‘ಲೋಹಕಾರ್ಯ’ದ ಅಗಸ್ಟ್ 2020 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿರುವ ಲೇಖನದಲ್ಲಿ ನಾವು ಹಾಬಿಂಗ್ ಅಂದರೆ ಏನು ಮತ್ತು ಹಾಬಿಂಗ್ ಫಿಕ್ಸ್ಚರ್ ಹೇಗೆ ಕೆಲಸ ನಿರ್ವಹಿಸುತ್ತದೆ, ಎಂಬುದನ್ನು ತಿಳಿದುಕೊಂಡೆವು. ಹಾಬ್ ನಿಂದ ಗಿಯರ್ ಕಟಿಂಗ್ ಮಾಡುವ ಮಶಿನ್ ಗೆ ಹಾಬಿಂಗ್ ಮಶಿನ್ ಎಂದು ಕರೆಯಲಾಗುತ್ತದೆ. ಅದರಂತೆಯೇ ಯಾವ ಮಶಿನ್ ನಲ್ಲಿ ಬ್ರೋಚ್ ನ ಸಹಾಯದಿಂದ ಯಂತ್ರಣೆಯನ್ನು ಮಾಡಲಾಗುತ್ತದೆಯೋ, ಅದಕ್ಕೆ ಬ್ರೋಚಿಂಗ್ ಮಶಿನ್ ಎಂಬು ಹೇಳುತ್ತಾರೆ. ಹಾಬಿಂಗ್ ನಂತೆಯೇ ಬ್ರೋಚಿಂಗ್ ಕೂಡಾ ಒಂದು ವಿಶೇಷವಾದ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯು ಕ್ಲಿಷ್ಟಕರವಾಗಿರುವುದಿಲ್ಲ. ಹಾಬ್ ಇದೊಂದು ವಿಶಿಷ್ಟ ರೀತಿಯ ಕಟರ್ ಆಗಿದೆ. ಅದರಂತೆಯೇ ಬ್ರೋಚ್ ಕೂಡ್ ಒಂದು ವಿಶಿಷ್ಟ ರೀತಿಯ ಕಟರ್ ಆಗಿದೆ. ಹಾಬಿಂಗ್ ಮಶಿನ್ ನಂತೆಯೇ ಬ್ರೋಚಿಂಗ್ ಮಶಿನ್ ಕೂಡಾ ಒಂದು ವಿಶೇಷ ರೀತಿಯ ಮಶಿನ್ ಆಗಿರುತ್ತದೆ.
ಬ್ರೋಚಿಂಗ್ ಮತ್ತು ಸ್ಲಾಟಿಂಗ್ ಈ ಎರಡೂ ಪ್ರಕ್ರಿಯೆಗಳನ್ನು ಒಳ ಕಚ್ಚು (ಸ್ಲಾಟ್) ತಯಾರಿಸಲು ಬಳಸಲಾಗುತ್ತವೆ. ಆದರೆ ಸ್ಲಾಟಿಂಗ್ ಇದು ತುಂಬಾ ನಿಧಾನವಾದ ಪ್ರಕ್ರಿಯೆಯಾಗಿದೆ. ಇದರಿಂದಾಗಿ ಕಾರ್ಯವಸ್ತುಗಳು ಕಡಿಮೆ ಪ್ರಮಾಣದಲ್ಲಿ ಬೇಕಾಗುವಾಗ ಸ್ಲಾಟಿಂಗ್ ಪ್ರಕ್ರಿಯೆಯನ್ನು ಬಳಸಲಾಗುತ್ತದೆ. ಕಾರ್ಯವಸ್ತುಗಳ ಬೃಹತ್ ಪ್ರಮಾಣದಲ್ಲಿ ಮಾಡುವ ಆವಶ್ಯಕತೆ ಇರುವಾಗ ಬ್ರೋಚಿಂಗ್ ಪ್ರಕ್ರಿಯೆಯು ಲಾಭಕಾರಿಯಾಗಿರುತ್ತದೆ. ಬ್ರೋಚಿಂಗ್ ನ ಸಹಾಯದಿಂದ ಮಾಡಬೇಕಾಗಿರುವ ಅಳತೆಯಲ್ಲಿ ಬದಲಾವಣೆಯಾಗುವಾಗ ಸಂಪೂರ್ಣವಾಗಿ ಬ್ರೋಚ್ ಬದಲಾಯಿಸಬೇಕಾಗುತ್ತದೆ ಅಥವಾ ಗ್ರೈಂಡಿಂಗ್ ಮಾಡಿ ಅದನ್ನು ಚೂಪು ಮಾಡಬೇಕಾಗುತ್ತದೆ. ಬ್ರೋಚ್ ನ ಬೆಲೆಯು ಲಕ್ಷಗಟ್ಟಲೆ ಇರಬಲ್ಲದು, ಇದರಿಂದಾಗಿ ಅದನ್ನು ಎಸೆಯುವುದು ಪೂರೈಸುವುದಿಲ್ಲ. ಆದ್ದರಿಂದ ಬ್ರೋಚಿಂಗ್ ಯಾವಾಗ ಮಾಡಬೇಕು, ಎಂಬುದರ ಕುರಿತು ವಿಚಾರ ಮಾಡಿಯೇ ನಿರ್ಧರಿಸಿಬೇಕು.
