‘ಲೋಹಕಾರ್ಯ’ದ ಎಲ್ಲ ಓದುಗರಿಗೆ, ಲೇಖಕರಿಗೆ, ಜಾಹಿರಾತುದಾರರಿಗೆ ಮತ್ತು ಹಿತ್ತೈಷಿಗಳಿಗೆ ಹೊಸವರ್ಷದ ಮತ್ತು ಮುಂಬರುವ ಹೊಸ ದಶಕದ ಶುಭಾಶಯಗಳು!
2020 ಈ ವರ್ಷವು ಯಾವಾಗ ಮುಗಿಯುತ್ತದೆ, ಎಂಬ ಭಾವನೆಯನ್ನು ಎಲ್ಲರಲ್ಲಿತ್ತು. ಕಳೆದ ವರ್ಷದಲ್ಲಿ ಕಾಡ್ಗಿಚ್ಚು, ಭೂಕಂಪ ಮತ್ತು ಚಂಡಮಾರುತದಂತಹ ಅನೇಕ ನೈಸರ್ಗಿಕ ದುರಂತಗಳು ಸಂಭವಿಸಿದ್ದವು. ಅದರೊಂದಿಗೆ ಎಂದಿಗೂ ಯಾರೂ ಕಾಣದಂತಹ ಕೋವಿಡ್ ಎಂಬ ವಿಷಾಣುವಿನ ಆಕ್ರಮಣವು ಸಂಪೂರ್ಣ ಮಾನವ ಜಾತಿಯನ್ನು ನಿಸ್ಸಹಾಯಕವಾಗಿ ಮಾಡಿತು. ಸಂಪೂರ್ಣ ಜಗತ್ತು ಇಂತಹ ಭಯಂಕರ ಸಂಕಷ್ಟವನ್ನು ಎದುರಿಸಲು ಅನೇಕ ರೀತಿಯ ಪರ್ಯಾಯಗಳೊಂದಿಗೆ ಅಲ್ಲದೇ ಮಾನವಜಾತಿಯೇ ಒದ್ದಾಡುತ್ತಿತ್ತು. ಇಂತಹ ಗಂಭಿರ ಪರಿಸ್ಥಿತಿಯಿಂದಾಗಿ ತಮ್ಮ ದೈನಂದಿನ ಜೀವನ ನಡೆಸುವ ಹೊಸ ರೀತಿಯನ್ನು ಸ್ವೀಕರಿಸಿ, ಕಲಿತು ಬಹು ದೊಡ್ಡ ಸ್ತಬ್ಧವಾಗಿದ್ದ ಸ್ಥಿತಿಯಿಂದ ಹೊರಗೆ ಬರುತ್ತಿದ್ದಾರೆ. ಎರಡನೇ ಮಹಾಯುದ್ಧದ ನಂತರ ಅಂಗೀಕರಿಸಿರುವ ಜೀವನದ ರೀತಿಯನ್ನು ರೂಢೀಕರಿಸಿದಂತೆ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಕೋವಿಡ್ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಹೊಸ ಜೀವನದ ಶೈಲಿಯನ್ನು ಅವಲಂಬಿಸಲು ಮಾನವ ಜಾತಿಯು ನಿರತವಾಗಿದೆ.
