2020-21 ಈ ಹಣಕಾಸು ವರ್ಷದ ಕೊನೆಯ ತಿಂಗಳು ಅಂದರೆ ಮಾರ್ಚ್. ಕೊರೋನಾ ಸಾಂಕ್ರಾಮಿಕ ರೋಗದಿಂದ ವ್ಯರ್ಥವಾದ ವರ್ಷದಲ್ಲಿರುವ ಅಂತಿಮವಾದ ಅವಕಾಶವೆಂದು ಈ ತಿಂಗಳನ್ನು ತಿಳಿಯಲಾಗುತ್ತಿದೆ. ಸಂಪೂರ್ಣ ಉದ್ಯಮ ಜಗತ್ತು ಅಂತಿಮ ಅವಕಾಶವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿದಲ್ಲಿ ಲಾಭವಾಗಬಲ್ಲದು, ಎಂಬುದಕ್ಕೋಸ್ಕರ ಪ್ರಯತ್ನ ಪಡುತ್ತಿರುವ ಸ್ಥಿತಿಯು ಗಮನಕ್ಕೆ ಬರುತ್ತಿದೆ. IHS ಮಾರ್ಕಿಟ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೆಜರ್ ಇವರ ಪ್ರಕಾರ ಸಮೀಕ್ಷೆಯ ಅಂಕೆ-ಅಂಶಗಳು ಕಳೆದ 6 ತಿಂಗಳಿನಿಂದ ಏರುತ್ತಿರುವುದು ಕಂಡುಬರುತ್ತಿದೆ. ಜನವರಿ 2021 ರಲ್ಲಿ ಸಮೀಕ್ಷೆಯ ಅಂಕೆ-ಅಂಶವು 57.7 ರಷ್ಟು ವೃದ್ಧಿಸಿದೆ. ಔದ್ಯೋಗಿಕ ಉತ್ಪಾದನೆಗಳ ಹೆಚ್ಚುತ್ತಿರುವ ಪ್ರಮಾಣವೇ ಇದಾಗಿದೆ.
ಫೆಬ್ರವರಿ 1 ರಂದು ಪ್ರಸ್ತುತ ಪಡಿಸಲಾದ ಕೇಂದ್ರ ಸರ್ಕಾರದ ಮುಂಗಡಪತ್ರವು ಲಘು ಮಧ್ಯಮ ಉದ್ಯಮಗಳಿಗೆ ಆಶಾಕಿರಣವಾಗಿದೆ. ಕೋವಿಡ್ 19 ನಿಂದಾಗಿ ಅಸ್ತವ್ಯಸ್ತವಾಗಿರುವ ಲಘು ಮಧ್ಯಮ ಉದ್ಯಮಗಳಿಗೆ ಈ ವರ್ಷದ ಮುಂಗಡಪತ್ರದಲ್ಲಿ ಬೃಹತ್ ಪ್ರಮಾಣದ ಸಹಾಯ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಲಘು ಮಧ್ಯಮ ಉದ್ಯಮಗಳಿಗೆ 2020-21 ರ ಹಣಕಾಸು ವರ್ಷದಲ್ಲಿ 7,572 ಕೋಟಿ ರೂಪಾಯಿಗಳನ್ನು ಮೀಸಲಾಗಿ ಇಡಲಾಗಿತ್ತು. 2021-22 ಈ ಮುಂದಿನ ಹಣಕಾಸು ವರ್ಷಕ್ಕೆ 15,700 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಇಮ್ಮಡಿಯಾಗಿದೆ.