ಬ್ರೋಚಿಂಗ್ ಈ ಯಂತ್ರಣೆಯು ಟರ್ನಿಂಗ್, ಡ್ರಿಲ್ಲಿಂಗ್, ಮಿಲ್ಲಿಂಗ್ ಇಂತಹ ಯಂತ್ರಣೆಗಳಿಗಿಂತ ಬೇರೆಯಾಗಿದೆ. ಉದಾಹರಣೆ, ಟರ್ನಿಂಗ್ ಮಾಡುವಾಗ ಕಾರ್ಯವಸ್ತು ತಿರುಗುತ್ತಿರುತ್ತದೆ, ಟೂಲ್ ಹಿಂದು- ಮುಂದು ಸರಿಯುತ್ತಿರುತ್ತದೆ. ಡ್ರಿಲ್ಲಿಂಗ್ ಮಾಡುವಾಗ ಡ್ರಿಲ್ ತಿರುಗುತ್ತದೆ, ಅದರಂತೆಯೇ ಕೆಳಗೆ ಕೂಡಾ ಬರುತ್ತಿರುತ್ತದೆ. ಆದರೆ ಬ್ರೋಚಿಂಗ್ ಮಾಡುವಾಗ ಬ್ರೋಚ್ ಕೇವಲ ಒಂದೇ ನೇರವಾದ ದಿಕ್ಕಿನಲ್ಲಿ ಎಳೆಯಲಾಗುತ್ತದೆ ಅಥವಾ ತಳ್ಳಲಾಗುತ್ತದೆ ಮತ್ತು ಇದರ ಯಂತ್ರಣೆಯಾಗುತ್ತದೆ. ಬ್ರೋಚಿಂಗ್ ಪ್ರಕ್ರಿಯೆಯಿಂದಾಗಿ ದೈನಂದಿನ ಜೀವನದಲ್ಲಿರುವ ಒಂದು ಉದಾಹರಣೆ ಅಂದರೆ ಬೆಣ್ಣೆಯನ್ನು ಚೂರಿಯಿಂದ ಕತ್ತರಿಸುವಂತೆ ಬ್ರೋಚ್ ನ ಕಾರ್ಯವಸ್ತುವಿನಿಂದ ಚಿಪ್ ತೆಗೆಯುತ್ತೇವೆ.
ಚಿತ್ರ ಕ್ರ. 1-ಎ ಯಿಂದ 1-ಇ ಯಲ್ಲಿ ಬ್ರೋಚ್ ನಿಂದ ತಯಾರಿಸಲಾಗಿರುವ ವಿವಿಧ ಕಾರ್ಯವಸ್ತುಗಳು ಮತ್ತು ಬ್ರೋಚ್ ತೋರಿಸಲಾಗಿವೆ. ಚಿತ್ರ ಕ್ರ. 1-ಎ ಮತ್ತು 1-ಬಿ ಈ ಭಾಗಗಳನ್ನು ಸ್ಲಾಟಿಂಗ್ ಮಶಿನ್ ನಿಂದಲೂ ಮಾಡಲಾಗುತ್ತವೆ. ಆದರೆ ಇದೇ ಭಾಗವನ್ನು ಬ್ರೋಚಿಂಗ್ ಮಶಿನ್ ನಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿಸಲಾಗುತ್ತದೆ. ಚಿತ್ರ ಕ್ರ. 1-ಸಿ ಯಲ್ಲಿ ತೋರಿಸಲಾಗಿರುವ ಕಾರ್ಯವಸ್ತುವನ್ನು ಇನ್ನಿತರ ಯಾವುದೇ ರೀತಿಯ ಪ್ರಕ್ರಿಯೆಗಳಿಂದ ತಯಾರಿಸುವುದು ತುಂಬಾ ಕ್ಲಿಷ್ಟ ಮತ್ತು ಅಸಾಧ್ಯವಾಗಿದೆ. ಕಾರ್ಯವಸ್ತುವಿನಲ್ಲಿ ಒಳ ಸರ್ಫೇಸ್ ನ ಆಕಾರದ ಬ್ರೋಚ್ ತಯಾರಿಸಿ ಅದಕ್ಕೆ ಸೂಕ್ತವಾದ ಆಕಾರ ನೀಡುವುದು ಸುಲಭ ಮತ್ತು ಲಾಭಕಾರಿಯಾಗಿದೆ.
