ಅಶೋಕ ಸಾಠೆ... ಅಂತರ್ಬಾಹ್ಯ ಶುದ್ಧ ಮನದ ಇಂಜಿನಿಯರ್ ಉದ್ಯಮಿ

@@NEWS_SUBHEADLINE_BLOCK@@

Lohkarya - Udyam Prakashan    03-Feb-2021
Total Views |

1_1  H x W: 0 x
ಅಶೋಕ ಸಾಠೆ- Ashok Sathe
50 ನೇ ದಶಕವೆಂದರೆ ಭಾರತಕ್ಕೆ ಹೊಸ ಹೊಸ ಕನಸುಗಳನ್ನು ಕಾಣುವ ಮತ್ತು ಆಗ ತಾನೇ ಸಿಕ್ಕಿರುವ ಸ್ವಾತಂತ್ರ್ಯದಿಂದ ತಮ್ಮ ದೇಶವನ್ನು ಜಗತ್ತಿನ ಭೂಪಟದಲ್ಲಿ ಪ್ರತಿಬಿಂಬಿಸುವ ಗಹನ ವಿಚಾರಗಳ ಕಾಲವಾಗಿತ್ತು. 1940 ರಲ್ಲಿ ಹುಟ್ಟಿರುವ ಆಶೋಕ ಸಾಠೆ ಇವರು ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಕಾಲ. ಆ ಕಾಲದ ಪ್ರಭಾವ ಮತ್ತು ಆ ಕಾಲದಲ್ಲಿ ಅವರ ಮನಸ್ಸಿನಲ್ಲಿ ತಳವೂರಿರುವ ಗುರಿಗಳು ಅವರ ಸಂಪೂರ್ಣ ವೃತ್ತಿಪರ ಜೀವನದಲ್ಲಿ ಪರಿಣಾಮವನ್ನು ಬೀರುವಂತಿದ್ದವು. 1960 ರಲ್ಲಿ ಕಾಲೇಜ್ ಆಫ್ ಇಂಜಿನಿಯರಿಂಗ್, ಪುಣೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ನಂತರ ಅವರು ಐ.ಐ.ಟಿ. ಮುಂಬಯಿಯಲ್ಲಿ ಮಶಿನ್ ಟೂಲ್ ಡಿಸೈನ್ ನಲ್ಲಿ ಎಮ್.ಟೆಕ್. ಸ್ನಾತಕೋತ್ತರ ಪದವಿಯನ್ನು ಪಡೆದರು. ಭಾರತದಲ್ಲಿ ಇಂಜಿನಿಯರಿಂಗ್ ಉದ್ಯಮಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಸಿ.ಎಮ್.ಟಿ.ಐ. ಎಂಬ ಬೆಂಗಳೂರಿನ ಸರ್ಕಾರಿ ಸಂಸ್ಥೆಯಲ್ಲಿ ಅಶೋಕ ಸಾಠೆ ಇವರು 1963 ರಲ್ಲಿ ಸೇರ್ಪಡೆಯಾದರು. ಜಾಗತಿಕ ಸ್ತರದಲ್ಲಿ ಯಂತ್ರಣೆಯ ಉದ್ಯಮದಲ್ಲಿ ಆಗುತ್ತಿರುವ ಪ್ರಗತಿಯನ್ನು ತಿಳಿದುಕೊಳ್ಳಲು ಮತ್ತು ಅದರಿಂದ ಮುಂದೆ ಆದೇ ರೀತಿಯ ಉತ್ಪಾದನೆಗಳನ್ನು ತಮ್ಮ ದೇಶದಲ್ಲಿ ಮಾಡುವ ಉದ್ದೇಶದಿಂದ, ಸಿ.ಎಮ್.ಟಿ.ಐ.ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಐದು ಭಾರತೀಯ ಯುವಕ ಇಂಜಿನಿಯರ್ ರನ್ನು ಝೆಕೋಸ್ಲೋವಾಕಿಯಾಗೆ ತರಬೇತಿಗೆಂದು ಕಳುಹಿಸಲಾಯಿತು.
 

1_1  H x W: 0 x
 

2_1  H x W: 0 x 
 
ವಿದೇಶದಿಂದ ಆಮದು ಮಾಡಲಾಗುತ್ತಿರುವ ಎಲ್ಲ ರೀತಿಯ ಉತ್ಪಾದನೆಗಳನ್ನು ಭಾರತದಲ್ಲಿಯೇ ತಯಾರಿಸಬೇಕು. ನಾವೆಲ್ಲರೂ ಸ್ವಾವಲಂಬಿಗಳಾಗಬೇಕು, ಎಂಬ ಕನಸು ಸಾಠೆಯವರದ್ದಾಗಿತ್ತು. ಈ ಕನಸನ್ನು ನನಸು ಮಾಡುವ ಗುರಿಯನ್ನು ತಮ್ಮ ಕಣ್ಮುಂದೆ ಇಟ್ಟುಕೊಂಡು 1977-78 ರಲ್ಲಿ ಸಿ.ಎಮ್.ಟಿ.ಐ. ಕಂಪನಿಯ ಉದ್ಯೋಗವನ್ನು ತ್ಯಜಿಸಿ 1978 ರಲ್ಲಿ ಸ್ವಂತದ್ದೇ ಆದ ‘ಪ್ರಗತಿ ಆಟೊಮೆಶನ್’ ಮತ್ತು 1979 ರಲ್ಲಿ ‘ಏಸ್ ಡಿಸೈನರ್ಸ್’ ಎಂಬ ಎರಡು ಕಂಪನಿಗಳನ್ನು ಪ್ರಾರಂಭಿಸಿದರು. ಮೊತ್ತ ಮೊದಲಾಗಿ FIE ಸಮೂಹಕ್ಕೋಸ್ಕರ ಎಸ್.ಪಿ.ಎಮ್. ತಯಾರಿಸುವಾಗಿನಿಂದ ‘ಪ್ರಗತಿ’ ಕಂಪನಿಯ ಪ್ರಾರಂಭವಾಯಿತು. 1986 ರಲ್ಲಿ ಅವರು ಮೊದಲಾಗಿ ಟರೇಟ್ ತಯಾರಿಸುವ ಕೆಲಸವನ್ನು ಕೈಗೆತ್ತಿದರು. ಯುನಿಡೈರೆಕ್ಷನಲ್ ಟರೇಟ್ ನ್ನು ಪ್ರಪ್ರಥಮವಾಗಿ ತಯಾರಿಸಲಾಯಿತು. ನಿಜವಾಗಿ ನೋಡಿದರೆ, ಅಲ್ಲಿಂದಲೇ ‘ಪ್ರಗತಿ’ಯ ಟರೇಟ್ ನ ಪ್ರವಾಸ ಪ್ರಾರಂಭವಾಯಿತು. 1989 ರಲ್ಲಿ ‘ಪ್ರಗತಿ’ಯ ಮೊದಲ ಬೈಡೈರೆಕ್ಷನಲ್ ಟರೇಟ್ ನಿರ್ಮಾಣಗೊಂಡಿತು. 1995 ರಲ್ಲಿ ಪ್ರಗತಿಗೆ ಮೊತ್ತಮೊದಲ, ಅಲ್ಲದೇ ನಿಜವಾಗಿಯೂ ಬೃಹತ್ ಪ್ರಮಾಣದ ಆರ್ಡರ್ ಜಪಾನ್ ನಲ್ಲಿರುವ ಪ್ರಸಿದ್ಧ ಮಿಯಾನೋ ಮಶಿನ್ಸ್ ಇವರಿಂದ ಲಭಿಸಿತು.
 
