ಮಗಳು ಮೆಕ್ಯಾನಿಕಲ್ ಇಂಜಿನಿಯರ್ ಆಗಬಹುದೇ.. ಇಲ್ಲವೇ... ಖಂಡಿತವಾಗಿಯೂ ಆಗಬಹುದು. ಈ ಲೇಖನದ ಪ್ರಾರಂಭವನ್ನು ಉದ್ದೇಶಪೂರ್ವಕವಾಗಿಯೇ ಒಂದು ವಿಶಿಷ್ಟವಾದ ಪ್ರಶ್ನೆಯಿಂದಲೇ ಮಾಡಿರುತ್ತೇವೆ. 8 ಮಾರ್ಚಿ ಈ ದಿನವನ್ನು ಎಲ್ಲಡೆಯೂ ವಿಶ್ವ ಮಹಿಳಾ ದಿನವೆಂದು ಆಚರಿಸಲಾಗುತ್ತದೆ. ಇದರ ಕುರಿತು ಅಂತರಜಾಲದಲ್ಲಿ ಮಾಹಿತಿಯನ್ನು ಹುಡುಕುತ್ತಿರುವಾಗ ‘Can a girl become a Mechanical Engineer?’ ಎಂಬ ಆಚ್ಚರಿಯನ್ನು ಮೂಡಿಸುವ ಆದರೆ ವಿಚಿತ್ರವಾದ ಪ್ರಶ್ನೆಯೊಂದು ಕಂಪ್ಯೂಟರ್ ನ ಸ್ಕ್ರೀನ್ ನಲ್ಲಿ ಮೂಡಿಬಂತು. ಹಾಗೆ ನೋಡಿದರೆ ಮಹಿಳೆಯರು ಕೆಲಸ ನಿರ್ವಹಿಸದೇ ಇರುವ ಯಾವುದೇ ಕ್ಷೇತ್ರವು ಕಂಡುಬರುವುದಿಲ್ಲ. ಇದು ಮಹಿಳೆಯರ ಕೆಲಸ ಮತ್ತು ಇದು ಪುರುಷರ ಕೆಲಸ ಎಂಬುದರಲ್ಲಿರುವ ಅಂತರವು ಇಲ್ಲದಂತಾಗಿರುವುದು ಗಮನಾರ್ಹವಾದ ಅಂಶ. ‘ಅವರು’ (ಅಂದರೆ ಪುರುಷರು) ಎಂದು ತಿಳಿದಿರುವ ಕ್ಷೇತ್ರದಲ್ಲಿ ‘ಅವಳ’ (ಮಹಿಳೆಯರ) ಸ್ಥಾನವು ತುಂಬಾ ದೃಢವಾಗುತ್ತಿರುವುದು ಸಂತಸವನ್ನುಂಟು ಮಾಡುತ್ತಿದೆ. ಇದರಿಂದಾಗಿಯೇ ಕಂಪ್ಯೂಟರ್ ನ ಸ್ಕ್ರೀನ್ ಮೇಲೆ ಬಂದಿರುವ ಪ್ರಶ್ನೆಯಿಂದಾಗಿ ವಿಚಾರ ಮಾಡುವ ಸ್ಥಿತಿಯು ನಿರ್ಮಾಣವಾಯಿತು.