ಬ್ರೋಚಿಂಗ್ ನಿಂದ ಲಭಿಸುವ ಲಾಭಗಳು
1. ಬೃಹತ್ ಪ್ರಮಾಣದಲ್ಲಿ ಮಾಡಲಾಗುವ ಉತ್ಪಾದನೆಯು ಲಾಭಕಾರಿಯಾಗಿದೆ.
2. ಆವರ್ತನೆಯ ಸಮಯ (ಸೈಕಲ್ ಟೈಮ್) ಬೃಹತ್ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
3. ಒಳಭಾಗದಲ್ಲಿ ನಿಯಮಿತವಾಗಿ ಅಥವಾ ಅನಿಯಮಿತವಾಗಿ ಆಕಾರವನ್ನು ಮಾಡುವುದು ಸಾಧ್ಯವಾಗಿದೆ.
4. ಅಳತೆಯಲ್ಲಿ ನಿಖರತೆ ಮತ್ತು ನಿರಂತರತೆಯು ಲಭಿಸುತ್ತದೆ.
5. ಸರ್ಫೇಸ್ ನಲ್ಲಿ ಉಚ್ಚಮಟ್ಟದ ಸುಸೂತ್ರತೆಯನ್ನು ಪಡೆಯಬಹುದು.
6. ಕೌಶಲ್ಯತೆ ಇಲ್ಲದಿರುವ ಕೆಲಸಗಾರರಿಗೆ ಕೆಲವು ದಿನಗಳ ತರಬೇತಿಯನ್ನು ನೀಡಿದಲ್ಲಿ ಅವರು ಸುಲಲಿತವಾಗಿ ಕೆಲಸ ನಿರ್ವಹಿಸಬಲ್ಲರು.
ಬ್ರೋಚಿಂಗ್ ನಲ್ಲಿ ಇರುವ ಮಿತಿ
1. ಬ್ರೋಚ್ ನ ಬೆಲೆಯು ಹೆಚ್ಚು ಇರುತ್ತದೆ.
2. ಕಾರ್ಯವಸ್ತುವಿನ ಅಳತೆಯಲ್ಲಿ ಮಾಡಲಾಗಿರುವ ವ್ಯತ್ಯಾಸದ ಕಾರಣದಿಂದಾಗಿ ಬ್ರೋಚ್ ನಷ್ಟವಾಗುತ್ತದೆ.
3. ಹೆಚ್ಚು ದಪ್ಪವಿರುವ ಕಾರ್ಯವಸ್ತುಗಳಿಗೆ ಹೆಚ್ಚು ಉದ್ದದ ಬ್ರೋಚ್ ನ ಆವಶ್ಯಕತೆ ಇರುತ್ತದೆ. ಇದರಿಂದಾಗಿ ದೊಡ್ಡದಾದ ವಸ್ತುಗಳನ್ನು ಮಾಡುವುದು ಅಸಾಧ್ಯ.
4. ಕೇವಲ ಆರುಪಾರಾಗಿರುವ ರಂಧ್ರಗಳಿಗೆ ಬ್ರೋಚಿಂಗ್ ಮಾಡಬಹುದಾಗಿದೆ. ನಡುಭಾಗದಲ್ಲಿ ಅಡೆತಡೆಗಳಿದ್ದಲ್ಲಿ ಸರ್ಫೇಸ್ ಮಾಡಲಾಗುವುದಿಲ್ಲ.
5. ಹೆಚ್ಚು ಕಠಿಣವಾದ ಲೋಹಗಳಿಗೆ ಬ್ರೋಚಿಂಗ್ ಮಾಡುವುದು ಸೂಕ್ತವಲ್ಲ.