ರಫ್ತು ಮಾಡುವ ಉತ್ಪಾದನೆಗಳ ಗುಣಮಟ್ಟ ಬೇರೆ ಮತ್ತು ತಮ್ಮ ದೇಶದಲ್ಲಿ ಬಳಸಲು ಬೇರೆ ಗುಣಮಟ್ಟ ಎಂಬ ತಾರತಮ್ಯವನ್ನು ಸಾಠೆ ಇವರು ಎಂದಿಗೂ ಮಾಡಿಲ್ಲ. ಮೊದಲನೇ ದಿನದಿಂದಲೂ ‘ಚೀನಾ ದೇಶದಂತಿರುವ ಬೆಲೆ’ ಮತ್ತು ‘ಯುರೋಪ್ ನಂತಹ ಗುಣಮಟ್ಟ’ ಎಂಬ ನೀತಿಯನ್ನು ತಮ್ಮ ಎಲ್ಲ ಕಂಪನಿಗಳಲ್ಲಿಯೂ ಅವಲಂಬಿಸಿದ್ದರು. ಭಾರತೀಯ ಕೈಗಾರಿಕೋದ್ಯಮಗಳು ಶಾಶ್ವತವಾಗಿ ಹೇಗೆ ಮುಂದುವರಿಯಬಲ್ಲವು ಮತ್ತು ಅದಕ್ಕೋಸ್ಕರ ತಾವು ಬೃಹತ್ ಪ್ರಮಾಣದಲ್ಲಿ ಏನೇನು ಮಾಡಬಲ್ಲೆವು, ಎಂಬ ವಿಚಾರವೇ ಅಶೋಕ ಸಾಠೆ ಇವರದ್ದಾಗಿತ್ತು. ಅಲ್ಲದೇ ಆ ವಿಚಾರಗಳಿಗೆ ಅನುಸಾರವಾಗಿ ಕೃತಿಗೆ ಆದ್ಯತೆಯನ್ನು ನೀಡುತ್ತಿದ್ದರು. ಕಡಿಮೆ ಬೆಲೆ ಮತ್ತು ಬೃಹತ್ ಪ್ರಮಾಣದ ಉತ್ಪಾದನೆ ಈ ನೀತಿಗೆ ಅನುಸಾರವಾಗಿ ‘ಪ್ರಗತಿ’ಯು 1992-93 ರಲ್ಲಿ ಸ್ವಯಂಚಾಲಿತ ಟೂಲ್ ಚೇಂಜರ್ ನ (ATC) ಉತ್ಪಾದನೆಯನ್ನು ಪ್ರಾರಂಭಿಸಿತು. ಇಂದು ಪ್ರತಿ ತಿಂಗಳು ಸುಮಾರು ಒಂದು ಸಾವಿರ ATC ಗಳನ್ನು ತಯಾರಿಸಿ ವಿವಿಧ ಮಶಿನ್ ಉತ್ಪಾದಕರಿಗೆ ಪೂರೈಸಲಾಗುತ್ತಿದೆ.
 
3_1  H x W: 0 x
ಅಶೋಕ ಸಾಠೆ ಇವರು ನಿರಂತರವಾಗಿ ತನ್ನ ಮತ್ತು ಸಹೋದ್ಯೋಗಿಗಳ ಸಾಮರ್ಥ್ಯಕ್ಕೆ ಸವಾಲುಗಳನ್ನು ನೀಡುವ ಹೊಸ ಹೊಸ ವಿಚಾರಗಳನ್ನು ಪ್ರಾರಂಭಿಸಿ ಅವುಗಳನ್ನು ಕಾರ್ಯಗತಗೊಳಿಸುತ್ತಿದ್ದರು. 1997-98 ರಲ್ಲಿ ಅವರು ಸಂಪೂರ್ಣವಾಗಿ ಸ್ವದೇಶದ ಸಿ.ಎನ್.ಸಿ. ಲೇಥ್ ತಯಾರಿಸುವುದನ್ನು ನಿರ್ಧರಿಸಿದರು. ಅದಕ್ಕೋಸ್ಕರವೇ ಸರ್ವೋ ಮೋಟರ್ ಡ್ರೈವ್ ಮತ್ತು ಎನ್ಕೋಡರ್ ಕೂಡಾ ‘ಪ್ರಗತಿ’ಯಲ್ಲಿಯೇ ತಯಾರಿಸಲಾಯಿತು. ಯಾವುದೇ ರೀತಿಯ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ, ಅದರಲ್ಲಿರುವ ಬಿಡಿ ಭಾಗಗಳ ಅಭಿವೃದ್ಧಿ ಮಾಡುವಾಗ, ಯಾರೊಂದಿಗೂ ಸಹಯೋಗವನ್ನು ಮಾಡದೇ ತಾವೇ ಎಲ್ಲ ಕೆಲಸಗಳನ್ನು ನಿರ್ವಹಿಸುವುದು, ಎಂಬ ದೃಢ ನಿರ್ಧಾರವು ಅವರದ್ದಾಗಿತ್ತು. ಇದರಿಂದಾಗಿ ಯಾವುದೇ ಉತ್ಪಾದನೆಯನ್ನು ತಯಾರಿಸುವಲ್ಲಿ ತುಂಬಾ ಸಮಯವು ಬೇಕಾಗುತ್ತಿತ್ತು. ಆದರೆ ಅದರಿಂದ ತಯಾರಾಗುವ ಉತ್ಪಾದನೆಯು ಸಂಪೂರ್ಣವಾಗಿ ಸ್ವದೇಶದ್ದೇ ಇರುತ್ತಿತ್ತು ಮತ್ತು ಅದನ್ನು ಮಾರಾಟ ಮಾಡುವಾಗ ಯಾವುದೇ ರೀತಿಯ ನಿರ್ಬಂಧ ಇರುತ್ತಿರಲಿಲ್ಲ. 1990 ರಿಂದ ಪ್ರತಿವರ್ಷವೂ ‘ಪ್ರಗತಿ’ ಮತ್ತು ‘ಏಸ್ ಸಮೂಹ’ವು ವಿದೇಶದಲ್ಲಿ ಏರ್ಪಡಿಸಲಾಗುತ್ತಿದ್ದ ಎಕ್ಸಿಬಿಶನ್ ಗಳಲ್ಲಿ ಸಹಭಾಗಿಯಾಗುತ್ತಿತ್ತು. ಮಾರುಕಟ್ಟೆಯಲ್ಲಿ ಹೊಸದೇನಿದೆ, ಎಂಬ ಮಾಹಿತಿಯನ್ನು ತಿಳಿದುಕೊಳ್ಳುವುದೇ ಎಕ್ಸಿಬಿಶನ್ ನಲ್ಲಿ ಸಹಭಾಗಿಯಾಗುವ ಉದ್ದೇಶವಾಗಿತ್ತು.