ಇದರ ಕುರಿತಾಗಿ ಕೂಲಂಕುಷವಾಗಿ ತಿಳಿದುಕೊಂಡಾಗ ಅನೇಕ ಅಂಶಗಳು ಗಮನಕ್ಕೆ ಬರುತ್ತವೆ. ಖಾದಿ ಗ್ರಾಮೋದ್ಯೋಗ, ಸೋಲರ್ ನಂತಹ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೆ ಸಹಕರಿಸುವಂತಹ ಯೋಜನೆಗಳಿಗೆ ಕಳೆದ ಹಣಕಾಸು ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೊತ್ತವನ್ನು ನೀಡಲಾಗಿದೆ. ಕಳೆದ ವರ್ಷದಲ್ಲಿ ಸುಮಾರು 2,500 ಕೋಟಿಯಷ್ಟು ಇದ್ದ ಮೊತ್ತವನ್ನು ಪ್ರಸ್ತುತ ಹಣಕಾಸು ವರ್ಷದಲ್ಲಿ 1,400 ಕೋಟಿಗೆ ಇಳಿಸಲಾಗಿದೆ. ಕೈಗಾರಿಕೋದ್ಯಮದ ಕ್ಷೇತ್ರದಲ್ಲಿ ತಂತ್ರಜ್ಞಾನದ ವಿಕಾಸ ಮತ್ತು ಗುಣಮಟ್ಟದ ದೃಢೀಕರಣಕ್ಕೋಸ್ಕರ 683.91 ಕೋಟಿಯಷ್ಟು ಮೊತ್ತವನ್ನು ಮೀಸಲಾಗಿಡಲಾಗಿತ್ತು, ಆದರೆ ಈಗ ಅದನ್ನು ಕಡಿತಗೊಳಿಸಿ 330.31 ಕೋಟಿಗಳಷ್ಟು ಮಾಡಲಾಗಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಉದ್ಯಮಗಳ ಅಭಿವೃದ್ಧಿಗೋಸ್ಕರ ನಿಯೋಜಿತ ಮೊತ್ತವು 15 ಕೋಟಿಯಿಂದ 7.5 ಕೋಟಿಗೆ ಇಳಿಸಲಾಗಿದೆ. ಅಲ್ಲದೇ ಇನ್ನಿತರ ಅನೇಕ ಯೋಜನೆಗಳಿಗೆ ನೀಡಲಾಗುವ ಮೊತ್ತವನ್ನು ಮುಂಗಡಪತ್ರದಲ್ಲಿ ಕಡಿಮೆ ಮಾಡಲಾಗಿದೆ. ಪ್ರಧಾನ ಮಂತ್ರಿ ಉದ್ಯೋಗ ನಿರ್ಮಾಣ ಯೋಜನೆ (PMEGP) ಮತ್ತು ಇನ್ನಿತರ ಹಣಕಾಸಿಗೆ ಸಂಬಂಧಪಟ್ಟ ಯೋಜನೆಗಳಿಗೆ 2800 ಕೋಟಿಯಿಂದ 12,499.7 ಕೋಟಿಯಷ್ಟು ಹೆಚ್ಚಳವನ್ನು ಮಾಡಲಾಗಿದೆ. ನಿಜವಾಗಿ ನೋಡಿದಲ್ಲಿ PMEGP ಯ ಹಂಚಿಕೆಯನ್ನು 500 ಕೋಟಿಯಷ್ಟು ಕಡಿಮೆ ಮಾಡಲಾಗಿದೆ. ಗ್ಯಾರಂಟಿ ಇಮರ್ಜನ್ಸಿ ಕ್ರೆಡಿಟ್ ಲೈನ್ (GECL) ಈ ಲಘ ಮಧ್ಯಮ ಉದ್ಯಮಗಳಿಗೆ ಸಾಲವನ್ನು ನೀಡುವ ಯೋಜನೆಗಳಿಗೆ 10,000 ಕೋಟಿಯಷ್ಟು ಹಂಚಿಕೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಸಾಲ ನೀಡಲು ಬೃಹತ್ ಪ್ರಮಾಣದಲ್ಲಿ ಹಣಕಾಸಿನ ವ್ಯವಸ್ಥೆಯನ್ನು ಮಾಡುವಾಗ ಮಾರ್ಕೆಟಿಂಗ್ ಮತ್ತು ವಿದೇಶದ ಪ್ರದರ್ಶನಗಳಲ್ಲಿ ಸಹಭಾಗಿಯಾಗಲು ನೀಡಲಾಗುವ ಸಹಾಯದ ವ್ಯವಸ್ಥೆಯಲ್ಲಿ 130 ಕೋಟಿಯಿಂದ 65 ಕೋಟಿಯ ತನಕ ಕಡಿತ ಮಾಡಲಾಗಿದೆ. ಕೌಶಲ್ಯ ವಿಕಾಸ ಯೋಜನೆಗೆ ನೀಡಲಾಗಿರುವ ಹಂಚಿಕೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡುಬರುವುದಿಲ್ಲ.
ತಮ್ಮ ವ್ಯವಹಾರದಲ್ಲಿ ಬದಲಾವಣೆ ಮತ್ತು ಸುಧಾರಣೆಗಳನ್ನು ಮಾಡುವಾಗಲೇ ಹಣಕಾಸಿಗೆ ಸಂಬಂಧಪಟ್ಟ ಸರ್ಕಾರದ ನೀತಿಗಳು ಉಪಯುಕ್ತವಾಗಬಲ್ಲವು, ಎಂಬುದನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ. ‘ಲೋಹಕಾರ್ಯ’ ಈ ಮಾಸ ಪತ್ರಿಕೆಯ ಮೂಲಕ ನಾವು ಯಂತ್ರಣೆ ಮತ್ತು ಕಾರ್ಖಾನೆಗಳೊಂದಿಗೆ ಸಮನ್ವಯವನ್ನು ಸಾಧಿಸುವಂತಹ ಅನೇಕ ವಿಷಯಗಳನ್ನು ಓದುಗರ ತನಕ ತಲುಪಿಸುತ್ತಿರುತ್ತೇವೆ. ಕಳೆದ ಮೂರು ವರ್ಷಗಳ ಕಾಲಾವಧಿಯಲ್ಲಿ ಸಿ.ಎನ್.ಸಿ. ಪ್ರೊಗ್ರಾಮಿಂಗ್, ಜಿಗ್ಸ್ ಮತ್ತು ಫಿಕ್ಸ್ಚರ್ಸ್, ಟೂಲಿಂಗ್ ನಲ್ಲಿ ಸುಧಾರಣೆ, ಮಶಿನ್ ಮೆಂಟೆನನ್ಸ್ ಇಂತಹ ಅನೇಕ ವಿಷಯಗಳ ಕುರಿತಾದ ಲೇಖಮಾಲೆಗಳನ್ನು ಪ್ರಕಟಿಸಿದ್ದೇವೆ. ಪ್ರಸ್ತುತ ಈ ತಿಂಗಳ ಸಂಚಿಕೆಯಲ್ಲಿ ಚಿಕ್ಕ ಕಾರ್ಯವಸ್ತುಗಳಿಗೆ ಉಪಯುಕ್ತವಾಗಿರುವ ಸ್ಲೈಡಿಂಗ್ ಹೆಡ್ ಆಟೊಮ್ಯಾಟ್ ಕುರಿತು ವಿವರವಾದ ಮಾಹಿತಿಯನ್ನು ನೀಡುವುದರೊಂದಿಗೆ, HPT ಯನ್ನು ಬಳಸುವಲ್ಲಿ ಅತ್ಯಾವಶ್ಯಕವಾಗಿರುವ ತಂತ್ರಜ್ಞಾನವನ್ನು ತಿಳಿಸುವ ಲೇಖನವನ್ನೂ ಈ ಸಂಚಿಕೆಯಲ್ಲಿ ನೀಡುತ್ತಿದ್ದೇವೆ. ಕಾರ್ಖಾನೆಗಳಲ್ಲಿ ಮಾಡಲಾಗಿರುವ ಚಿಕ್ಕದಾದ ಮತ್ತು ಮಹತ್ವಪೂರ್ಣವಾದ ಸುಧಾರಣೆಗಳನ್ನು ತಿಳಿಸುವ ಎರಡು ಲೇಖನಗಳೂ ಓದುಗರಿಗೆ ಉಪಯುಕ್ತವಾಗಬಲ್ಲವು. ಸೂಕ್ತವಾದ ಟೂಲ್ ಅಯ್ಕೆ ಮಾಡುವಾಗ ವಹಿಸಬೇಕಾದ ಶ್ರಮ ಅಲ್ಲದೇ ವ್ಯರ್ಥವಾಗುವ ಸಮಯವನ್ನು ಕಡಿಮೆ ಮಾಡಬಲ್ಲ ಮಶಿನಿಂಗ್ ಕ್ಲೌಡ್ ಅ್ಯಪ್ ನ ಕುರಿತು ವಿಸ್ತಾರವಾದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ. ಯಂತ್ರಣೆಯ ಉದ್ಯಮ ಕ್ಷೇತ್ರದಲ್ಲಿ ಸದ್ಯಕ್ಕೆ ಮಹಿಳೆಯರ ಸಹಭಾಗಿತ್ವವೂ ಗಮನಾರ್ಹವಾಗಿ ವೃದ್ಧಿಸುತ್ತಿರುವುದು ಕಂಡುಬರುತ್ತಿದೆ. 8 ಮಾರ್ಚ್ ಈ ದಿನವನ್ನು ಜಾಗತಿಕ ಮಹಿಳಾ ದಿನವೆಂದು ಆಚರಿಸುವ ಹಿನ್ನೆಲೆಯಲ್ಲಿ ಒಬ್ಬ ಯಶಸ್ವಿ ಮಹಿಳಾ ಉದ್ಯಮಿಯ ಪಯಣವನ್ನು ವಿವರಿಸುವ ವಿಶೇಷ ಲೇಖನವನ್ನೂ ಈ ಸಂಚಿಕೆಯಲ್ಲಿ ನೀಡಲಾಗಿದೆ.
ದೀಪಕ ದೇವಧರ