6. ಸೂಕ್ಷ್ಮ ಅಥವಾ ದುರ್ಬಲವಾದ ಕಾರ್ಯವಸ್ತಗಳನ್ನು ಬ್ರೋಚಿಂಗ್ ನಿಂದ ಮಾಡಲಾಗುವುದಿಲ್ಲ. ಕಾರಣ ಬ್ರೋಚಿಂಗ್ ಮಾಡುವಾಗ ಉದ್ಭವಿಸುವ ಯಂತ್ರಣೆಯ ಬಲದಿಂದಾಗಿ ಕಾರ್ಯವಸ್ತುಗಳು ಅಂಕುಡೊಂಕಾಗುತ್ತವೆ.
ಚಿತ್ರ ಕ್ರ. 2-ಎ ಮತ್ತು 2-ಬಿಯಲ್ಲಿ ಸ್ಲಾಟಿಂಗ್ ಮತ್ತು ಬ್ರೋಚಿಂಗ್ ಪ್ರಕ್ರಿಯೆಯಲ್ಲಿ ಸಾಧರ್ಮ್ಯವನ್ನು ತೋರಿಸಲಾಗಿದೆ. ಸ್ಲಾಟಿಂಗ್ ಮಾಡುವಾಗ ಕಾರ್ಯವಸ್ತುವಿನಲ್ಲಿ ಆವಶ್ಯಕವಿರುವ ಕಚ್ಚುಗಳ ಆಳವನ್ನು ಪಡೆಯಲು ಅನೇಕ ಕಟ್ ಮಾಡಬೇಕಾಗುತ್ತದೆ. ಆದರೆ ಬ್ರೋಚ್ ಒಂದೇ ಸ್ಟ್ರೋಕ್ ನಲ್ಲಿ ಇಂತಹ ಕಚ್ಚು ತಯಾರಿಸುತ್ತದೆ. ಕಾರಣ ಬ್ರೋಚ್ ನ ಪ್ರತಿಯೊಂದು ಹಲ್ಲು, ಮೊದಲನೆಯ ಹಲ್ಲಿಗಿಂತ ಹೆಚ್ಚು ಎತ್ತರದ್ದು ಇರುವುದರಿಂದ, ಅಷ್ಟೇ ಮಟೀರಿಯಲ್ ತೆಗೆಯಲಾಗುತ್ತದೆ. ಮೊದಲ ಹಲ್ಲಿನಿಂದ ಯಂತ್ರಣೆಗೆ ಪ್ರಾರಂಭವಾಗುತ್ತದೆ ಮತ್ತು ಕೊನೆಯ ಹಲ್ಲು ಬೇಕಾಗಿರುವ ಅಳತೆಯನ್ನು ತಯಾರಿಸುತ್ತದೆ. ಮಧ್ಯ ಭಾಗದಲ್ಲಿರುವ ಎಲ್ಲ ಹಲ್ಲುಗಳು ಸ್ವಲ್ಪ ಪ್ರಮಾಣದಲ್ಲಿ ಯಂತ್ರಣೆಯನ್ನು ಮಾಡುತ್ತಿರುತ್ತವೆ. ಇದಕ್ಕೆ ಫೀಡ್ ರೇಟ್ ಎಂಬುದಾಗಿ ಹೇಳಬಹುದು. ಇದರಿಂದ ಎರಡು ಯಂತ್ರಣೆಗಳಲ್ಲಿ ವೇಳೆಯ ಕುರಿತು ವ್ಯತ್ಯಾಸವಿದೆಯೇ, ಎಂಬುದು ಗಮನಕ್ಕೆ ಬರಬಲ್ಲದು.
ಕಾರ್ಯವಸ್ತುವಿನಲ್ಲಿ ಕಚ್ಚುಗಳನ್ನು ಮಾಡಲು ಯಾವ ರೀತಿಯ ಫಿಕ್ಸ್ಚರ್ ಬಳಸಬಲ್ಲೆವು ಮತ್ತು ಅದರ ಕೆಲಸ ಏನಿದೆ ಎಂಬುದನ್ನು ನೋಡೋಣ. ಚಿತ್ರ ಕ್ರ. 3 ರಲ್ಲಿ ತೋರಿಸಿದಂತೆ ಫಿಕ್ಸ್ಚರ್ ಪುಲ್ ಟೈಪ್ ಹಾರಿಝಾಂಟಲ್ ಬ್ರೋಚಿಂಗ್ ಮಶಿನ್ ನಲ್ಲಿ ಬಳಸಲು ಇರುತ್ತದೆ. ಮಶಿನ್ ನ ಸರ್ಫೇಸ್ ನಲ್ಲಿ (ಫೇಸ್ ನಲ್ಲಿ) ಅಥವಾ ಫಿಕ್ಸ್ಚರ್ ನ ಪ್ಲೇಟ್ ನಲ್ಲಿ ಅಡಾಪ್ಟರ್ ಅಳವಡಿಸಲಾಗಿದೆ. ಆ ಅಡಾಪ್ಟರ್ ನಲ್ಲಿ ಬ್ರೋಚ್ ಗೈಡ್ ಅಥವಾ ವರ್ಕ್ ಹಾರ್ನ್ ಅಳವಡಿಸಲಾಗಿದೆ.