4_1  H x W: 0 x 
 
ಭಾರತೀಯ ಉದ್ಯಮಗಳ ಹೆಚ್ಚಳದಲ್ಲಿ ಐರೋಪ್ಯ ಮತ್ತು ದಕ್ಷಿಣ ಪೂರ್ವ ದೇಶಗಳಂತೆ ಭಾರತೀಯ ಭಾಷೆಗಳು ತಮ್ಮೆಲ್ಲರ ಜ್ಞಾನ ಭಾಷೆಯಾಗಬೇಕು, ಎಂಬ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ಅಶೋಕ ಸಾಠೆ ಇವರು 2007 ರಲ್ಲಿ ‘ಉದ್ಯಮ ಪ್ರಕಾಶನ’ವನ್ನು ಸ್ಥಾಪಿಸಿದರು. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಇಂಜಿನಿಯರ್ ಮತ್ತು ಕೆಲಸಗಾರರಿಗೆ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಜ್ಞಾನ ಮತ್ತು ಮಾಹಿತಿಯು ಅವರವರ ಭಾಷೆಯಲ್ಲಿ ಲಭ್ಯವಾಗಬೇಕು, ಎಂಬ ಗುರಿಯನ್ನಿಟ್ಟುಕೊಂಡು 2017 ರಲ್ಲಿ ಮರಾಠಿ, ಹಿಂದಿ, ಕನ್ನಡ ಮತ್ತು ಗುಜರಾತಿ ಈ ನಾಲ್ಕು ಭಾಷೆಗಳಲ್ಲಿ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಮಾಸ ಪತ್ರಿಕೆಗಳ ಮುದ್ರಣವನ್ನು ಪ್ರಾರಂಭಿಸಿದರು. ಅದೇ ಕಾಲಾವಧಿಯಲ್ಲಿ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಕೈಪಿಡಿಗಳ ಕೆಲಸವನ್ನೂ ಪ್ರಾರಂಭಿಸಲಾಯಿತು.
1963 ರಿಂದ 2020 ಈ 57 ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಅಶೋಕ ಸಾಠೆ ಇವರು ನೀಡಿರುವ ಹುಮ್ಮಸ್ಸು, ಪ್ರೇರಣೆಯಿಂದಾಗಿ ನಮ್ಮ ದೇಶದಲ್ಲಿ ಅನೇಕ ಇಂಜಿನಿಯರ್ ಉದ್ಯಮಿಗಳಾಗಿದ್ದಾರೆ. ಅಲ್ಲದೇ ಅವರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆಯನ್ನಿಟ್ಟು ಮುಂದುವರಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
 
5_1  H x W: 0 x
ಸಾಠೆ ಇವರು ಸಂತುಷ್ಟ, ಪಾರದರ್ಶಕ ಮತ್ತು ಕರ್ತವ್ಯದ ನಿರ್ವಹಣೆಯಲ್ಲಿ ಕಠೋರವಾದ ವ್ಯಕ್ತಿತ್ವವುಳ್ಳ ಬಹುಮುಖ ಪ್ರತಿಭೆ ಮತ್ತು ತೀಕ್ಷ್ಣಮತಿಯ ವ್ಯಕ್ತಿ. ಅವರ ಬಹುಮುಖ ಪ್ರತಿಭೆಯ ಕುರಿತು ಹಲವಾರು ಗಣ್ಯವ್ಯಕ್ತಿಗಳೊಂದಿಗೆ ನಾವು ಸಂಭಾಷಣೆಯನ್ನು ಮಾಡಿದೆವು. ಆ ಸಂಭಾಷಣೆಯಿಂದ ಗಮನಕ್ಕೆ ಬಂದ ಅವರ ಅನೇಕ ಸ್ವಭಾವ ವೈಶಿಷ್ಟ್ಯಗಳ ಪರಿಚಯವನ್ನು ನೀಡುವುದು ಸೂಕ್ತವೆನಿಸುತ್ತದೆ.
ಮಶಿನ್ ಟೂಲ್ ಡಿಸೈನರ್
ಯಾವುದೇ ಉತ್ಪಾದನೆಯ ಡಿಸೈನ್ ಮಾಡುವ ಕೆಲಸವು ಪೂರ್ತಿಯಾಗುತ್ತದೆ. ಹಲವಾರು ಬಾರಿ ಅದೇ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಡಿಸೈನ್ ಕಂಡುಬರುತ್ತದೆ. ಅದರಲ್ಲಿ ಅನೇಕ ರೀತಿಯ ಬದಲಾವಣೆಗಳೂ ಇರುತ್ತವೆ. ಈ ರೀತಿಯ ಬದಲಾವಣೆಗಳನ್ನು ನಮ್ಮಲ್ಲಿ ಉತ್ಪಾದಿತ ಉತ್ಪಾದನೆಗಳ ಡಿಸೈನ್ ನಲ್ಲಿ ತಕ್ಷಣವೇ ಬದಲಾವಣೆಗಳಾಗಬೇಕು, ಎಂಬ ಆತುರದ ಇಚ್ಛೆಯು ಅವರದ್ದಾಗಿತ್ತು. ಡ್ರಾಫ್ಟಿಂಗ್ ಮಾಡುವಾಗ ಯಾವುದೇ ರೀತಿಯ ಲೋಪದೋಷಗಳು ಅಥವಾ ಸಾಮಾನ್ಯವಾದ ಚಿಕ್ಕದಾದ ತಪ್ಪುಗಳನ್ನು ಕೂಡಾ ಅವರು ಸಹಿಸುತ್ತಿರಲಿಲ್ಲ. ಯಾವುದೇ ಉತ್ಪಾದನೆಯ ಡಿಸೈನ್ ತಯಾರಿಸುವ ಮುಂಚೆ ಅದರ ನಿರ್ವಹಣೆಯನ್ನು ಭವಿಷ್ಯತ್ಕಾಲದಲ್ಲಿ ಹೇಗೆ ಮಾಡಬಹುದು, ಎಂಬುದರ ಕುರಿತು ಪ್ರಾರಂಭದಲ್ಲಿಯೇ ವಿಚಾರ ಮಾಡುತ್ತಿದ್ದರು.
ಅನೇಕ ಬಾರಿ ಡಿಸೈನ್ ಮಾಡುವಾಗ ಉತ್ಪಾದನೆಗಳನ್ನು ತಿರಸ್ಕರಿಸಲಾಗುತ್ತಿತ್ತು. ತಮ್ಮ ಅಪೇಕ್ಷೆಯಂತೆ ಯಶಸ್ಸು ಲಭಿಸದಿದ್ದಲ್ಲಿ ಉಂಟಾಗುವ ನಷ್ಟವನ್ನು ಯಾರು ಸರಿಹೊಂದಾಣಿಸುವುದು, ಎಂಬ ಭಯವು ಇಂಜಿನಿಯರ್ ರ ಮನಸ್ಸಿನಲ್ಲಿ ಕಾಡುತ್ತಿತ್ತು. ಆದರೆ ಸಾಠೆಯವರ ಒಂದು ವಿಶಿಷ್ಟವಾದ ತತ್ವವೆಂದರೆ, ಯಾವುದೇ ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಒತ್ತಡ, ಬಗ್ಗುವಿಕೆ, ಸುರುಳಿಯಾಗುವುದು ಅಥವಾ ತುಂಡಾಗುವುದು ಇಂತಹ ಅಡಚಣೆಗಳನ್ನು ಎದುರಿಸಲೇಬೇಕಾಗುತ್ತದೆ. ಇದರಿಂದಾಗಿ ಹೊಸ ಉತ್ಪಾದನೆಗಳ ಡಿಸೈನ್ ತಯಾರಿಸುವಾಗ ಇಂಜಿನಿಯರ್ ನ ಮನಸ್ಸಿನಲ್ಲಿ ಮೂಡಿಬರುತ್ತಿದ್ದ ಭಯವು ಇಲ್ಲದಂತಾಗುತ್ತಿತ್ತು.
ದೂರದೃಷ್ಟಿಯ ಉದ್ಯಮಿ
ಸಾಠೆಯವರೊಂದಿಗೆ ಸುಮಾರು 40 ವರ್ಷಗಳ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅತುಲ್ ಭಿರಂಗಿ ಇವರ ಅನಿಸಿಕೆಯಂತೆ, ಸಾಠೆಯವರ ವ್ಯಕ್ತಿತ್ವದಲ್ಲಿ ಒಂದು ಹೊಸತನತನದಿಂದ ಕೂಡಿರುವ ವಿಚಾರಗಳ ಇಂಜಿನಿಯರ್ ಮತ್ತು ಹೊಸ ದಾರಿಯನ್ನು ನಿರ್ಮಿಸಿ ರಾಷ್ಟ್ರಭಕ್ತಿ ಪ್ರಸ್ತುತ ಪಡಿಸುವ ಉದ್ಯಮಿಯ ವಿಶೇಷವಾದ ಸಂಗಮ. ಒಬ್ಬ ಮಾರ್ಗದರ್ಶಕ ಗುರು ಎಂಬುದಾಗಿ ಅವರ ಕುರಿತು ಶ್ರೀ. ಭಿರಂಗಿ ಅವರು ಹೇಳುತ್ತಾರೆ, ‘‘ಕಾರ್ಖಾನೆಯಲ್ಲಿ ಎಲ್ಲರೊಂದಿಗೆ ನೇರವಾದ ಸಂಬಂಧ ಇರುವುದರಿಂದ ಮುಕ್ತ ಮತ್ತು ವಿಶ್ವಾಸಾರ್ಹತೆಯುಳ್ಳ ವಾತಾವರಣ ತಯಾರಿಸಿದ್ದ, ನಮ್ರತೆಯುಳ್ಳ ಸಾಠೆ ಸರ್ ಇವರು, ಯಾವಾಗಲಾದರೂ ಸಿಟ್ಟು ಮಾಡಿ ಮಾತನಾಡುತ್ತಿದ್ದರೂ ಕೂಡಾ, ಎಂದಿಗೂ ಯಾರನ್ನೂ ತುಚ್ಛರೆಂದು ಪರಿಗಣಿಸಲಿಲ್ಲ. ಬೆಲೆಯನ್ನು ಕಡಿಮೆ ಇಟ್ಟಿದ್ದರಿಂದಲೇ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯವನ್ನು ನಿರ್ಮಿಸಬಹುದು, ಎಂಬ ದೃಢವಾದ ವಿಶ್ವಾಸ ಮತ್ತು ಅದನ್ನು ಸಾಧಿಸಲು ಬೇಕಾಗಿರುವ ತಾಳ್ಮೆಯು ಅವರಲ್ಲಿತ್ತು. ಭಾರತೀಯ ಉತ್ಪಾದನೆಗಳನ್ನು ರಫ್ತು ಮಾಡಿ ದೇಶ ಮತ್ತು ಕಾರ್ಖಾನೆಯಲ್ಲಿ ಪ್ರತಿಯೊಬ್ಬರ ಅಭಿಮಾನವನ್ನು ವೃದ್ಧಿಸುವಲ್ಲಿ ಅವರಲ್ಲಿ ಪ್ರಾಮಾಣಿಕವಾದ ಇಚ್ಛೆಯು ಇತ್ತು. ತಮಗೆ ಬೇಕಾಗಿರುವ ಮಶಿನ್ ಗಳನ್ನು ಆಮದು ಮಾಡದೇ, ಅವುಗಳನ್ನು ಸ್ವಂತ ತಯಾರಿಸಬೇಕು, ಉದ್ಯಮಿಗಳ ಪ್ರಗತಿಗೆ ಸಾವ ಪಡೆಯಬೇಕಾದಲ್ಲಿ ಅಗತ್ಯವಾಗಿ ಪಡೆಯಲೇ ಬೇಕು, ಸರ್ವೋತ್ಕೃಷ್ಟವಾದ ನಿರ್ಮಿತಿಗೆ ಏನೇನು ಆವಶ್ಯಕವಿದೆಯೇ, ಅವೆಲ್ಲವನ್ನೂ ಮಾಡಲೇಬೇಕು, ಈ ರೀತಿಯ ನೀತಿಯು ಅವರದ್ದಾಗಿತ್ತು. ಸ್ಪಷ್ಟವಾದ ವಿಚಾರಗಳಿರುವುದರಿಂದ ಚೀನಾದಂತಹ ದೇಶದಲ್ಲಿ ತಮ್ಮ ಸ್ವಂತ ಕಾರ್ಖಾನೆಯನ್ನು ಪ್ರಾರಂಭಿಸುವಂತಹ ಸಾಹಸದ ನಿರ್ಧಾರವನ್ನು ಅವರು ಮಾಡಿದರು. ಅದರಿಂದ ಇನ್ನಿತರ ಭಾರತೀಯ ಉದ್ಯಮಿಗಳಿಗೆ ಪ್ರೇರಣೆಯು ಲಭಿಸಬೇಕು, ಎಂಬ ವಿಚಾರವೇ ಅದರಲ್ಲಿತ್ತು.’’
 