ಬಾಹ್ಯಾಕಾಶ, ವಿಮಾನ, ಬ್ಯಾಂಕಿಂಗ್, ಶಿಕ್ಷಣ, ಕೃಷಿಯಿಂದ ಹಿಡಿದು ಕಟ್ಟಡಗಳ ನಿರ್ಮಾಣಗಳಂತಹ ಉದ್ಯೋಗಗಳಲ್ಲಿ ಅನೇಕ ಉತ್ಪಾದನೆ ಮಾಡುತ್ತಿರುವ ಮತ್ತು ಸೇವೆಯನ್ನು ನೀಡುತ್ತಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕೆಲಸ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಅವಳು (ಈ ಲೇಖನದಲ್ಲಿ ಅವಳು ಎಂಬ ಶಬ್ದವನ್ನು ಮಹಿಳೆ ಎಂಬ ಶಬ್ದದ ಅರ್ಥಕ್ಕೋಸ್ಕರ ಬಳಸಲಾಗಿದೆ) ತನ್ನ ಕರ್ತವ್ಯವನ್ನು ಸಾಬೀತು ಪಡಿಸಿದ್ದು ಅವಳು ಕ್ರಿಯಾಶೀಲತೆಯಿಂದ ಕಾರ್ಯನಿರತಳಾಗಿದ್ದಾಳೆ. ಯಶಸ್ವಿಯಾಗಿದ್ದಾಳೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಯೋಗ್ಯವಾಗಿ ನಿಭಾಯಿಸಿ ಯಶಸ್ಸನ್ನು ಪಡೆದಿರುವ ಪ್ರತಿಯೊಬ್ಬ ಮಹಿಳೆಯರಿಗೂ ಉದ್ಯಮ ಪ್ರಕಾಶನದ ವತಿಯಿಂದ ವಿಶ್ವ ಮಹಿಳಾ ದಿನದ ಶುಭಾಶಯಗಳು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರ ಎಂದರೆ ಕೇವಲ ಪುರುಷರ ಏಕಸ್ವಾಮ್ಯತೆ ಅಥವಾ ಏಕಾಧಿಕಾರ ಎಂಬ ತಿಳುವಳಿಕೆಯು ಎಲ್ಲೆಡೆಯೂ ಹರಡಿತ್ತು. ದೊಡ್ಡ ದೊಡ್ಡ ಮಶಿನ್ ಮತ್ತು ಮಹಿಳೆಯರ ಶಾರೀರಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟಾಗ ಈ ಕ್ಷೇತ್ರವು ಮಹಿಳೆಯರಿಗೆ ಅಷ್ಟೇನು ಯೋಗ್ಯವಿಲ್ಲ ಅಥವಾ ಅಲ್ಲಿರುವ ಕೆಲಸಗಳನ್ನು ಅವಳು ಮಾಡಬಲ್ಲಳೇ... ಪುರುಷರಿಗೆ ಸರಿಸಮಾನವಾಗಿ ಅವಳಿಗೆ ಕೆಲಸ ಮಾಡುವುದು ಸಾಧ್ಯವೇ, ಅವಳಿಗೆ ಕೆಲಸ ನಿರ್ವಹಿಸಲು ಇದು ಯೋಗ್ಯವಾದ ಜಾಗವೇ, ಎಂಬಿತ್ಯಾದಿ ಅನೇಕ ಪ್ರಶ್ನೆಗಳನ್ನು ಅಥವಾ ತಪ್ಪು ಕಲ್ಪನೆಗಳನ್ನು ಹಲವಾರು ವರ್ಷಗಳಿಂದ ಕೇಳಲಾಗುತ್ತಿತ್ತು. ಆದರೆ ಇವೆಲ್ಲವನ್ನೂ ಸುಳ್ಳಾಗಿರಿಸಿ ಇಂದು ಅನೇಕ ಮಹಿಳೆಯರು ಇಂಜಿನಿಯರ್ ಪದವಿಯನ್ನು ಪಡೆದು ಶಾಪ್ ಫ್ಲೋರ್ ನಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ.