ನಿಂತು ಹೋಗಿರುವ ವ್ಯವಹಾರಗಳನ್ನು ಮತ್ತೆ ಪ್ರಾರಂಭಿಸುವಾಗ ಉತ್ಪಾದನೆಯ ಕ್ಷೇತ್ರದಲ್ಲಿರುವವರು ತಮ್ಮೆದುರು ಉದ್ಭವಿಸಿರುವ ಸವಾಲುಗಳನ್ನು ಎದೆಗಾರಿಕೆಯಿಂದ ಎದುರಿಸುತ್ತಿದ್ದಾರೆ. ಅದರಲ್ಲಿ ಯಶಸ್ಸನ್ನು ಕಾಣಲು ಪ್ರಾರಂಭಿಸಿದ್ದಾರೆ. ಸರ್ಕಾರಿ ಯೋಜನೆಗಳ ಸಕಾರಾತ್ಮಕ ಆಧಾರ ಮತ್ತು ಪರಸ್ಪರ ಸಾಮರಸ್ಯ ಇವುಗಳಿಂದಾಗಿ ಭಾರತದ ಉತ್ಪಾದನೆಯನ್ನು ಮಾಡುವ ಉದ್ಯಮಗಳು ಮತ್ತೆ ಭರದಿಂದ ಕಾರ್ಯನಿರತವಾಗಿವೆ. 2020 ಈ ವರ್ಷದಲ್ಲಿ ಅಂದಾಜು 43 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಭಾರತೀಯ ಉತ್ಪಾದನೆಯ ಕ್ಷೇತ್ರದಲ್ಲಿ ಹೂಡಲಾಗಿದೆ. 2016 ರಿಂದ 2020 ಈ ಕಾಲಾವಧಿಯಲ್ಲಿ ಭಾರತೀಯ ಉದ್ಯಮ ಕ್ಷೇತ್ರದಲ್ಲಿ CAGR ಅಂದರೆ ಕಂಪೌಂಡ್ ಎನ್ಯುವಲ್ ಗ್ರೋಥ್ ರೇಟ್ ಇದು ಶೇಕಡಾ 5 ರಷ್ಟಿದೆ. ಇದರಲ್ಲಿ ಉತ್ಪಾದನೆಯ ಉದ್ಯಮಗಳ ಬೆನ್ನೆಲುಬಾಗಿರುವ ವಾಹನೋದ್ಯೋಗವು ಮುಂಚೂಣಿಯಲ್ಲಿದೆ. ಈ ಉದ್ಯಮಕ್ಕೆ ಬೇಕಾಗುವ ಬಿಡಿ ಭಾಗಗಳನ್ನು ಪೂರೈಸುವ ಉತ್ಪಾದನೆಯನ್ನು ಮಾಡುವ ಉದ್ಯಮಗಳು ಮತ್ತೆ ವೇಗವಾಗಿ ತಮ್ಮ ಕೆಲಸವನ್ನು ನಿರ್ವಹಿಸುವಲ್ಲಿ ಶ್ರಮ ವಹಿಸುತ್ತಿರುವುದು ಗಮನಕ್ಕೆ ಬರುತ್ತಿದೆ. 2016 ರಿಂದ 2020 ಈ ಕಾಲಾವಧಿಯಲ್ಲಿ ಈ ಕ್ಷೇತ್ರದ CAGR ಶೇಕಡಾ 6 ರಷ್ಟು ನೊಂದಾಯಿಸಲಾಗಿದೆ. ಕೇವಲ ಸ್ವದೇಶದ ಮಾರುಕಟ್ಟೆಯಲ್ಲದೇ, ವಿದೇಶದ ಮಾರುಕಟ್ಟೆಯಲ್ಲಿಯೂ ಭಾರತೀಯ ಉತ್ಪಾದನೆಗಳಿಗೆ ಬೇಡಿಕೆಯು ವೃದ್ಧಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ಇರುವ ಟರ್ನ್ ಓವರ್ ನಲ್ಲಿ ಶೇಕಡಾ 21 ರಷ್ಟು ರಫ್ತು ಮಾಡುವುದರಿಂದ ಲಭಿಸಿದೆ, ಎಂಬುದನ್ನು 2021 ಈ ವರ್ಷದ ಅಪೇಕ್ಷಿಸಿರುವ ವರದಿಯಲ್ಲಿ ಹೇಳಲಾಗುತ್ತಿದೆ. ಯುರೋಪ್ ಮತ್ತು ಲ್ಯಾಟಿನ್ ಅಮೇರಿಕಾ ದೇಶಗಳ ಹೋಲಿಕೆಯಲ್ಲಿ ಭಾರತದಲ್ಲಿ ಉತ್ಪಾದನೆಯ ಖರ್ಚು ಶೇಕಡಾ 15 ರಿಂದ 20 ಕಡಿಮೆ ಇದೆ. ಅಲ್ಲದೇ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ನೀತಿಯಿಂದ ಹೊಸ ಅವಕಾಶಗಳೂ ಲಭ್ಯವಾಗಿವೆ. ಇದರಿಂದಾಗಿ ಎಕ್ಸ್ ಪೋರ್ಟ್ ಮಾಡುವ ಪ್ರಮಾಣವು ವೃದ್ಧಿಸುವ ಸ್ಥಿತಿಯು ಉಂಟಾಗಿದೆ.