ಭಾರತೀಯ ಮಶಿನ್ ಟೂಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಏಸ ಮೈಕ್ರೊಮ್ಯಾಟಿಕ್ ಸಮೂಹವನ್ನು ಅಶೋಕ ಸಾಠೆ, ಶ್ರೀನಿವಾಸ ಶಿರ್ಗುರ್ಕರ್ ಮತ್ತು ಬಿ. ಮಚಾಡೋ ಈ ಮೂರು ಯುವ ಇಂಜಿನಿಯರ್ ಪ್ರಾರಂಭಿಸಿದರು. ಅದರ ಸವಿನೆನಪುಗಳುಳ್ಳ ಪ್ರವಾಸದ ಕುರಿತು ಶ್ರೀನಿವಾಸ ಶಿರ್ಗುರ್ಕರ್ ಮತ್ತು ಬಿ. ಮಚಾಡೊ ಹೇಳುತ್ತಾರೆ, “ನಾವು CMTI ಯಿಂದ ಈ ತನಕ ಸುಮಾರು 40 ರಿಂದ 50 ವರ್ಷಗಳ ಕಾಲಾವಧಿಯಲ್ಲಿ ಒಟ್ಟಾಗಿಯೇ ಕೆಲಸ ಮಾಡಿದ್ದೇವೆ. ಭಾರತದಲ್ಲಿ ತಯಾರಿಸಲಾಗುವ ಎಲ್ಲ ಉತ್ಪಾದನೆಗಳು ಜಾಗತಿಕ ಗುಣಮಟ್ಟದ್ದಾಗಿಬೇಕು, ಎಂಬ ಕನಸು ಇತ್ತು. ಇದೇ ಅವರ ‘ಪ್ಯಾಶನ್’ ಆಗಿತ್ತು. ನಾವು ಸಾಠೆ ಇವರೊಂದಿಗೆ ಏಸ್ ಡಿಸೈನರ್ಸ್ ಈ ಕಂಪನಿಯನ್ನು 1979 ರಲ್ಲಿ ಒಂದು ಮನೆಯ ಗ್ಯಾರೇಜ್ ನಲ್ಲಿ ಆರಂಭಿಸಿದೆವು.’’
“ಯಾವುದೇ ವಸ್ತುವಿನ ನಿರ್ಮಿತಿಯನ್ನು ಮಾಡುವಾಗ ಅದಕ್ಕೆ ಬೇಕಾಗುವ ಎಲ್ಲ ಬಿಡಿಭಾಗಗಳನ್ನು ನಾವೇ ತಯಾರಿಸಬೇಕು. ಅಲ್ಲದೇ ಮಾಡಲಾಗುವ ಉತ್ಪಾದನೆಯು ಜಾಗತಿಕ ಗುಣಮಟ್ಟದ್ದೇ ಇರಬೇಕು, ಎಂಬುದಾಗಿ ಅವರು ಒತ್ತಾಯಿಸುತ್ತಿದ್ದರು. ನಾವು ತಯಾರಿಸುವ ಉತ್ಪಾದನೆಯ ಬೆಲೆಯು ಮಾರುಕಟ್ಟೆಯಲ್ಲಿರುವ ಇನ್ನಿತರ ಉತ್ಪಾದನೆಗಳಿಗಿಂತ ಕಡಿಮೆಯೇ ಇರಬೇಕು. ಕ್ಲಿಷ್ಟ ಭಾಗಗಳ (ಕ್ರಿಟಿಕಲ್ ಕಂಪೋನಂಟ್) ನಿರ್ಮಾಣವೂ ನಮ್ಮಲ್ಲಿ ಆಗಲೇಬೇಕು, ಎಂಬುದನ್ನು ದೃಢಸಂಕಲ್ಪವು ಅವರದ್ದಾಗಿತ್ತು. ಈ ರೀತಿಯ ಗುರಿಯಿಂದಾಗಿ ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸುವುದು ಅವರಿಗೆ ಸಾಧ್ಯವಾಯಿತು. ಅವರು ತಮ್ಮ ಪ್ರವಾಸದಲ್ಲಿ ‘ಬ್ಯಾಕ್ ವರ್ಡ್ ಇಂಟಿಗ್ರೇಶನ್ ಅಪ್ರೋಚ್’ ಅವಲಂಬಿಸಿದ್ದರು.
 