ನಮ್ಮಲ್ಲಿರುವ ನಿರ್ಮಿತಿಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿವಿಧ ಆಟೊಮೊಬೈಲ್ ಕಂಪನಿಗಳಲ್ಲಿ ಜಾಬ್ ಹ್ಯಾಂಡಲಿಂಗ್, ಮಶಿನ್ ಆಪರೇಟರ್, ಡಿಸೈನಿಂಗ್, ಮೆಜರ್ ಮೆಂಟ್ ವಿಭಾಗ, ಟೆಸ್ಟಿಂಗ್ ವಿಭಾಗ, ಸಾಫ್ಟೆ ವೇರ್, ಆಟೊಮೇಶನ್, ಆಪರೇಶನ್, ಸಂಶೋಧನೆ ಮತ್ತು ಅಭಿವೃದ್ಧಿ, ಸೇಲ್ಸ್ ಈ ರೀತಿಯ ಎಲ್ಲ ವಿಭಾಗಗಳಲ್ಲಿ ವ್ಯವಸ್ಥಾಪಕರಾಗಿ, ಮುಖ್ಯ ಅಧಿಕಾರಸ್ಥೆಯಾಗಿ, ಶಾಪ್ ನಲ್ಲಿ ಕೆಲಸ ಮಾಡುವವಳಾಗಿ ಇಂತಹ ಅನೇಕ ವಿಧದಲ್ಲಿ ಅವಳ ಅಸ್ತಿತ್ವವು ದಿನಂಪ್ರತಿ ವಿಸ್ತಾರಗೊಳ್ಳುತ್ತಿದೆ. ಮಹಿಳೆಯರಿಗೆ ಪೂರಕವಾದ ಧೋರಣೆಗಳನ್ನು ಅನೇಕ ರಾಷ್ಟ್ರೀಯ ಮತ್ತು ಆಂತರರಾಷ್ಟ್ರೀಯ ಕಂಪನಿಗಳಲ್ಲಿ ಇಂಜಿನಿಯರ್ ಮಹಿಳೆಯ ಸಂಖ್ಯೆಯು ವೃದ್ಧಿಸುತ್ತಿರುವುದು ಕಂಡುಬರುತ್ತಿದೆ. ಕೆಲಸದಲ್ಲಿ ಮಹಿಳೆಯರ ಎಕಾಗ್ರತೆ, ಅಚ್ಚುಕಟ್ಟುತನ, ನಿರಂತರತೆ, ಮಲ್ಟಿ ಟಾಸ್ಕಿಂಗ್ ಕೌಶಲ್ಯ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಇವೆಲ್ಲವುಗಳಿಂದಾಗಿ ಅನೇಕ ಕಂಪನಿಗಳು ಮಹಿಳೆಯರಿಗೆ ಪ್ರಾಧಾನ್ಯತೆಯನ್ನು ನೀಡುತ್ತಾ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದ್ದಾರೆ. ಮಹಿಳೆಯರೂ ಮುಂದೆ ಬಂದು ಎಲ್ಲ ಜವಾಬ್ದಾರಿಗಳನ್ನು ಯೋಗ್ಯವಾಗಿ ಸ್ವೀಕರಿಸುತ್ತಿದ್ದಾರೆ.

ಭಾರತದಲ್ಲಿರುವ ಆಟೊಮೋಬೈಲ್ ಕಂಪನಿಗಳಲ್ಲಿ ಮ್ಯಾನಿಫ್ಯಾಕ್ಚರಿಂಗ್ ನೊಂದಿಗೆ ಇನ್ನಿತರ ಮಹತ್ವದ ಜವಾಬ್ದಾರಿಗಳನ್ನು ಅವಳಿಗೆ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್, ಮಹೀಂದ್ರಾ ಅ್ಯಂಡ್ ಮಹೀಂದ್ರಾ, ಐಶರ್, ಹೀರೋ ಮೋಟೋಕಾರ್ಪ್ ಮುಂತಾದ ಅನೇಕ ಕಂಪನಿಗಳ ಶಾಪ್ ಫ್ಲೋರ್ ನಲ್ಲಿ ಮಹಿಳೆಯರ ಸಹಭಾಗಿತ್ವವು ದಿನಂಪ್ರತಿ ವೃದ್ಧಿಸುತ್ತಿರುವುದು ಗಮನಾರ್ಹವಾದ ಅಂಶವಾಗಿದೆ. ಟಾಟಾ ಈ ಕಂಪನಿಯಲ್ಲಿ 2025 ಕೊನೆಯ ತನಕ ಶಾಫ್ ಫ್ಲೋರ್ ನಲ್ಲಿ ಮಹಿಳೆಯರ ಸಂಖ್ಯೆಯನ್ನು 10 ಶೇಕಡಾ ಹೆಚ್ಚಿಸಲಾಗುತ್ತದೆ. ತಾಂತ್ರಿಕ ಅಥವಾ ಮ್ಯಾನಿಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅವರಿಗೆ ಆಗಾಗ ತರಬೇತಿಯನ್ನು ನೀಡಿದಲ್ಲಿ, ಸುರಕ್ಷಿತತೆಯ ದೃಷ್ಟಿಕೋನದಲ್ಲಿ ಅವರಿಗೆ ಖಾತರಿಯನ್ನು ನೀಡಿದಲ್ಲಿ, ವಿವಿಧ ಸದಾವಕಾಶಗಳನ್ನು ಉಪಲಬ್ಧ ಮಾಡಿಕೊಟ್ಟಲ್ಲಿ ಈ ಅಂಕೆ-ಸಂಖ್ಯೆಗಳು ಖಂಡಿತವಾಯಿತು ಹೆಚ್ಚಾಗಬಹುದು. ಕಳೆದ ಅನೇಕ ವರ್ಷಗಳಿಂದ ಮಹಿಳೆಯರು ಶಾಪ್ ಫ್ಲೋರ್ ನಲ್ಲಿ ಕೆಲಸ ಮಾಡುತ್ತಿದ್ದರೂ ಕೂಡಾ ಅವರು ಕೇವಲ ಜನರಲ್ ಶಿಫ್ಟ್ ನಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಬದಲಾವಣೆಗಳನ್ನು ಮಾಡುತ್ತಾ ಇನ್ನಿತರ ಶಿಫ್ಟ್ ಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮಾಡಲು ಟಾಟಾ ಕಂಪನಿಯು ಪ್ರಯತ್ನ ನಡೆಸುತ್ತಿದೆ. ಸದ್ಯಕ್ಕೆ ಟಾಟಾ ಕಂಪನಿಯಲ್ಲಿ 52 ಮಹಿಳೆಯರು ವಿವಿಧ ಶಿಫ್ಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹೀಂದ್ರಾ ಅ್ಯಂಡ್ ಮಹೀಂದ್ರಾ ಈ ಕಂಪನಿಯು 2016 ರಲ್ಲಿ 23 ಮಹಿಳೆಯರಿಗೆ ಅವಕಾಶವನ್ನು ಕಲ್ಪಿಸಿ ಈ ಕೆಲಸದ ಪ್ರಾರಂಭವನ್ನು ಮಾಡಿದ್ದಾರೆ. ಈಗ ಈ ಸಂಖ್ಯೆಯು ಸುಮಾರು 650 ಕ್ಕಿಂತ ಹೆಚ್ಚಾಗಿದೆ. ಐಶರ್ ಮೋಟರ್ ಇವರ ರಾಯಲ್ ಎನ್ಫೀಲ್ಡ್ ಈ ಟೂ ವಿಲರ್ ವಿಭಾಗದಲ್ಲಿ 140 ಮಹಿಳೆಯರು ಸಂಪೂರ್ಣವಾಗಿ ಇಂಜಿನ್ ನ ಅಸೆಂಬ್ಲಿಯ ಲೈನ್ ನಿರ್ವಹಿಸುತ್ತಿದ್ದಾರೆ. ಹೀರೋ ಮೋಟೋಕಾರ್ಪ್ ಇವರ ಶಾಪ್ ಫ್ಲೋರ್ ನಲ್ಲಿ ಮಹಿಳೆಯ ಭಾಗವಹಿಸುವಿಕೆಯನ್ನು ವೃದ್ಧಿಸಲು 'ತೆಜಸ್ವಿನಿ' ಎಂಬ ಯೋಜನೆಯನ್ನು ಕಾರ್ಯಗತಗೊಳಿಸಲಾಗಿತ್ತು. ಇದರಲ್ಲಿ ಅಸೆಂಬ್ಲಿ ಆಪರೇಶನ್ ನಲ್ಲಿ ವಿವಿಧ ಹಂತಗಳಲ್ಲಿ 160 ಕ್ಕಿಂತಲೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಬಜಾಜ್ ಆಟೊ ಇವರ ಚಾಕಣ್ (ಪುಣೆಯ ಹತ್ತಿರ) ಮತ್ತು ಪತಂಗನಗರ ಎಂಬಲ್ಲಿರುವ ಪ್ಲಾಂಟ್ ನಲ್ಲಿ ‘ವುಮನ್ ಓನ್ಲಿ’ ಅಸೆಂಬ್ಲಿ ಲೈನ್ ನೋಡಲು ಸಿಗುತ್ತದೆ. ಸುಮಾರು 