ಅಡಾಪ್ಟರ್
ಈ ಭಾಗವನ್ನು ಹೆಚ್ಚಾಗಿ ಮಶಿನ್ ನ ಫೇಸ್ ನಲ್ಲಿ ಅಥವಾ ಫಿಕ್ಸ್ಚರ್ ನಲ್ಲಿ ಅಳವಡಿಸಲಾಗಿರುತ್ತದೆ. ವ್ಯಾಸದಲ್ಲಿ ಅಳವಡಿಸಲಾಗುವ ಅಡಾಪ್ಟರ್ ತುಂಬಾ ದೊಡ್ಡದಾಗಿರುತ್ತದೆ. ಅಡಾಪ್ಟರ್ ಸ್ಕ್ರೂನ ಸಹಾಯದಿಂದ ಫಿಕ್ಸ್ಚರ್ ಪ್ಲೇಟ್ ಅಳವಡಿಸಲಾಗುತ್ತದೆ. ಬ್ರೋಚ್ ಗೈಡ್ ನ ವ್ಯಾಸವು ತುಂಬಾ ಚಿಕ್ಕದಾಗಿರುತ್ತದೆ. ಅಡಾಪ್ಟರ್ ಇಲ್ಲದಿದ್ದಲ್ಲಿ ಪ್ರತಿ ಸಲ ಬ್ರೋಚ್ ಗೈಡ್ ತುಂಬಾ ದೊಡ್ಡ ವ್ಯಾಸದ್ದು ತಯಾರಿಸಬೇಕಾಗಬಹುದು. ಬ್ರೋಚ್ ಗೈಡ್ ಬೇರೆಬೇರೆ ಕಾರ್ಯವಸ್ತುಗಳಿಗೆ ಬೇರೆಬೇರೆ ತಯಾರಿಸಬೇಕಾತ್ತದೆ. ಬ್ರೋಚ್ ಗೈಡ್ ಆಗಾಗ ಬದಲಾಯಿಸಬೇಕಾಗುವುದರಿಂದ ಅಡಾಪ್ಟರ್ ಕೇಸ್ ಹಾರ್ಡ್ ಅಥವಾ ಪೂರ್ಣವಾಗಿ ಕಠಿಣ ಮಾಡಲಾಗಿರುತ್ತದೆ.
ಬ್ರೋಚ್ ಗೈಡ್/ ವರ್ಕ್ ಹಾರ್ನ್
ಬ್ರೋಚ್ ಗೈಡ್ ಇದು ಫಿಕ್ಸ್ಚರ್ ನಲ್ಲಿ ಇರುವ ಎಲ್ಲಕ್ಕಿಂತಲೂ ಪ್ರಮುಖವಾದ ಭಾಗವಾಗಿದೆ. ಬ್ರೋಚ್ ಯಂತ್ರಣೆ ಮಾಡುವಾಗ ಈ ಭಾಗದಲ್ಲಿ ಗೈಡ್ ಆಗುತ್ತಿರುವುದರಿಂದ ಇದನ್ನು ಬ್ರೋಚ್ ಗೈಡ್ ಎಂದು ಕರೆಯಲಾಗುತ್ತದೆ. ಬ್ರೋಚ್ ಕಠಿಣವಾಗಿ ಇರುವುದರಿಂದ ಮತ್ತು ಯಂತ್ರಣೆಯ ಬಲವು ಕಾರ್ಯವಸ್ತುವಿನ ಕಚ್ಚಿನಲ್ಲಿ ಕಾರ್ಯನಿರತವಾಗಿ ಇರುವುದರಿಂದ ಸಹಜವಾಗಿಯೇ ಇದನ್ನು ಸಂಪೂರ್ಣವಾಗಿ ಕಠಿಣ ಮಾಡುವುದು ಅತ್ಯಾವಶ್ಯಕವಾಗಿದೆ. ಅಡಾಪ್ಟರ್ ನಲ್ಲಿ ಬ್ರೋಚ್ ಗೈಡ್ H7/ g6 