“ತಮ್ಮ ಗ್ರೂಪ್ ನ ಬೋರ್ಡ್ ಮೀಟಿಂಗ್ ನಲ್ಲಿ ಅವರು ಹೆಚ್ಚಾಗಿ ಸಹಭಾಗಿಗಳಾಗುತ್ತಿರಲಿಲ್ಲ. ಆದರೆ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಚರ್ಚೆಯನ್ನು ಮಾಡುವುದಾದಲ್ಲಿ ಅವರು ಹುಮ್ಮಸ್ಸಿನಿಂದ ಹಾಜರಾಗುತ್ತಿದ್ದರು. ಇಂತಹ ಅವಕಾಶಗಳಲ್ಲಿ ಅವರು ಯಾವಾಗಲೂ ಸಕಾರಾತ್ಮಕವಾದ ವೀಕ್ಷಣೆಯ ಮತ್ತು ಚರ್ಚೆಯ ಪಾತ್ರವನ್ನು ವಹಿಸುತ್ತಿದ್ದರು. ಯಾವುದೇ ವಿಷಯದ ಕುರಿತಾದ ಅವರ ವಿಚಾರಗಳನ್ನು ಅವರು ಎಂದಿಗೂ ಇನ್ನೊಬ್ಬರಿಗೆ ಹೇರುತ್ತಿರಲಿಲ್ಲ ಅಥವಾ ಇಂತಹ ವಿಚಾರಗಳ ಕುರಿತು ಯಾವುದೇ ಒತ್ತಡವನ್ನೂ ನೀಡುತ್ತಿರಲಿಲ್ಲ. ತಮ್ಮೆದುರು ಮಾತನಾಡುವವನ ಅಭಿಪ್ರಾಯಗಳನ್ನು ತಿಳಿದುಕೊಳ್ಳುವಾಗಲೂ ಅವರು ಯಾವಾಗಲೂ ತಮ್ಮ ಮನಸ್ಸನ್ನು ಕೇಂದ್ರೀಕರಿಸಿ ಏಕಾಗ್ರತೆಯಿಂದ ಆಲಿಸುತ್ತಿದ್ದರು. ತಮ್ಮೆದುರು ಅಭಿಪ್ರಾಯಗಳನ್ನು ನೀಡುವವನ ಮನಸ್ಸನ್ನು ಎಂದಿಗೂ ನೋಯಿಸಬಾರದು, ಎಂಬ ಸ್ವಭಾವವು ಅವರದ್ದಾಗಿತ್ತು. ಅವರು ಶುದ್ಧ ಮತ್ತು ನಿರ್ಮಲ ಹೃದಯ ಮತ್ತು ಮನಸ್ಸಿನವರಾಗಿದ್ದರು.’’
ಅವರಲ್ಲಿ ದೂರದೃಷ್ಟಿಯ (ವಿಜನರಿ) ವಿಚಾರಗಳಿದ್ದವು. ಮುಂದಿನ ಹತ್ತು ವರ್ಷಗಳ ನಂತರ ನಾವು ಯಾವ ಹಂತಕ್ಕೆ ತಲುಪಬಲ್ಲೆವು, ಅಂದು ಮಾರುಕಟ್ಟೆಯ ಸ್ಥಿತಿಯು ಹೇಗಿರಬಹುದು, ಅದಕ್ಕೆ ಅನುಸಾರವಾಗಿಯೇ ಕೆಲಸ ಮಾಡಬೇಕು, ಎಂಬ ದೂರದೃಷ್ಟಿಯು ಅವರಲ್ಲಿತ್ತು. ತಾವು ಇಂದು ಬಂಡವಾಳವನ್ನು ಹೂಡಿರಿ, ನಾಳೆ ನಿಮಗೆ ಅದರಿಂದ ಖಂಡಿತವಾಗಿಯೂ ಮರುಪಾಪತಿ, ಆದಾಯ ಲಭಿಸುತ್ತದೆ, ಎಂಬ ವಿಶ್ವಾಸವು ಅವರಲ್ಲಿ ಬೇರೂರಿತ್ತು. ಅವರ ಶ್ರಮಕ್ಕೆ ಮತ್ತು ಯಶಸ್ಸಿನ ಪ್ರವಾಸಕ್ಕೆ ಕೃತಜ್ಞತೆಯಾಗಿ 2011ರಲ್ಲಿ ಅವರಿಗೆ ಎರಡನೇ IMTMA- Vinod Doshi Outstanding Entrepreneur Award in Machine Tools ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವ್ಯವಸ್ಥಾಪನೆ
ಕಳೆದ 40 ವರ್ಷಗಳು ‘ಪ್ರಗತಿ’ಯಲ್ಲಿ ಕಾರ್ಯನಿರತರಾಗಿರುವ ದೀಪಕ್ ಜೋಗಳೇಕರ್ ಇವರು ಅಶೋಕ ಸಾಠೆಯವರ ವ್ಯವಸ್ಥಾಪನೆಯ ವೈಶಿಷ್ಟ್ಯಗಳ ಕುರಿತು ಈ ಮುಂದಿನಂತೆ ವಿವರಿಸುತ್ತಾರೆ.
1. ತಮ್ಮ ತಂಡದಲ್ಲಿರುವ ಇಂಜಿನಿಯರ್ ಅಥವಾ ಸಹೋದ್ಯೋಗಿಗಳಿಗೆ ನಿರಂತರವಾಗಿ ಸವಾಲುಗಳನ್ನು ಎದುರಿಸಲು ಪ್ರೇರೇಪಿಸುವುದು.
2. ಯಾವುದೇ ಒಂದು ಹೊಣೆಗಾರಿಕೆಯನ್ನು, ಅದು ಯಾವುದೇ ರೀತಿಯ ಉತ್ಪಾದನೆಯ ಅಭಿವೃದ್ಧಿಗೆ ಸಂಬಂಧಪಟ್ಟದ್ದಾಗಿರಲಿ ಅಥವಾ ಯಾವುದೇ ಸಂಪೂರ್ಣ ಯುನಿಟ್ ನಡೆಸುವುದೇ ಇರಲಿ, ಯಾರೊಬ್ಬ ಸಹೋದ್ಯೋಗಿಗೆ ನೀಡಿದ ನಂತರ ಆ ವ್ಯಕ್ತಿಯಲ್ಲಿ ಸಂಪೂರ್ಣ ವಿಶ್ವಾಸವನ್ನು ಇಡುವುದೇ, ಅವರ ಕೆಲಸ ರೀತಿಯಾಗಿತ್ತು.
3. ಪ್ರತಿಯೊಬ್ಬರಿಗೆ ಅವರವರ ಕೆಲಸಕ್ಕೆ ಸಂಬಂಧಿಸಿರುವ ಎಲ್ಲ ವಿಷಯಗಳ ಆಳವಾದ ಮಾಹಿತಿ ಇರಲೇಬೇಕು, ಎಂಬ ಒತ್ತಾಯವು ಅವರದ್ದಾಗಿತ್ತು. ಯಾವುದೇ ಮೆಕ್ಯಾನಿಕಲ್ ಇಂಜಿನಿಯರ್ ಗೆ ಯಾವುದೇ ಒಂದು ಯಂತ್ರದ ದುರಸ್ತಿಯನ್ನು ಮಾಡುವ ಪರಿಸ್ಥಿತಿ ಉದ್ಭವಿಸಿದಲ್ಲಿ ಎರಡು ತಂತಿಗಳನ್ನು ಜೋಡಿಸಲು ಇನ್ನೊಬ್ಬ ಇಂಜಿನಿಯರ್ ನ್ನು ಕರೆಯುವ ಅಥವಾ ಸಹಾಯವನ್ನು ಕೇಳುವ ಕೆಲಸದ ಸಂಸ್ಕೃತಿಯು ಅವರದ್ದಾಗಿರಲಿಲ್ಲ.
4. ಕಾರ್ಖಾನೆಯಲ್ಲಿ ತಯಾರಿಸಲಾಗುವ ಉತ್ಪಾದನೆಗಳ ಉತ್ಪಾದನೆಯ ಖರ್ಚು ಸಾಕಷ್ಟು ಕಡಿಮೆ ಮಾಡಬೇಕು, ಎಂಬುದರ ಕುರಿತು ಅವರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಕಡಿಮೆ ಖರ್ಚಿನಲ್ಲಿ ಬೃಹತ್ ಪ್ರಮಾಣದ ಉತ್ಪಾದನೆ ಎಂಬ ತತ್ವವನ್ನು ಅವರು ಪ್ರಾರಂಭಿದಿಂದ ಕೊನೆಯ ತನಕವೂ ಅನುಸರಿಸಿದ್ದರು.
5. ಉತ್ಪಾದನೆ ಮಾಡುತ್ತಿರುವಾಗಲೂ ಅದರಲ್ಲಿ ತಾಂತ್ರಿಕವಾದ ಸುಧಾರಣೆಗಳನ್ನು ನಿರಂತರವಾಗಿ ಹೇಗೆ ಮಾಡಬಹುದು, ಎಂಬುದರ ಕುರಿತು ಒತ್ತಾಯಿಸುತ್ತಿದ್ದರು.
6. ಪ್ರಚಲಿತ ಉನ್ನತ ವ್ಯವಸ್ಥಾಪನೆಯ ಮಾತುಕತೆಯಲ್ಲಿ ಎಂದಿಗೂ ಅವರು ಸಿಲುಕಿಲ್ಲ. ಉಚ್ಚ ಗುಣಮಟ್ಟದ ಉತ್ಪಾದನೆಯನ್ನು ಸೂಕ್ತವಾದ ಬೆಲೆಯಲ್ಲಿ ಮಾರುಕಟ್ಟೆಗೆ ನೀಡುವುದು, ಎಂಬ ತತ್ವವನ್ನು ಅವರು ತಮ್ಮ ಎಲ್ಲ ವ್ಯವಹಾರಗಳಲ್ಲಿ ಅವಲಂಬಿಸಿದ್ದರು.