400 ಕ್ಕಿಂತಲೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ದೊಡ್ಡ ಕಂಪನಿಗಳೊಂದಿಗೆ ಸಾತಾರಾ (ಮಹಾರಾಷ್ಟ್ರ) ಎಂಬಲ್ಲಿರುವ ಖುಟಾಳೆ ಇಂಜಿನಿಯರಿಂಗ್ ಅಥವಾ ಪುಣೆಯಲ್ಲಿರುವ ಕೆಟಿಎ ಸ್ಪಿಂಡಲ್ ಟೂಲಿಂಗ್ಸ್ ಇಂತಹ ಲಘು, ಮಧ್ಯಮ ಉದ್ಯಮಗಳಲ್ಲಿಯೂ, ಹಾಗೆಯೇ ಸ್ಪೈಸರ್ ಇಂಡಿಯಾ ಇಂತಹ ಮಲ್ಟೀ ನ್ಯಾಶನಲ್ ಕಂಪನಿಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶಾಪ್ ಫ್ಲೋರ್ ನಲ್ಲಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಪ್ರಗತಿ ಆಟೊಮೇಶನ್ ಇವರ ಬೆಂಗಳೂರು, ಬೆಳಗಾವಿ ಮತ್ತು ಕೊಲ್ಹಾಪುರದ ಕಾರ್ಖಾನೆಗಳಲ್ಲಿಯೂ ಟೆಸ್ಟಿಂಗ್, ಅಸೆಂಬ್ಲಿ, ಪ್ಯಾಕಿಂಗ್ ಇಂತಹ ವಿಭಾಗಗಳಲ್ಲಿಯೂ ಮಹಿಳೆಯಲು ಕಾರ್ಯನಿರತಗಾಗಿದ್ದಾರೆ.
ಸಂಪ್ರದಾಯದ ಜಾಲದಲ್ಲಿ ಸಿಲುಕದೇ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಯ ಕುರಿತು ಇರುವ ಅನುಮಾನಗಳಿಗೆ ಬಗ್ಗದೇ ಶಾಪ್ ಫ್ಲೋರ್ ನಲ್ಲಿ ಕೆಲಸ ಮಾಡುವ ಮಹಿಳೆಯರು ಕೂಡಾ ಪ್ರಾರಂಭದಲ್ಲಿ ಮಶಿನ್ ನಲ್ಲಿ ಕೆಲಸ ಮಾಡುವಲ್ಲಿ ಸಂದೇಹವನ್ನು ಹೊಂದಿದ್ದರು. ಆದರೆ ಈ ಕ್ಷೇತ್ರದ ಕುರಿತಾದ ಶಿಕ್ಷಣವನ್ನು ಪಡೆದಿರುವುದರಿಂದ ತಮಗೂ ಈ ಕೆಲಸವನ್ನು ಮಾಡುವ ಸಾಮರ್ಥ್ಯವಿದೆ, ಎಂಬ ವಿಚಾರವನ್ನು ಮಾಡಿ ಈ ಸವಾಲುಗಳನ್ನು ಸ್ವೀಕರಿಸಿದರು ಮತ್ತು ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಇದಕ್ಕೆ ಸೂಕ್ತವಾದ ಉದಾಹರಣೆ ಎಂದರೆ, ಅಶಿಕ್ಷಿತ ಮಹಿಳೆಯರು ಯೋಗ್ಯ ತರಬೇತಿಯನ್ನು ಪಡೆದು ಇಂದು ಪುಣೆಯಲ್ಲಿರುವ ಒಂದು ಕಾರ್ಖಾನೆಯಲ್ಲಿ ಉತ್ಪಾದನೆಯ ಅಂತಿಮ ಪರೀಕ್ಷಣೆಯನ್ನು ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಯೋಗ್ಯ ತರಬೇತಿ ಮತ್ತು ಸಾಮರ್ಥ್ಯದಿಂದ ಅವಳು ತನ್ನ ಕ್ಷೇತ್ರ ಮತ್ತು ತನ್ನ ಭವಿಷ್ಯತ್ಕಾಲದ ಕುರಿತು ಸಾಕಷ್ಟು ಜಾಗರೂಕತೆಯನ್ನು ವಹಿಸಿ ಸಕ್ರಿಯಳಾಗಿದ್ದಾಳೆ.