ಫಿಟ್ ನ ಶ್ರೇಣಿಯಲ್ಲಿ ಅಳವಡಿಸಲಾಗಿರುತ್ತದೆ. ಬ್ರೋಚಿಂಗ್ ಪೂರ್ಣವಾದರೂ ಕೂಡಾ ಬ್ರೋಚ್ ಗೈಡ್ ನಲ್ಲಿ ಸ್ಥಿರವಾಗಿ ಇರುವುದರಿಂದ ಬ್ರೋಚ್ ಗೈಡ್ ತಿರುಗಲಾರದು. ತಮಗೆ ಬೇಕಾಗಿರುವ ಅಳತೆಗಿಂತ ಹೆಚ್ಚುವರಿಯಾಗಿರುವ ಬ್ರೋಚ್ ಗೈಡ್ ತಯಾರಿಸಿದಲ್ಲಿ ಅದನ್ನು ಬದಲಾಯಿಸುವುದು ಸುಲಭ. ಚಿತ್ರ ಕ್ರ. 3 ರಲ್ಲಿ ತೋರಿಸಿದ ಬಾಣದಂತೆ ಯಂತ್ರಣೆಯನ್ನು ಮಾಡುವಾಗ ಬ್ರೋಚ್ ಬಲ ಭಾಗದಿಂದ ಎಡ ಭಾಗಕ್ಕೆ ಹೋಗುತ್ತದೆ ಮತ್ತು ಯಂತ್ರಣೆಯ ಬಲವು ಕಾರ್ಯವಸ್ತುವಿನ ಮತ್ತು ಬ್ರೋಚ್ ಗೈಡ್ ನ ಸರ್ಫೇಸ್ ಕಡೆಗೆ ಬರುತ್ತದೆ. ಇದರಿಂದಾಗಿ ಕಾರ್ಯವಸ್ತು ಕ್ಲ್ಯಾಂಪ್ ಮಾಡಬೇಕಾಗುವುದಿಲ್ಲ. ಯಂತ್ರಣೆಯ ಬಲವೇ ಕ್ಲ್ಯಾಂಪ್ ನ ಕೆಲಸವನ್ನು ನಿರ್ವಹಿಸುತ್ತದೆ. ಕೀ-ವೆ ಸ್ಲಾಟ್, ಸ್ಪ್ಲೈನ್, ಸರೇಶನ್, ಚಚ್ಚೌಕ, ಷಟ್ಕೋನ ಇತ್ಯಾದಿ ಒಳ ಸರ್ಫೇಸ್ ಪುಲ್ ಟೈಪ್ ಬ್ರೋಚ್ ನಿಂದ ಮಾಡಲು ಕಾರ್ಯವಸ್ತುವನ್ನು ಕ್ಲ್ಯಾಂಪ್ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದಾಗಿ ಕೆಲಸಗಾರರಿಗೆ ಕೇವಲ ಕಾರ್ಯವಸ್ತು ಇಡುವುದು ಮತ್ತು ತೆಗೆಯುವುದು ಇಷ್ಟೇ ಕೆಲಸ ಮಾಡಬೇಕಾಗುತ್ತದೆ. ಆದರೆ ಬ್ರೋಚಿಂಗ್ ಮಾಡುವಾಗ ಕೆಲಸಗಾರರಿಗೆ ಶಾಶ್ವತವಾಗಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದರ ಕಾರಣಗಳು ಈ ಮುಂದಿನಂತಿವೆ.
ಫಿಕ್ಸ್ಚರ್ ಪ್ಲೇಟ್
ಫಿಕ್ಸ್ಚರ್ ಪ್ಲೇಟ್ ನಲ್ಲಿ ಅಡಾಪ್ಟರ್ ನ್ನು ಸ್ಕ್ರೂನ ಸಹಾಯದಿಂದ ಅಳವಡಿಸಲಾಗಿರುತ್ತದೆ. ಈ ಅಡಾಪ್ಟರ್ ಮಶಿನ್ ನ ಸರ್ಫೇಸ್ ನಲ್ಲಿರುವ ರಂಧ್ರದಲ್ಲಿ ಲೊಕೇಟ್ ಮಾಡಲಾಗಿರುತ್ತದೆ. ಇದರಿಂದಾಗಿ ಫಿಕ್ಸ್ಚರ್ ಮತ್ತು ಮಶಿನ್ ಕಾಂನ್ಸೆಂಟ್ರಿಕ್ ಆಗುತ್ತವೆ. ಫಿಕ್ಸ್ಚರ್ ಪ್ಲೇಟ್ ‘U’ ಕಚ್ಚಿನಲ್ಲಿ ಮಶಿನ್ ನ ಫೇಸ್ ಪ್ಲೇಟ್ ನಲ್ಲಿ ಅಳವಡಿಸಲಾಗುತ್ತದೆ. ಪ್ಲೇಟ್ ಗೋಲಾಕಾರವಾಗಿ ಸ್ಪಲ್ಪ ಪ್ರಮಾಣದಲ್ಲಿ ತಿರುಗುತ್ತದೆ. ಆದರೆ ಅದು ಕಾಂನ್ಸೆಂಟ್ರಿಕ್ ನಲ್ಲಿ ನಿಖರವಾಗಿ ಅಳವಡಿಸಲ್ಪಟ್ಟಿರುತ್ತದೆ. ಇದರಿಂದಾಗಿ ಅದು ವರ್ತುಲಾಕಾರವಾಗಿ ಸ್ವಲ್ಪ ಪ್ರಮಾಣದಲ್ಲಿ ತಿರುಗಿದರೂ ಕೂಡಾ ಕಾರ್ಯವಸ್ತುವಿನ ಗುಣಮಟ್ಟದ ನಿಟ್ಟಿನಲ್ಲಿ ಯಾವುದೇ ರೀತಿಯ ಪರಿಣಾಮಗಳು ಉಂಟಾಗುವುದಿಲ್ಲ.
ಬ್ರೋಚಿಂಗ್ ಮಾಡುವಾಗ ಹಲವಾರು ಅಂಶಗಳ ಕುರಿತು ಮುತುವರ್ಜಿ ವಹಿಸುವುದು ಅತ್ಯಾವಶ್ಯಕವಾಗಿದೆ. ಇದಕ್ಕೋಸ್ಕರ ಕೆಲಸಗಾರರು ನಿರಂತರವಾಗಿ ಜಾಗರೂಕರಾಗಿ ಮತ್ತು ಸನ್ನದ್ಧರಾಗಿರಬೇಕು. ಬ್ರೋಚ್ ನ ಚೂಪುತನವು ಕಡಿಮೆಯಾದಲ್ಲಿ, ಅದರ ಸವೆತವು ಗಮನಕ್ಕೆ ಬರುತ್ತದೆ. ಇದನ್ನುತಕ್ಷಣ ಬದಲಾಯಿಸಬೇಕು. ಬ್ರೋಚ್ ಹಾಗೆಯೇ ನಿರ್ಲಕ್ಷಿಸಿ ಬಳಸಿದಲ್ಲಿ ತುಂಡಾಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಹೊಸ ಬ್ರೋಚ್ ಅಳವಡಿಸುವಾಗ ಅದು ಸರಿಯಾಗಿ ಚೂಪಾಗಿದಯೇ ಎಂಬುದನ್ನು ಖಾತರಿ ವಹಿಸಬೇಕು. ಅಸಡ್ಡೆಯಿಂದ ಯಾವುದೇ ಡ್ರಿಲ್ ತುಂಡಾಗುವುದು ಮತ್ತು ಬ್ರೋಚ್ ತುಂಡಾಗುವುದು ಇದರಲ್ಲಿ ವ್ಯತ್ಯಾಸವಿದೆ.