ಕಳೆದ ವರ್ಷದಲ್ಲಿ ಉದ್ಭವಿಸಿರುವ ಪರಿಸ್ಥಿತಿಯು ಪ್ರತಿಯೊಬ್ಬರಿಗೂ ಅನೇಕ ರೀತಿಯ ಪಾಠಗಳನ್ನು ಕಲಿಸಿದೆ. ತಮ್ಮ ನಿಜವಾದ ಆವಶ್ಯಕತೆಗಳು ಏನಿವೆ, ಎಂಬುದನ್ನು ಸಾಮಾನ್ಯ ಜನರಿಗೆ, ಹಾಗೆಯೇ ಉದ್ಯಮಗಳಿಗೂ ಸೇರಿದಂತೆ ಎಲ್ಲರಿಗೂ ನಿಜವಾಗಿಯೂ ತಿಳಿದಿದೆ. ದೈನಂದಿನ ಜೀವನದಲ್ಲಿ ಸಂಭಾಷಣೆ, ಚಟುವಟಿಕೆಗಳು, ಕೆಲಸ ಮಾಡುವ ರೀತಿ ಇಂತಹ ಅನೇಕ ಅಂಶಗಳು ಈ ಹೊಸತನದಿಂದ ಕಾರ್ಯನಿರತವಾಗುತ್ತಿರುವುದು ಕಂಡುಬರುತ್ತಿದೆ. ಹಿಂದಿನ ಅನೇಕ ವರ್ಷಗಳಿಂದ IT ಕ್ಷೇತ್ರದಲ್ಲಿ ಅನುಸರಿಸುತ್ತಿರುವ ‘ವರ್ಕ್ ಪ್ರಮ್ ಹೋಮ್’ ಎಂಬ ಸವಲತ್ತು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಕಾಲೂರುತ್ತಿದೆ. ಅದಕ್ಕೆ ಅನುಗುಣವಾಗಿ ತಮ್ಮ ಕಾರ್ಯಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇಂತಹ ಕಾರ್ಯಪದ್ಧತಿಗಳನ್ನು ಸಕ್ಷಮವಾಗಿ ಕಾರ್ಯಗತಗೊಳಿಸಲು ಉತ್ಪಾದನೆಯ ಕ್ಷೇತ್ರದಲ್ಲಿಯೂ ಅತ್ಯಾಧುನಿಕ ಉಪಕರಣಗಳನ್ನು ಮತ್ತು ಸಿಸ್ಟಮ್ ಗಳನ್ನು ಬಳಸಲಾಗುತ್ತಿದೆ. ತಮ್ಮ ಉತ್ಪಾದನೆಗಳನ್ನು ಸೂಕ್ತ ಸಮಯದಲ್ಲಿ, ಉಚ್ಚಮಟ್ಟದಲ್ಲಿ ಮತ್ತು ಕನಿಷ್ಠ ಖರ್ಚಿನಲ್ಲಿ ಮಾಡುವಲ್ಲಿ ಪಾರಂಪಾರಿಕವಾಗಿರುವ ಉತ್ಪಾದನೆಯ ರೀತಿಯಲ್ಲಿ ಬದಲಾವಣೆಗಳು ಆಗುತ್ತಿರುವುದು ಗಮನಕ್ಕೆ ಬರುತ್ತಿದೆ.
ಉತ್ಪಾದಕರಿಗೆ ಮತ್ತು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ತಂತ್ರಜ್ಞರಿಗೆ ಲಭ್ಯವಿರುವ ಹೊಸ ತಂತ್ರಗಳ ಕುರಿತು ‘ಲೋಹಕಾರ್ಯ’ವು ಯಾವಾಗಲೂ ಸರ್ವತೋಮುಖ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದೆ. ಹಿಂದಿನ ದಶಕದಿಂದ ಯಂತ್ರಣೆಯ ಉದ್ಯಮದ ಯಾವುದೇ ಕಾರ್ಖಾನೆಯಲ್ಲಿ ಸಿ.ಎನ್.