7. ತಾತ್ಕಾಲಿಕವಾಗಿ ಆಗುವ ಲಾಭ-ನಷ್ಟಗಳನ್ನು ಅವರು ಯಾವಾಗಲೂ ಭವಿಷ್ಯತ್ಕಾಲದಲ್ಲಿ ಮಾಡಬೇಕಾದ ಬದಲಾವಣೆಗಳ ಗುರಿಯೆಂದು ತಿಳಿಯುತ್ತಿದ್ದರು. ಈ ರೀತಿಯ ವ್ಯವಹಾರವನ್ನು ಮಾಡುವಾಗ ಒಂದು ವೇಳೆ ನಷ್ಟವುಂಟಾದರೂ ಕೂಡಾ ತಾವು ನೀಡಿರುವ ಮಾತನ್ನು ಕಾಪಾಡುವುದು ಮತ್ತು ಉತ್ಪಾದನೆಯ ಕುರಿತಾದ ಹೆಸರನ್ನು ಶಾಶ್ವತವಾಗಿ ಉಳಿಯುವಂತೆ ಮುನ್ನಚ್ಚರಿಕೆಯನ್ನು ವಹಿಸುವುದಕ್ಕೋಸ್ಕರ ಯಾವುದೇ ರೀತಿಯ ದೃಢ ನಿರ್ಧಾರವನ್ನು ಅವರು ಮಾಡುತ್ತಿದ್ದರು.
8. ಗ್ರಾಹಕರಲ್ಲಿ ಮತ್ತು ಪೂರೈಕೆಗಾರರಲ್ಲಿ ಸಂಪೂರ್ಣವಾದ ವಿಶ್ವಾಸವನ್ನು ಇಡುವುದು ಮತ್ತು ತಮ್ಮಲ್ಲಿ ಇನ್ನಿತರರು ಇಟ್ಟಿರುವ ವಿಶ್ವಾಸಕ್ಕೆ ಯಾವುದೇ ರೀತಿಯ ಕುಂದು ಬರಬಾರದು ಎಂಬ ನೀತಿಯನ್ನು ಅವರು ತಮ್ಮ ಇಡೀ ಆಯುಷ್ಯದಲ್ಲಿ ಅನುಸರಿಸಿದರು.
9. ಗ್ರಾಹಕರಿಗೆ ಮಶಿನ್ ಮಾರಾಟ ಮಾಡಿದ ನಂತರ ಅವರಿಗೆ ತಾವೇ ಮಾರಾಟದ ನಂತರದ ಸೇವೆಯನ್ನು ನೀಡುವ ಪರಿಕಲ್ಪನೆಯನ್ನು ಅವರು 80 ರ ದಶಕದಿಂದಲೇ ಕಾರ್ಯಗತಗೊಳಿಸಿದರು.
10. ಹೊಸ ಹೊಸ ಪರಿಕಲ್ಪನೆಗಳ ಡಿಸೈನ್ ಮಾಡುವ ಕೆಲಸವನ್ನು ಈ ತನಕ ಅವರು ನಿರಂತರವಾಗಿ ಮಾಡುತ್ತಲೇ ಇದ್ದರು. ಅದರೊಂದಿಗೆ ಕಾರ್ಖಾನೆಯಲ್ಲಿರುವ ಮಶಿನ್ ಹತ್ತಿರ ಹೋಗಿ ಅದರ ಕುರಿತಾಗಿ ವಿಚಾರಿಸುವುದು, ಅದರಲ್ಲಿ ಉದ್ಭವಿಸಿರುವ ಅಡಚಣೆಗಳನ್ನು ದೂರ ಮಾಡುವುದನ್ನೂ ಅವರು ಕೊನೆಯ ತನಕವೂ ಮಾಡುತ್ತಿದ್ದರು. ಕಾರ್ಖಾನೆಯ ಹೊಕ್ಕುಳಬಳ್ಳಿಯನ್ನು ಎಂದಿಗೂ ತುಂಡರಿಸಲು ಬಿಡಲೇ ಇಲ್ಲ.
11. ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯಾವುದೇ ಕೆಲಸಗಾರರಿರಲಿ, ಸಿಬಂಧಿಯಾಗಲಿ, ಉನ್ನತ ಹುದ್ದೆಯವರಾಗಲಿ ಎಲ್ಲರೊಂದಿಗೂ ಅವರು ಸಮಾನವಾದ ಭಾವನೆಯಿಂದ ಮತ್ತು ಆತ್ಮೀಯತೆಯಿಂದಲೇ ಮಾತುಕತೆಯನ್ನು ಮಾಡುತ್ತಿದ್ದರು. ಇದರಿಂದಾಗಿ ಕಂಪನಿಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ನಿರ್ಮಾಣವಾಗಿರುವ ಪರಸ್ಪರ ಪ್ರೀತಿ-ವಿಶ್ವಾಸವೇ ಅವರ ವ್ಯವಸ್ಥಾಪನೆಯ ಬೆನ್ನೆಲುಬಾಗಿತ್ತು.
12. ತನಗೆ ಸರಿ ಎಂದು ಅನಿಸಿರುವ ಯಾವುದೇ ವಿಚಾರವನ್ನು, ಅದಕ್ಕೆ ಎಷ್ಟೇ ವಿರೋಧವಾದರೂ ಕೂಡಾ ಅಡಚಣೆಗಳು ನಿರ್ಮಾಣವಾದರೂ ಕೂಡಾ, ಅದನ್ನು ದೃಢ ಮತ್ತು ಅವಿರತ ಪ್ರಯತ್ನದಿಂದ ಹಿಂಬಾಲಿಸಿ ಪೂರ್ತಿ ಮಾಡುವುದೇ, ಅವರ ಗುಣವೈಶಿಷ್ಟ್ಯವಾಗಿತ್ತು.
ಮಾರ್ಗದರ್ಶಕರು
‘ಸ್ಫೂರ್ತಿ’ ಈ ಕಂಪನಿಯಲ್ಲಿ ರಾಮಚಂದ್ರ ಪುರೋಹಿತ್ ಇವರು ಸಾಠೆ ಇವರೊಂದಿಗೆ ಸುಮಾರು 26 ವರ್ಷಗಳ ಕಾಲಾವಧಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪುರೋಹಿತ್ ಹೇಳುತ್ತಾರೆ, ‘‘ಅವರ ಆಧಾರ, ಮಾರ್ಗದರ್ಶನ, ಸಹಕಾರದಿಂದಾಗಿ ನಾವು ಸ್ಫೂರ್ತಿ ಕಂಪನಿಯನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾದೆವು. ಅವರ ಸಹಕಾರದಿಂದಲೇ ಇಂದು ನಾವು ಸ್ಥಳೀಯ ಮತ್ತು ವಿದೇಶದ ಮಾರುಕಟ್ಟೆಯಲ್ಲಿ ನಮ್ಮ ಉತ್ಪಾದನೆಗಳ ಮಾರಾಟವನ್ನು ಮಾಡುತ್ತಿದ್ದೇವೆ.’’
‘ಪ್ರಗತಿ’ಯಲ್ಲಿ ಸಾಠೆಯವರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ನಿರ್ವಹಿಸುತ್ತಿರುವ ದಿನೇಶ್ ಹೇಳುತ್ತಾರೆ, ‘‘ಕಂಪನಿಯಲ್ಲಿ ಸೇರ್ಪಡೆಯಾಗುವ ಹೊಸ ಇಂಜಿನಿಯರ್ ಗೆ ಡ್ರಾಯಿಂಗ್ ಓದಲು ಕಲಿಸುವುದರಿಂದ ಪ್ರಾರಂಭಿಸಿ ಅದನ್ನು ಕಾರ್ಖಾನೆಯಲ್ಲಿ ಪ್ರತ್ಯಕ್ಷವಾಗಿ ಬಳಸುವ ರೀತಿಯನ್ನು ಹೇಳಿ, ತಮ್ಮ ಅನುಭವಗಳನ್ನು ಹಂಚಿಕೊಂಡು, ಯಾವುದೇ ಒಂದು ಯೋಜನೆಯನ್ನು ಸ್ವತಂತ್ರವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ನೀಡುವ ತನಕ ಸಾಠೆ ಇವರು ಅವರೆಡೆಗೆ ಗಮನ ಹರಿಸುತ್ತಿದ್ದರು. ಇಂಜಿನಿಯರ್ ರಲ್ಲಿ ಉದ್ಯಮಿಯಾಗುವ ಸಾಮರ್ಥ್ಯವು ಹೇಗೆ ಮೂಡಿಬರಬಲ್ಲದು, ಮುಂತಾದ ಅಂಶಗಳ ಕುರಿತು ತರಬೇತಿ, ಮಾರ್ಗದರ್ಶನ ಮತ್ತು ಸಲಹೆಯನ್ನು ನಿರಂತರವಾಗಿ ಸಾಠೆಯವರು ನೀಡುತ್ತಿದ್ದರು.’’
ಪ್ರಗತಿಯಲ್ಲಿ ಸಾಠೆಯವರೊಂದಿಗೆ ನಿಕಟವಾಗಿ ಕೆಲಸ ನಿರ್ವಹಿಸುತ್ತಿದ್ದ ದಿನೇಶ್ ಹೇಳುತ್ತಾರೆ, “ಕಂಪನಿಯಲ್ಲಿ ಹೊಸದಾಗಿ ಸೇರ್ಪಡೆಯಾಗುವ ಇಂಜಿನಿಯರ್ ಗೆ ಡ್ರಾಯಿಂಗ್ ಓದಲು ಕಲಿಸುವುದರಿಂದ ಪ್ರಾರಂಭಿಸಿ ಅದನ್ನು ಕಾರ್ಖಾನೆಯಲ್ಲಿ ಪ್ರತ್ಯಕ್ಷವಾಗಿ ಕೆಲಸ ನಿರ್ವಹಿಸುವುದರ ಕುರಿತು ಹೇಳಿ, ಯಾವುದೇ ಒಂದು ಯೋಜನೆಯ ಜವಾಬ್ದಾರಿಯನ್ನು ಸ್ವತಂತ್ರವಾಗಿ ಅವನಿಗೆ ನೀಡುವ ತನಕ ಸಾಠೆಯವರು ಖುದ್ದಾಗಿ ಗಮನ ಹರಿಸಿ, ಉದ್ಯಮಿಯೆಂದು ರೂಪಿಸುವಲ್ಲಿ ಅವನಲ್ಲಿ ಸಾಮರ್ಥ್ಯ ಹೇಗೆ ಬರಬಲ್ಲದು, ಇಂತಹ ಪಾಠಗಳನ್ನು ಅವರು ನೀಡುತ್ತಿದ್ದರು.’’
 