ಅನೇಕ ವಿಧದ ಕೆಲಸಗಳಿಗೋಸ್ಕರ ಇಂದಿಗೂ ಅವಳಿಗೆ ಸಾಕಷ್ಟು ಸಾಮರ್ಥ್ಯ ಬರಲು ಕಂಪನಿಗಳಲ್ಲಿ ಅವಳಿಗೆ ಪ್ರೋತ್ಸಾಹನೆಯನ್ನು ವಿವಿಧ ಹಂತಗಳಲ್ಲಿ ನೀಡುವುದನ್ನು ಪ್ರಾರಂಭಿಸಲಾಗಿದೆ. ‘What’s good for woman is good for society and what’s good for Society is good for Business,’ ಎಂಬ ವಾಕ್ಯವು ಓದುವಿಕೆಯಲ್ಲಿ ಗಮನಕ್ಕೆ ಬಂತು. ಇದರ ಅರ್ಥವೇ ಇದು, ಅವಳಿಗಾಗಿ ಯಾವುದು ಒಳ್ಳೆಯದೋ, ಅದು ಸಮಾಜಕ್ಕೆ ಒಳ್ಳೆಯದು, ಸಮಾಜಕ್ಕೆ ಯಾವುದು ಒಳ್ಳೆಯದೋ ಅದು ವ್ಯವಸಾಯಕ್ಕೆ ಒಳ್ಳೆಯದು. ಶಾಪ್ ಫ್ಲೋರ್ ನಲ್ಲಿ ಮಹಿಳೆಯರ ಸಹಭಾಗಿತ್ವವು ಗಮನಾರ್ಹವಾಗಿ ವೃದ್ಧಿಸಿದ್ದರಿಂದ ಅಲ್ಲಿರುವ ಕೆಲಸದ ಸಂಸ್ಕೃತಿಯಲ್ಲಿ ಖಂಡಿತವಾಗಿಯೂ ಸುಧಾರಣೆಗಳಾಗುತ್ತವೆ, ಎಂಬ ಅನಿಸಿಕೆಗಳನ್ನು, ಕಾರ್ಖಾನೆಯಲ್ಲಿ ಮಶಿನ್ ಆಪರೇಟರ್ ಎಂದು ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ವ್ಯಕ್ತಪಡಿಸಿದ್ದಾರೆ.
ನಾವು ಎಲ್ಲಿದ್ದೇವೆ ಮತ್ತು ನಿಖರವಾಗಿ ಏನು ಮಾಡಬೇಕು, ಎಂಬ ತಿಳಿವಳಿಕೆಯು ಪ್ರತಿಯೊಬ್ಬರಿಗಿದ್ದಲ್ಲಿ ಅವಳ ಉನ್ನತಿಯ ದಾರಿಗೆ ಯಾರೂ ಅಡ್ಡಿ ಪಡಿಸುವುದೂ ಸಾಧ್ಯವಿಲ್ಲ. ಇದಕ್ಕೋಸ್ಕರ ಅವಳು ಆತ್ಮವಿಶ್ವಾಸದಿಂದ ತಾನೇ ಪ್ರಾರಂಭಿಸಿ ಬೇರೆಯೇ ದಿಕ್ಕಿನಲ್ಲಿ ವಿಚಾರ ಮಾಡಬೇಕು. ಇಚ್ಛೆ ಇರುವಲ್ಲಿ ದಾರಿಯು ಕಾಣುತ್ತದೆ, ಕೇವಲ ಸನ್ನದ್ಧರಾಗಿರಬೇಕು. ಇಂದಿನ ವಿಶ್ವ ಮಹಿಳಾ ದಿನದ ಪ್ರಯುಕ್ತ ಈ ಜಾಗೃತಿಯು ಪ್ರತಿಯೊಬ್ಬರಲ್ಲಿ ಮೂಡಿಬಂದರೆ, ಈ ದಿನದ ಗುರಿಯು ಸಫಲವಾಗುತ್ತದೆ.
9359104060
subeditor@udyamprakashan.in
ವಾಸುದೇವ ಡಿ., ಪ್ರಿಯಾಂಕಾ ಗುಲದಗಡ್, ಸಯಿ ವಾಬಳೆ
ಸಹಾಯಕ ಸಂಪಾದಕರು, ಲೋಹಕಾರ್ಯ