ಓರೆಯಾಗಿರವ ಸರ್ಫೇಸ್ ನಲ್ಲಿ ಡ್ರಿಲ್ಲಿಂಗ್ ಹೇಗೆ ಮಾಡಲಾಗುತ್ತದೆ ಮತ್ತು ಯಂತ್ರಣೆಯನ್ನು ನಿರ್ದೋಷವಾಗಿ ಮತ್ತು ಯೋಗ್ಯ ವಿಧದಲ್ಲಿ ಹೇಗೆ ಮಾಡಬೇಕು ಎಂಬುದನ್ನು ಲೋಹಕಾರ್ಯ ಜೂನ್ 2020 ತಿಂಗಳ (ಕಳೆದ ಸಂಚಿಕೆಯಲ್ಲಿ) ತಿಳಿದುಕೊಂಡೆವು. ಅದರೊಂದಿಗೆ ಅದಕ್ಕೋಸ್ಕರ ಬೇಕಾಗಿರುವ ಹಲವಾರು ಅಂಶಗಳನ್ನು ನಾವು ಗಮನಿಸಬೇಕು.
1.ಟೂಲಿಂಗ್ ಗೋಸ್ಕರ ರಂಧ್ರಗಳನ್ನು ಮಾಡದೇ ಈ ಜಿಗ್ ಗಳನ್ನು ತಯಾರಿಸುವುದು ಅಸಾಧ್ಯವಾಗಿದೆ.
2.ಟೂಲಿಂಗ್ ರಂಧ್ರಗಳ ಸ್ಥಾನಗಳನ್ನು ನಿರ್ಧರಿಸುವುದನ್ನು ಡಿಸೈನ್ ಮಾಡುವವನೇ ನಿರ್ಧರಿಸಬೇಕು.
3.ಕಾರ್ಯವಸ್ತುವಿನ ಸರ್ಫೇಸ್ ಓರೆಯಾಗಿರುವುದರಿಂದ ಬುಶ್ ಗಳ ಕೆಳಭಾಗದ ಸರ್ಫೇಸ್ ಕೂಡಾ ಕಾರ್ಯವಸ್ತುವಿನ ಸರ್ಫೇಸ್ ವಿಗೆ ಸಮಾನಾಂತರವಾಗಿರುವ ಓರೆಯಾಗಿ ತಯಾರಿಸಬೇಕಾಗುತ್ತದೆ.
4. ಕಾರ್ಯವಸ್ತುವಿನ ಓರೆಯಾಗಿರುವ ಸರ್ಫೇಸ್ ಮತ್ತು ಬುಶ್ ನ ಓರೆಯಾದ ಸರ್ಫೇಸ್ ಇದರಲ್ಲಿ ಕನಿಷ್ಠ ದೂರವನ್ನು ಇಡುವುದು ಅತ್ಯಾವಶ್ಯಕವಾಗಿದೆ. ಒಂದು ವೇಳೆ ದೂರವು ಹೆಚ್ಚು ಇದ್ದಲ್ಲಿ, ಡ್ರಿಲ್ ಸಿಲುಕಬಹುದು ಮತ್ತು ಕಾರ್ಯವಸ್ತುವು ವ್ಯರ್ಥವಾಗುತ್ತದೆ.
ಈ ಲೇಖನದಲ್ಲಿ ಫ್ಲೇಟ್ ಟಾಪ್ ಡ್ರಿಲ್ ಜಿಗ್ ನ ಅಭ್ಯಾಸವನ್ನು ಮಾಡಲಿದ್ದೇವೆ. ಈ ರೀತಿಯ ಜಿಗ್ ಗಳಲ್ಲಿ ಅನೇಕ ಬಾರಿ ಆವಶ್ಯಕತೆ ಇದ್ದರೆ ಮಾತ್ರ ಕಾರ್ಯವಸ್ತು ಕ್ಲ್ಯಾಂಪ್ ನ ಸಹಾಯದಿಂದಲೇ ಹಿಡಿದಿಡಲಾಗುತ್ತದೆ. ಈ ಜಿಗ್ ನಲ್ಲಿ ಅದನ್ನು ಎರಡು ರಂಧ್ರಗಳಲ್ಲಿ ಲೊಕೇಟ್ ಮಾಡಲಾಗಿದೆ. ಹಾಗೆಯೇ ಆ ಜಿಗ್ ಬಟನ್ ನಲ್ಲಿ ಅಳವಡಿಸಲಾಗಿದೆ. ನಾವು ಈ ಜಿಗ್ ನಲ್ಲಿ (ಚಿತ್ರ ಕ್ರ. 1) ವಿವಿಧ ಭಾಗಗಳ ಕಾರ್ಯವಸ್ತುಗಳ ಕೆಲಸಗಳನ್ನು ನೋಡೋಣ.