ಇಂಜಿನಿಯರಿಂಗ್ ಉದ್ಯಮದಲ್ಲಿ ಅಸಂಖ್ಯರು ಅಶೋಕ ಸಾಠೆ ಇವರ ‘ಏಕವಲ್ಯನ ಪರಂಪರೆಯ’ ಶಿಷ್ಯರಾಗಿದ್ದರು. ಕಳೆದ 40 ವರ್ಷಗಳ ಕಾಲಾವಧಿಯಲ್ಲಿ ಮಶಿನ್ ಟೂಲ್ ಕ್ಷೇತ್ರಕ್ಕೆ ಸಂಬಂಧಿಸಿರುವ ಕೆಲಸವನ್ನು ನಿರ್ವಹಿಸುತ್ತಿರುವ ಪ್ರದೀಪ ಖರೆ ಹೇಳುತ್ತಾರೆ, ‘‘1995 ರ ಇಂಪ್ಟೆಕ್ಸ್ ನಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ತಾವು ತಯಾರಿಸುವ ಎಲ್ಲ ಉತ್ಪಾದನೆಗಳು ನಿಜವಾಗಿಯೂ ಉಚ್ಚಮಟ್ಟದ್ದಾಗಿವೆ. ಅದರಲ್ಲಿ ನಿರಂತರತೆಯನ್ನು ಕಾಪಾಡಿದಲ್ಲಿ ಭಾರತದ ಸಮೃದ್ಧಿಯಾಗಲು ಜಾಸ್ತಿ ಸಮಯವು ತಗಲಲಾರದು, ಎಂಬುದಾಗಿ ನನಗೆ ಅವರು ಹೇಳಿದರು. ಅವರ ಇದೊಂದು ವಾಕ್ಯವು ನನಗೆ ಮುಂದಿನ ಆಯುಷ್ಯಕ್ಕೆ ಸ್ಪೂರ್ತಿಯನ್ನು ನೀಡಿತು. ಅವರಲ್ಲಿದ್ದ ಪ್ರತಿಭೆ, ಜ್ಞಾನದ ಪ್ರಖರತೆಯು ನನಗೆ ಮಾತ್ರವಲ್ಲದೇ, ಸಂಪೂರ್ಣ ಉದ್ಯಮದ ವಿಶ್ವಕ್ಕೆ ಒಂದು ಆಕರ್ಷಣೆಯಾಗಿತ್ತು. ಗಂಭೀರವಾದ ಸಮಸ್ಯೆಗಳಿಗೆ ಗಡಿಬಿಡಿಯಲ್ಲಿ ಯಾವುದೇ ಉಪಾಯವನ್ನು ಸೂಚಿಸಿದಲ್ಲಿ, ‘ಗಡಿಬಿಡಿ ಮಾಡಬೇಡಿ, ವಿಚಾರವನ್ನು ತಿಳಿದುಕೊಳ್ಳಿ, ತಕ್ಷಣ ಧೈರ್ಯವನ್ನು ಬಿಡಬೇಡಿ. ಇಂದು ಯಾವುದೇ ಲಾಭವಾಗದಿದ್ದರೂ ಕೂಡಾ ಮುಂದೆ ಅದರಿಂದ ನಷ್ಟವನ್ನು ತುಂಬಿಸುವಂತಹ ಲಾಭವಾಗಬಲ್ಲದು. ಇದರಿಂದಾಗಿ ಮುನ್ನೆಚ್ಚರಿಕೆ ವಹಿಸಿ,’’ ಎಂಬುದಾಗಿ ಹುರುಪನ್ನು ನೀಡುತ್ತಿದ್ದರು. ಇಂತಹ ಸಲಹೆಯು ನನಗೆ ನನ್ನ ಕೆಲಸದಲ್ಲಿ ಬದಲಾವಣೆಗಳನ್ನು ಮಾಡುವಲ್ಲಿ ಹುಮ್ಮಸ್ಸನ್ನು ನೀಡಿತು. ಅವರೊಂದಿಗೆ ಸಂಭಾಷಣೆಯನ್ನು ಮಾಡುತ್ತಿರುವಾಗ ಪ್ರೋತ್ಸಾಹನೆಯು ಸಿಗುತ್ತಿತ್ತು. ಇದರಿಂದಾಗಿ ಸಾಠೆಯವರೆಂದರೆ ಒಂದು ಶಕ್ತಿ, ಬಲ, ಎನರ್ಜಿಯ ನಿರಂತರವಾದ ಪ್ರವಾಹದ ಒಂದು ಮೂಲವೇ ಆಗಿತ್ತು.’’
ಲೌಕಿಕ ಜೀವನದಲ್ಲಿ ಆವಶ್ಯಕತೆ ಇರುವವರಿಗೆ ಅನೇಕ ರೀತಿಯ ಸಹಾಯವನ್ನು ಮಾಡುತ್ತಿದ್ದ ಸಾಠೆಯವರು ತಮ್ಮ ವೈಯಕ್ತಿಕ ಜೀವನದಲ್ಲಿಯೂ ವಿವಿಧ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದರು. ವಿಶೇಷವಾಗಿ ವಿದ್ಯಾಭ್ಯಾಸಕ್ಕೋಸ್ಕರ ಅವರು ಹೊರಗಿನ ಸಂಸ್ಥೆಗಳಿಗೆ ಸಹಾಯ ಮಾಡುವುದರೊಂದಿಗೆ ಅವರ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರ ಕುಟುಂಬದವರಿಗೂ ವಿದ್ಯಾಭ್ಯಾಸವನ್ನು ಮುಂದುವರಿಸಲು, ಪೂರ್ತಿಗೊಳಿಸಲು ನಿರಂತರವಾಗಿ ಉದಾರ ಸಹಾಯ ಮಾಡುತ್ತಿದ್ದರು. ಆದರೆ ಇದರ ಕುರಿತು ಯಾವುದೇ ರೀತಿಯ ಸಂಭಾಷಣೆ, ಪ್ರಚಾರವಾಗದಂತೆ ಮುತುವರ್ಜಿಯನ್ನು ವಹಿಸುತ್ತಿದ್ದರು.
 