ಬ್ರೋಚಿಂಗ್ ಮಾಡುವಾಗ ಬೃಹತ್ ಪ್ರಮಾಣದಲ್ಲಿ ಉಷ್ಣಾಂಶವು ಉಂಟಾಗುತ್ತದೆ. ಅದಕ್ಕೋಸ್ಕರವೇ ಕೂಲಂಟ್ ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಕೂಲಂಟ್ ನ ಪೂರೈಕೆಯು ನಿರಂತರವಾಗಿ ಆಗುತ್ತಿದೆಯೇ, ಎಂಬುದನ್ನು ನೋಡುವುದು ಕೆಲಸಗಾರರ ಜವಾಬ್ದಾರಿಯಾಗಿದೆ. ಕೂಲಂಟ್ ನ ಪ್ರವಾಹವು ಯಂತ್ರಣೆಯಿಂದ ನಿರ್ಮಾಣಗೊಂಡ ಚಿಪ್ ಗಳನ್ನು ಒಯ್ಯುತ್ತದೆ. ಇದರಿಂದಾಗಿ ಹಲವಾರು ಚಿಪ್ ಗಳು ಬ್ರೋಚ್ ನ ಹಲ್ಲುಗಳಲ್ಲಿ ಅಂಟಿಕೊಳ್ಳುತ್ತವೆ. ಅವುಗಳನ್ನು ಬ್ರಶ್ ನ ಸಹಾಯದಿಂದ ಶುಚಿಗೊಳಿಸಬೇಕು. ಶುಚಿಗೊಳಿಸದೇ ಇದ್ದಲ್ಲಿ ಬ್ರೋಚ್ ತುಂಡಾಗಬಲ್ಲದು. ನಿರ್ಲಕ್ಷಿಸಿದಲ್ಲಿ ಅಥವಾ ಅಸಡ್ಡೆಯಿಂದಾಗಿ ಯಾವುದೇ ಕ್ಷಣದಲ್ಲಿ ಬ್ರೋಚ್ ತುಂಡಾಗುವ ಸಾಧ್ಯತೆ ಇರುತ್ತದೆ. ಈ ಪರಿಸ್ಥಿತಿಯಲ್ಲಿ ಒಂದು ಹೆಚ್ಚುವರಿ ಬ್ರೋಚ್ ಚೂಪು ಮಾಡಿ ಸಿದ್ಧವಾಗಿರಿಸುವುದು ತುಂಬಾ ಅಗತ್ಯವಾಗಿದೆ. ಹೊಸ ಬ್ರೋಚ್ ಪಡೆಯಲು ಸುಮಾರು 2-3 ತಿಂಗಳ ಕಾಲಾವಧಿ ತಗಲುತ್ತದೆ. ಇದರಿಂದಾಗಿ ಸಾಮಾನ್ಯವಾಗಿ 3 ಬ್ರೋಚ್ ಗಳು ಇರುವುದು ಸೂಕ್ತವಾಗಿದೆ. ಕಾರಣ ಒಂದು ಬ್ರೋಚ್ ಹರಿತ ಮಾಡಲು ಕಳುಹಿಸಬೇಕಾಗುತ್ತದೆ.
ಆರ್ಬರ್ ಪ್ರೆಸ್ ನಲ್ಲಿಯೂ ನಾವು ಬ್ರೋಚಿಂಗ್ ಮಾಡಬಲ್ಲೆವು. ಆದರೆ ಇದನ್ನು ಮಾಡಲು ನುರಿತ ಕೆಲಸಗಾರರ ಆವಶ್ಯಕತೆ ಇರುತ್ತದೆ. ಹಾಗೆಯೇ ಕಾರ್ಯವಸ್ತುವಿನ ಆವಶ್ಯಕತೆಗೆ ತಕ್ಕಂತೆ ಬ್ರೋಚ್ ಗೈಡ್ ನಲ್ಲಿ ಶಿಮ್ ಹಾಕಿ ಮತ್ತೆ ಬ್ರೋಚಿಂಗ್ ಮಾಡಿ ತಮಗೆ ಬೇಕಾಗಿರುವ ಕಚ್ಚಿನ ಆಳವನ್ನು ಪಡೆಯಬಹುದು. ಈ ಯಂತ್ರಣೆಯನ್ನು ಮಾತ್ರ ಸಂಪೂರ್ಣವಾಗಿ ಕೈಯಿಂದಲೇ (ಮ್ಯಾನ್ಯುವಲಿ) ನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ಬ್ರೋಚ್ ಗೆ ಲುಬ್ರಿಕಂಟ್ ಹಚ್ಚಿ ಬ್ರೋಚ್ ಬಳಸಬೇಕಾಗುತ್ತದೆ. ಚಿತ್ರ ಕ್ರ. 4 ರಲ್ಲಿ ತೋರಿಸಿದಂತೆ ಕಾಲರ್ಡ್ ಬುಶ್ ಬಳಸಬೇಕಾಗುತ್ತದೆ. ಕಾರಣ ಯಂತ್ರಣೆಯ ಬಲಕ್ಕೆ ಕಾಲರ್ ಬುಶ್ ತಡೆಯಬಲ್ಲದು ಮತ್ತು ಕಾರ್ಯವಸ್ತುವಿಗೆ ಆಧಾರವನ್ನು ನೀಡಬಲ್ಲದು.