ಸಂಪಾದಕೀಯ

@@NEWS_SUBHEADLINE_BLOCK@@

Lohkarya - Udyam Prakashan    03-Feb-2021
Total Views |

1_1  H x W: 0 x
29 ಡಿಸೆಂಬರ್ 2020 ಈ ದಿನವು ‘ಉದ್ಯಮ’ ಮತ್ತು ಮಶಿನ್ ಟೂಲ್ ಉದ್ಯಮಕ್ಕೆ ಒಂದು ಆಘಾತವನ್ನುಂಟು ಮಾಡುವ ದಿನವಾಗಿತ್ತು. ಮಶಿನ್ ಟೂಲ್ ನ ನಿರ್ಮಾಣದಲ್ಲಿ ಮತ್ತು ಅದರಲ್ಲಿಯೂ ಡಿಸೈನ್ ಇದೇ ತನ್ನ ಜೀವನದ ಗುರಿ ಹೊಂದಿದ ಅಶೋಕ ಸಾಠೆ ಎಂಬ ಭೀಷ್ಮಾಚಾರ್ಯರು ಅಂದು ಜಗತ್ತಿನಿಂದ ವಿದಾಯವನ್ನು ಪಡೆದರು. ಕೊನೆಯ ಕ್ಷಣದ ತನಕ ತಮ್ಮ ಧ್ಯೇಯಕ್ಕೋಸ್ಕರ ಕಾರ್ಯನಿರತರಾಗಿದ್ದ ಈ ಇಂಜಿನಿಯರ್ ಅಲೌಕಿಕವಾದ ಕೆಲಸವನ್ನು ಮಾಡುತ್ತಾ ಇದ್ದರು. ಪ್ರಗತಿ ಆಟೊಮೇಶನ್, ACE ಡಿಸೈನರ್ಸ್ ಮತ್ತು ACE ಮೈಕ್ರೋಮ್ಯಾಟಿಕ್ಸ್ ಸಮೂಹ ಇಂತಹ ಭಾರತೀಯ ಮಶಿನ್ ಟೂಲ್ ಉದ್ಯಮಕ್ಕೆ ಹೆಮ್ಮೆಯನ್ನುಂಟು ಮಾಡುವ ಸಂಸ್ಥೆಗಳನ್ನು ಶೂನ್ಯದಿಂದ ಪ್ರಾರಂಭಿಸಿದರು. ಈ ಕಂಪನಿಗಳ ಖ್ಯಾತಿಯನ್ನು ಎಲ್ಲೆಡೆ ಪಸರಿಸಿದರು. ಜಾಗತಿಕ ಭೂಪಟದಲ್ಲಿ ಭಾರತೀಯ ಉದ್ಯಮಗಳು ಮುಂಚೂಣಿಯಲ್ಲಿರಬೇಕು, ಎಂಬ ಉದ್ದೇಶವೇ ಅವರದ್ದಾಗಿತ್ತು. ಅದಕ್ಕೋಸ್ಕರ ಅವರು ಬಹಳ ಯುವ ಉದ್ಯಮಿಗಳಿಗೆ, ಕೆಲವೊಮ್ಮೆ ಸ್ಪರ್ಧಕರಿಗೂ ಮುಕ್ತವಾಗಿ ಸಹಾಯವನ್ನು ಮಾಡಿದರು. ‘ವಿದೇಶದ ಉದ್ಯಮಿಗಳನ್ನು ಹೋಲಿಸಿದರೆ, ನಮ್ಮ ಉದ್ಯಮಿಗಳಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ. 200 ವರ್ಷಗಳ ಆಂಗ್ಲರ ಗುಲಾಮಗಿರಿಯಿಂದ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುವ ಆಂಗ್ಲ ಭಾಷೆಯಿಂದ, ಯಾವುದೇ ಹೊಸ ಕೆಲಸವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸು ನಮ್ಮಲ್ಲಿ ನಷ್ಟವಾಗಿದೆ. ಅದನ್ನು ಮರಳಿ ಪಡೆಯಲು ಮಾತೃಭಾಷೆಯ ವಿದ್ಯಾಭ್ಯಾಸ ಅತ್ಯಾವಶ್ಯಕವಾಗಿದೆ,’ ಎಂಬ ದೃಢ ಸಂಕಲ್ಪ ಇತ್ತು ಮತ್ತು ಅದಕ್ಕೋಸ್ಕರವೇ ಕಳೆದ ಹಲವಾರು ವರ್ಷಗಳು ಕಾರ್ಯನಿರತರಾಗಿದ್ದರು.