ಬೆರಳೆಣಿಕೆಯಷ್ಟೇ ಕಂಪನಿಗಳು ಮಶಿನ್ ಟೂಲ್ ಗಳನ್ನು ತಯಾರಿಸುತ್ತಿರುವ ಕಾಲಾವಧಿಯಲ್ಲಿ ಅಶೋಕ ಸಾಠೆಯವರು ಭಾರತೀಯ ಉತ್ಪಾದನೆಗಳು ಜಾಗತಿಕ ಸ್ತರದಲ್ಲಿ ಸನ್ಮಾನಿತ ಸ್ಥಾನವನ್ನು ಪಡೆಯಬಲ್ಲವು ಎಂಬ ಕನಸನ್ನು ಕಾಣುತ್ತಿದ್ದರು ಮತ್ತು ಕೆಲವೇ ದಶಕಗಳಲ್ಲಿ ಅದು ಪೂರ್ತಿಯಾಯಿತು. ಕೊನೆಯ ತನಕ ಹೊಸತನವನ್ನು ಸ್ವೀಕರಿಸಿ ಮತ್ತು ಹೊಸ ತಂತ್ರಜ್ಞಾನವನ್ನು ಕಲಿತು, ಅದರೊಂದಿಗೆ ಹೊಂದಾಣಿಸಿಕೊಳ್ಳುವ ಕಾತರದ ಇಂಜಿನಿಯರ್, ಅಂತರ್ಬಾಹ್ಯ ನಿರ್ಮಲ ಮನಸ್ಸಿನ ವ್ಯಕ್ತಿಯಾಗಿದ್ದರು. ಪ್ರಸ್ತುತ ಕಾರ್ಯನಿರತರಾಗಿರುವ ಮತ್ತು ಭವಿಷ್ಯತ್ಕಾಲದಲ್ಲಿ ಎಷ್ಟೋ ಪೀಳಿಗೆಗಳಿಗೆ ಅಶೋಕ ಸಾಠೆ ಇವರು ಶಾಶ್ವತವಾದ ಪ್ರಚೋದನೆ.
9595031562
ದೀಪಕ ದೇವಧರ (ಸಂಪಾದಕರು ‘ಲೋಹಕಾರ್ಯ’ ಮಾಸ ಪತ್ರಿಕೆ)
@@AUTHORINFO_V1@@