ಸಿ. ಮಶಿನ್ ಇರುವುದು ಸಾಮಾನ್ಯವಾದ ಅಂಶವಾಗಿದೆ. ಲಘು, ಮಧ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯಮಿಗಳು ಕೂಡಾ ಈಗ ಬಹು ಅಕ್ಷಿಯ ಮಶಿನ್ ಗಳನ್ನು ಬಳಸಲಾರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ವೃದ್ಧಿಸುತ್ತಿರುವ ಬೇಡಿಕೆ, ಇದೇ ಇದಕ್ಕೆ ಕಾರಣ. ವೇಗವಾಗಿ ತಯಾರಾಗುವ ಯಂತ್ರಭಾಗಗಳು ಅಥವಾ ಉತ್ಪಾದನೆಗಳು ‘ಝೀರೋ ಡಿಫೆಕ್ಟ್ - ಝೀರೋ ಇಫೆಕ್ಟ್’ ಎಂಬುದರಲ್ಲಿ ಹೇಗೆ ಸ್ಪಂದಿಸಬಲ್ಲವು, ಎಂಬ ಕುರಿತು ಹೆಚ್ಚು ಗಮನ ಹರಿಸುವುದು ಅತ್ಯಾವಶ್ಯಕವಾಗಿದೆ. ಅಂದರೆ ಉತ್ಪಾದನೆಗಳ ಗುಣಮಟ್ಟದ ಆವಶ್ಯಕತೆ ಇದ್ದೇ ಇದೆ, ಆದರೆ ಅದರಿಂದಾಗಿ ಹವಾಮಾನದಲ್ಲಿ ಯಾವುದೇ ರೀತಿಯ ವಿಪರೀತ ಪರಿಣಾಮ ಉಂಟಾಗಬಾರದು, ಎಂಬುದನ್ನು ತಾವು ಅಪೇಕ್ಷಿಸುವುದಲ್ಲದೇ, ಅದು ಈಗ ಆವಶ್ಯಕತೆಯಾಗಿದೆ. ಇದಕ್ಕೋಸ್ಕರವೇ ಗೇಜಿಂಗ್ ಮತ್ತು ಮೆಟ್ರಾಲಾಜಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿರುವ ಉಪಕರಣಗಳು ಬರಲಾರಂಭಿಸಿವೆ. ಗೇಜಿಂಗ್ ಮತ್ತು ಮೆಟ್ರಾಲಾಜಿ ಇದೇ ಪ್ರಮುಖವಾದ ವಿಷಯವಿರುವ ಈ ಸಂಚಿಕೆಯಲ್ಲಿ ನಿಖರವಾಗಿ ಮತ್ತು ಕ್ಷಣಾರ್ಧದಲ್ಲಿ ಮಾಡಲಾಗುವ ಮಾಪನಗಳಿಗೋಸ್ಕರ ಲೇಸರ್, ಹಾಗೆಯೇ ಕ್ಯಾಮೆರಾ ಬಳಸಿ ಶೇಕಡಾ 100 ರಷ್ಟು ನಿಖರವಾದ ಪರೀಕ್ಷೆಯನ್ನು ಹೇಗೆ ಮಾಡಬಹುದು, ಈ ಕುರಿತು ವಿಸ್ತಾರವಾದ ಮಾಹಿತಿಯನ್ನು ಓದಬಹುದು. ಅತ್ಯಾಧುನಿಕ ಉಪಕರಣಗಳನ್ನು ಉತ್ಪಾದನೆಯ ವ್ಯವಸ್ಥೆಯಲ್ಲಿ ಅಳವಡಿಸುವಾಗ ಕಾರ್ಖಾನೆಯಲ್ಲಿ ಪಾರಂಪಾರಿಕವಾದ ಪರೀಕ್ಷೆಯ ಉಪಕರಣಗಳ ಮುತುವರ್ಜಿಯನ್ನು ಹೇಗೆ ವಹಿಸಬೇಕು, ಹಾಗೆಯೇ ಅವುಗಳ ಕ್ಯಾಲಿಬ್ರೇಶನ್ ನ ಮಹತ್ವವನ್ನು ತಿಳಿಸುವ ಲೇಖನವೂ ತಮಗೆ ಇನ್ನಷ್ಟು ಉಪಯುಕ್ತವಾಗಲಿದೆ.
ಈ ತನಕ ತಾವೆಲ್ಲರೂ ‘ಲೋಹಕಾರ್ಯ’ಕ್ಕೆ ನೀಡಿರುವ ಸಹಕಾರವು ಮುಂದಿನ ದಶಕದಲ್ಲಿಯೂ ಹೆಚ್ಚು ದೃಢವಾಗಬಲ್ಲದು, ಎಂಬ ವಿಶ್ವಾಸವು ನಮಗಿದೆ. ಅದಕ್ಕೋಸ್ಕರ ಸಾಕಷ್ಟು ಪ್ರಮಾಣದಲ್ಲಿ ಜ್ಞಾನ ತುಂಬಿರುವ ತಮ್ಮೆಲ್ಲರ ಲೇಖನಗಳನ್ನು ಓದುಗರು ಇಷ್ಟಪಡುವಂತಾಗಲಿ, ಎಂಬುದನ್ನು ತಮ್ಮಿಂದ ಅಪೇಕ್ಷಿಸಲಾಗಿದೆ.
ದೀಪಕ ದೇವಧರ