 
ಒಂದು ಸಲ ತಮಗೆ ‘ಸರಿ’ ಎಂದು ಅನಿಸಿರುವ ಯಾವುದೇ ವಿಚಾರವನ್ನು, ಅವರು ಅನೇಕ ಬಾರಿ ತಮ್ಮ ಸಹೊದ್ಯೋಗಿಗಳೊಂದಿಗೆ ಚರ್ಚೆ ಮಾಡುವಾಗ ತಮ್ಮ ನೀತಿ-ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ದೃಢವಾಗಿರುತ್ತಿದ್ದರು. ಆದರೆ ಅದರಲ್ಲಿ ಬದಲಾವಣೆಗಳನ್ನು ಸೂಚಿಸಿದಲ್ಲಿ ಅವುಗಳು ಸೂಕ್ತವಾದಲ್ಲಿ (ಸಾಠೆಯವರ ವಿಶೇಷವಾದ ಮಾತು) ಅವುಗಳನ್ನು ಮನ್ನಿಸುವ ಉತ್ಸಾಹವೂ ಅವರಲ್ಲಿತ್ತು. ಇಂತಹ ನಿರ್ಮಲವಾದ ಆಚರಣೆಯಿಂದಾಗಿ ಅವರು ನಿಜವಾಗಿಯೂ ಅಜಾತಶತ್ರುಗಳಾಗಿದ್ದರು. ಅವರ ಸಹೊದ್ಯೋಗಿಗಳಲ್ಲದೇ, ಅವರ ಸ್ಪರ್ಧಕರೂ ಕೂಡಾ ಸಾಠೆಯವರ ಹೆಸರನ್ನು ಕೇಳಿದಾಕ್ಷಣ ಅವರನ್ನು ಗುರುವಿನ ಸ್ಥಾನದಲ್ಲಿ (ಸಂಗೀತದಲ್ಲಿ ಗಾಯನವನ್ನು ಮಾಡುವಾಗ ಒಂದು ಕಿವಿಗೆ ಕೈ ಹಿಡಿದಂತೆ) ಗೌರವಿಸುತ್ತಿದ್ದರು. ಮಾಸ ಪತ್ರಿಕೆಯ ನಿಟ್ಟಿನಲ್ಲಿ ಅವರು ಕರ್ನಾಟಕ - ಮಹಾರಾಷ್ಟ್ರದಲ್ಲಿ ಅನೇಕ ಸಣ್ಣ-ಪುಟ್ಟ ಮಶಿನ್ ಟೂಲ್ ಉದ್ಯಮಿಗಳನ್ನು ಭೇಟಿ ಮಾಡುತ್ತಿದ್ದರು. ತಮ್ಮ ‘ಗುರು’ ಎಂಬುದಾಗಿ ಅವರನ್ನು ಹಿಂಬಾಲಿಸುತ್ತಿರುವ ಅನೇಕ ‘ಏಕಲವ್ಯ’ರು ಇರುವುದು ಆಗಲೇ ಗಮನಕ್ಕೆ ಬಂತು.
