು ತೆಗೆಯಲು ಆ ಬುಶ್ ಅಡಟಣೆಯನ್ನುಂಟು ಮಾಡುವುದಿಲ್ಲ.
ಜಿಗ್ ಪ್ಲೇಟ್
ಜಿಗ್ ಪ್ಲೇಟ್ ನಲ್ಲಿ ಲೈನರ್ ಅಳವಡಿಸಲಾಗಿರುತ್ತದೆ. ಈ ಬೋರಿಂಗ್ (D1) ಮಾಡಲು ಜಿಗ್ ಪ್ಲೇಟ್, ಬಾಡಿಯಲ್ಲಿ ಅಳವಡಿಸುತ್ತಾರೆ. ಮೊದಲಾಗಿ ರೆಸ್ಟ್ ಪ್ಯಾಡ್ ಅಳವಡಿಸಿ ಅದರ ಸರ್ಫೇಸ್ ನಿಂದ ಟೂಲಿಂಗ್ ನ ರಂಧ್ರದ L1 ಪರಿಮಾಣಗಳನ್ನು ನಿಯಂತ್ರಿಸಲಾಗುತ್ತದೆ. ನಂತರ ಜಿಗ್ ಪ್ಲೇಟ್ ನಲ್ಲಿ ಬೋರಿಂಗ್ (D1) ಮಾಡಲಾಗುತ್ತದೆ ಮತ್ತು L2 ಪರಿಮಾಣಗಳನ್ನು ನಿಯಂತ್ರಿಸಲಾಗುತ್ತದೆ. ಈ ರೀತಿಯ ಯಂತ್ರಣೆಗೆ ಆನ್ ಅಸೆಂಬ್ಲಿ ಆಪರೇಶನ್ ಎಂಬು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಯಂತ್ರಣೆ ಜಿಗ್ ಬೋರಿಂಗ್ ಅಥವಾ ಬೋಕೋ (BOKO) ಮಶಿನ್ ನಲ್ಲಿ ಮಾಡಲಾಗುತ್ತದೆ. ಜಿಗ್ ಪ್ಲೇಟ್ ಎರಡೂ ಬದಿಗಳಲ್ಲಿ ಗ್ರೈಂಡ್ ಮಾಡಲಾಗುತ್ತದೆ.
ರೆಸ್ಟ್ ಪ್ಯಾಡ್
ಯಾವ ಹಾರ್ಡ್ ಪ್ಲೇಟ್ ನಲ್ಲಿ ಕಾರ್ಯವಸ್ತುವನ್ನು ಅಳವಡಿಸಿ ಯಂತ್ರಣೆಯನ್ನು ಮಾಡಲಾಗುತ್ತದೆಯೋ, ಅದಕ್ಕೆ ರೆಸ್ಟ್ ಪ್ಯಾಡ್ ಎಂದು ಹೇಳುತ್ತಾರೆ. ಇವುಗಳಿಗೆ ಹಾರ್ಡ್ ಮಾಡಿ ಗ್ರೈಂಡಿಂಗ್ ಮಾಡಲಾಗಿರುತ್ತದೆ. ಅದೇ ರೀತಿಯಲ್ಲಿ ಇದರ ಬಾಡಿ +/-0.01 ಮಿ.ಮೀ.ನಿಂದ +/-0.05 ಮಿ.ಮೀ. ತನಕ ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸಲಾಗುತ್ತದೆ. ಮೇಲಿನ ಉಲ್ಲೇಖದ ಪ್ರಕಾರ ಟೂಲಿಂಗ್ ರಂಧ್ರದ L1 ಈ ಪರಿಮಾಣಗಳನ್ನು ರೆಸ್ಟ್ ಪ್ಯಾಡ್ ನಿಂದ ನಿಯಂತ್ರಿಸಿದ್ದರಿಂದ ಮತ್ತು ಒಂದು ವೇಳೆ ಯಾವುದೇ ಕಾರಣದಿಂದ ಪ್ಯಾಡ್ ಬದಲಾಯಿಸಿದರೂ ಕೂಡಾ ಕಾರ್ಯವಸ್ತುವಿನ ಪರಿಮಾಣಗಳಲ್ಲಿ ವ್ಯತ್ಯಾಸವು ಉಂಟಾಗುವುದಿಲ್ಲ.
ರೆಸ್ಟ್ ಪ್ಯಾಡ್ ಆಗಾಗ ಬಳಸುವುದರಿಂದ ಸವೆಯುತ್ತದೆ, ಹಾಳಾಗುತ್ತದೆ ಅಥವಾ ತುಂಡಾಗುತ್ತದೆ. ಈ ಪ್ಯಾಡ್ ನ ಹೆಚ್ಚುವರಿಯಾಗಿ ತಯಾರಿಸಿ ಇಟ್ಟಲ್ಲಿ ತಕ್ಷಣ ಬದಲಾಯಿಸುವುದು ಸಾಧ್ಯ ಮತ್ತು ಉತ್ಪಾದನೆಯೂ ನಿಲ್ಲುವುದಿಲ್ಲ.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು, ARAI SAE
9011018388
ajitdeshpande21@gmail.com
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.