 
ದೇಶದ ಮತ್ತು ವಿದೇಶದ ಲಭ್ಯ ತಂತ್ರಜ್ಞಾನವನ್ನು ಕಲಿತು ಅದರಿಂದ ಉಚ್ಚಗುಣಮಟ್ಟದ ಭಾರತೀಯ ಉತ್ಪಾದನೆಗಳನ್ನು ತಯಾರಿಸುವಂತಹ ಸಂಸ್ಥೆಗಳನ್ನು ಅವರು ಪ್ರಾರಂಭಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಅವರ ಗುರುತು- ಪರಿಚಯವನ್ನು ದೃಢಪಡಿಸಿದರು. ಭಾರತೀಯ ಭಾಷೆಗಳನ್ನು ಜ್ಞಾನಭಾಷೆಯಾಗಿ ತಯಾರಿಸಬೇಕು, ಎಂಬ ಘೋಷಣೆಯನ್ನು ಮಾಡುವವರು ಅನೇಕರಿದ್ದಾರೆ, ಆದರೆ ಇಂತಹ ಧ್ಯೇಯಕ್ಕೋಸ್ಕರ ನಿರಂತರವಾಗಿ ಸ್ವಂತದ್ದಾದ ಸಮಯ ಮತ್ತು ಸಂಪತ್ತನ್ನು ನೀಡುವವರಲ್ಲಿ ‘ಸಾಠೆ’ ಇವರೊಬ್ಬರೇ ಸರಿ. ಹಾಗೆ ನೋಡಿದಲ್ಲಿ ಅವರು ಪ್ರಾರಂಭಿಸಿರುವ ಹೆಚ್ಚಿನ ಯೋಜನೆಗಳು ಯೋಗ್ಯವಾಗಿಲ್ಲ, ಎಂಬುದಾಗಿ ಪರಿಗಣಿಸಲ್ಪಡುತ್ತಿದ್ದವು. ಅದು ಟರೇಟ್ ಅಥವಾ ಸ್ವಯಂಚಾಲಿತ ಟೂಲ್ ಚೇಂಜರ್ ನ (ATC) ಉತ್ಪಾದನೆ ಇರಲಿ, ಅದೇ ಉತ್ಪಾದನೆಯನ್ನು ಚೀನಾದಲ್ಲಿ ತಯಾರಿಸುವ ಕಾರ್ಖಾನೆ ಇರಲಿ ಅಥವಾ ಭಾರತೀಯ ಭಾಷೆಗಳಲ್ಲಿ ಇಂಜಿನಿಯರಿಂಗ್ ಕುರಿತಾದ ಪುಸ್ತಕಗಳು ಮತ್ತು ಮಾಸ ಪತ್ರಿಕೆಗಳನ್ನು ಪ್ರಕಟಿಸುವುದಾಗಲಿ. ಪ್ರಾರಂಭದಲ್ಲಿ ‘ಏನು ಮಾಡುತ್ತಿದ್ದೀರಿ, ಇದನ್ನು ಯಾರು ಖರೀದಿಸುತ್ತಾರೆ, ಚೀನಾದಂತಹ ದೇಶದ ಉತ್ಪಾದಕರೆದುರು ತಾವು ಹೇಗೆ ತಳವೂರುತ್ತೀರಿ, ಕನ್ನಡ ಇರಲಿ, ಯಾವುದೇ ಭಾಷೆ ಇರಲಿ, ಇಂತಹ ಪುಸ್ತಕಗಳನ್ನು ಇಂದಿನ ಡಿಜಿಟಲ್ ಯುಗದಲ್ಲಿ ಯಾರು ಓದುತ್ತಾರೆ?’ ಇಂತಹ ನಿರ್ಲಕ್ಷ್ಯಿಸುವ ಪ್ರಶ್ನೆಗಳನ್ನೇ ಅವರಿಗೆ ಕೇಳಲಾಗುತ್ತಿತ್ತು. ಆದರೆ ಸಾಠೆಯವರ ವಿಚಾರಗಳಲ್ಲಿ ದೃಢತೆ ಇತ್ತು. ಆದ್ದರಿಂದ ಇಂದು ಅವರ ‘ಪ್ರಗತಿ’ಯಲ್ಲಿ ತಯಾರಿಸಲ್ಪಡುವ ATC ಗಳಿಗೆ ಭಾರತದಲ್ಲಿ ಪರ್ಯಾಯವಿಲ್ಲ. ಅದು ಈಗ ಅನೇಕ ಭಾರತೀಯ ಮತ್ತು ಆಂತಾರಾಷ್ಟ್ರೀಯ ಮಶಿನ್ ಟೂಲ್ ಗಳ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಚೀನಾದಲ್ಲಿರುವ ಉತ್ಪಾದಕರೊಂದಿಗೆ ದೃಢತೆಯಿಂದ ಸ್ಪರ್ಧಿಸುತ್ತಿದ್ದಾರೆ. ಮೊತ್ತ ಮೊದಲಾಗಿ ಮರಾಠಿ ಭಾಷೆಯಲ್ಲಿ ಪ್ರಕಟಿಸಲಾದ ‘ಧಾತುಕಾಮ’ ಈ ಮಾಸ ಪತ್ರಿಕೆಯು ಇಂದು ಕನ್ನಡ (ಲೋಹಕಾರ್ಯ), ಹಿಂದಿ, ಗುಜರಾತಿ ಸೇರಿ ನಾಲ್ಕು ಭಾಷೆಗಳಲ್ಲಿ ಪ್ರಕಟಿಸಲಾಗುತ್ತಿದೆ. ಸುಮಾರು 50,000 ಕಾರ್ಖಾನೆಗಳಿಗೆ ಇದು ತಲುಪುತ್ತಿದೆ. ಯಾವುದನ್ನು ಪ್ರಾರಂಭಿಸಿದರೂ ಅವುಗಳು ಬೃಹತ್ ಪ್ರಮಾಣದಲ್ಲಿ ಮತ್ತು ಎಲ್ಲ ಪ್ರಚಲಿತ ಆಂತಾರಾಷ್ಟ್ರೀಯ ಸ್ಟ್ಯಾಂಡರ್ಡ್ ಗಳನ್ನು ಪೂರ್ತಿಗೊಳಿಸುವಂತಹವು ಇರಲೇಬೇಕು, ಎಂಬುದಾಗಿ ಅವರು ಒತ್ತಾಯಿಸುತ್ತಿದ್ದರು. ಅಲ್ಲದೇ ಪ್ರತ್ಯಕ್ಷವಾಗಿ ಅದನ್ನು ಕಾರ್ಯಗತಗೊಳಿಸಲು ಆವಶ್ಯಕವಿರುವ ಎಲ್ಲ ಸಿದ್ಧತೆಯೂ ಅವರಲ್ಲಿರುತ್ತಿತ್ತು.
 
‘ಲೋಹಕಾರ್ಯ’ದ ಮುಂದಿನ ಪ್ರವಾಸದಲ್ಲಿ ಸಾಠೆಯವರಿಂದ ನೇರವಾದ ಮಾರ್ಗದರ್ಶನವು ಸಿಗಲಾರದು... ಅವರಿಗೆ ಫೋನ್ ನಲ್ಲಿ ಕರೆ ಮಾಡಿದಾಗ, “ಹೂಂ... ಹೇಳಿ ದೇವಧರ್....’’ ಈ ರೀತಿಯ ಸ್ವಲ್ಪ ಅನುನಾಸಿಕ ಅಶ್ವಾಸನೆಯುಳ್ಳ ಸ್ವರವನ್ನು ಕೇಳಲಾರೆವು, ಆದರೆ ಅವರು ಹಾಕಿಕೊಟ್ಟ ಅಡಿಪಾಯವು ಬಲವಾಗಿ, ಸ್ಥಿರವಾಗಿ ಮತ್ತು ದೃಢವಾಗಿದ್ದು, ‘ನೀವು ಹಟದಿಂದ ಕೆಲಸ ಮಾಡುತ್ತಿರಿ, ನಾವು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ,’ ಎಂಬ ಅವರ ಮಾತನ್ನು ‘ನಿಜ’ ಮಾಡುವಲ್ಲಿ ಮುಂದಿನ ಹೋರಾಟವು ನಿರಂತರವಾಗಿ ಮುಂದುವರಿಯಲಿದೆ.
ನಮ್ಮ ಪ್ರಯತ್ನಕ್ಕೆ ಎಲ್ಲ ಓದುಗರು, ಲೇಖಕರು, ಜಾಹಿರಾತುದಾರರು ಮತ್ತು ಸಂಬಂಧಪಟ್ಟ ಇನ್ನಿತರರೆಲ್ಲರೂ ಅತ್ಯಮೂಲ್ಯವಾದ ಸಾಮರ್ಥ್ಯವನ್ನು ನೀಡಬಲ್ಲರು, ಎಂಬ ವಿಶ್ವಾಸವು ನಮಗಿದೆ.
@@AUTHORINFO_V1@@