1. ಜಿಗ್ ಪ್ಲೇಟ್
ಜಿಗ್ ಪ್ಲೇಟ್ ನ ಗಾತ್ರವು ಅಂಕುಡೊಂಕಾಗಿದೆ. ಒಂದು ವೇಳೆ ಚೌಕಟ್ಟಾದ ಗಾತ್ರವಿರುವ ಪ್ಲೇಟ್ ಪಡೆದರೆ, ಅದರ ಭಾರವು ತುಂಬಾ ಹೆಚ್ಚಾಗಬಹುದು, ಎಂದು ನಮ್ಮ ಗಮನಕ್ಕೆ ಬಂತು. ಹಾಗೆಯೇ ಕೆಲಸಗಾರರಿಗೆ ಪ್ರತಿಯೊಂದು ಕಾರ್ಯವಸ್ತುಗಳನ್ನು ಮಾಡುವಾಗ ಎರಡು ಸಲ ಜಿಗ್ ಪ್ಲೇಟ್ ಎತ್ತಬೇಕಾಗಬಹುದು. ಇದರಿಂದಾಗಿ ಜಿಗ್ ಪ್ಲೇಟ್ ನ ಭಾರವು ಸಾಧ್ಯವಾದಷ್ಟು ಮಟ್ಟಿಗೆ ಕನಿಷ್ಠ ಪ್ರಮಾಣದಲ್ಲಿ ಇಡುವುದು ಅತ್ಯಾವಶ್ಯಕವಾಗಿದೆ. ಅದರಂತೆಯೇ ಈ ಪ್ಲೇಟ್ ನಲ್ಲಿ ØD1, ØD2 ಮತ್ತು ØD3 ಈ ರೀತಿಯ 3 ರಂಧ್ರಗಳನ್ನು ಮಾಡಲಾಗಿದೆ. ಈ ರಂಧ್ರಗಳನ್ನು ಭಾರ ತುಂಬಾ ಕಡಿಮೆ ಆಗಲೆಂದೇ ಮಾಡಲಾಗಿದೆ, ಎಂಬುದು ತಮ್ಮ ಗಮನಕ್ಕೆ ಬರಬಹುದು. ಜಿಗ್ ಪ್ಲೇಟ್ ಗಳನ್ನು ಇಡಲು ಮತ್ತು ಎತ್ತಲು ಸುಲಭವಾಗಲು ಎರಡೂ ಹ್ಯಾಂಡಲ್ ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಗ್ ಪ್ಲೇಟ್ ನ ಗಾತ್ರವು ತುಂಬಾ ಚಿಕ್ಕದಾಗಿರುವುದರಿಂದ ಅದರ ಭಾರವು ಮಿತಿಯಲ್ಲಿದೆ. ಸಾಧ್ಯವಾದಷ್ಟು ಮಟ್ಟಿಗೆ ಭಾರವು 12 ರಿಂದ 13 ಕಿ.ಗ್ರಾಂ.ಗಿಂತ ಹೆಚ್ಚು ಇರಬಾರದು, ಆದರೆ ಈ ಪ್ಲೇಟ್ ಎತ್ತಲು ಸುಲಭವಾಗಿರಬೇಕು. ಈ ರೀತಿಯ ಜಿಗ್ ಪ್ಲೇಟ್ ಯಾವಾಗ ಬಳಸುವುದು ಎಂಬುದಕ್ಕೋಸ್ಕರ ಈ ಕೆಳಗಿನ ಅಂಶಗಳನ್ನು ನೀಡಲಾಗಿದೆ.
• ಕಾರ್ಯವಸ್ತುವಿನ ಭಾರವು ಹೆಚ್ಚು ಇರುವಾಗ, ಕಾರ್ಯವಸ್ತುವಿನ ಗಾತ್ರವು ದೊಡ್ಡದಾಗಿರುತ್ತದೆ ಅಥವಾ ನಿರ್ವಹಿಸಲು ಕಷ್ಟವಾಗಿರುತ್ತದೆ, ಆ ಪರಿಸ್ಥಿತಿಯಲ್ಲಿ ಈ ವಿಧದ ಜಿಗ್ ಪ್ಲೇಟ್ ಬಳಸಲಾಗುತ್ತದೆ. ಕಾರಣ ಕಾರ್ಯವಸ್ತುವನ್ನು ಹೋಲಿಸಿದಲ್ಲಿ ಈ ಜಿಗ್ ಪ್ಲೇಟ್ ಹಗುರ ಮತ್ತು ಗಾತ್ರದಲ್ಲಿ ಅಚ್ಚುಕಟ್ಟಾಗಿ ಮತ್ತು ನಿರ್ವಹಿಸಲು ಸುಲಭವಾಗಿರುತ್ತದೆ.
• ಚಿಕ್ಕ ಗಾತ್ರದ ರಂಧ್ರಗಳನ್ನು ಮಾಡುವಾಗ ಯಂತ್ರಣೆಯ ಬಲವು ಕಡಿಮೆ ಇರುವುದರಿಂದ ಲೊಕೇಟಿಂಗ್ ಪಿನ್ ತುಂಡಾಗುವ ಅಥವಾ ಜಿಗ್ ಪ್ಲೇಟ್ ನೊಂದಿಗೆ ಕಾರ್ಯವಸ್ತು ತಿರುಗುವ ಅಪಾಯವಿರುವುದಿಲ್ಲ.
• ಥ್ರೆಡಿಂಗ್ ಇರುವ ರಂಧ್ರಗಳನ್ನು ಮಾಡಬೇಕಾದಲ್ಲಿ ಈ ರೀತಿಯನ್ನು ಬಳಸಬಾರದು. ಕಾರಣ ಕಚ್ಚುಗಳನ್ನು ಮಾಡುವಾಗ ಅಥವಾ ಟ್ಯಾಪ್ ಮೇಲೆ ತೆಗೆಯುವಾಗ ಕಾರ್ಯವಸ್ತು ಮೇಲೆ ಎತ್ತುವ ಸಾಧ್ಯತೆ ಇರುತ್ತದೆ ಮತ್ತು ಇದರಿಂದಾಗಿ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ. ಕಾರ್ಯವಸ್ತು ಹಾಳಾಗಬಹುದು ಅಥವಾ ಟ್ಯಾಪ್ ತುಂಡಾಗಬಹುದು.
ಮೊದಲಾಗಿ ಜಿಗ್ ಬಟನ್ ಗೆ ಬೇಕಾಗುವ 6 ರಂಧ್ರಗಳನ್ನು H7 ಮಿತಿಯಲ್ಲಿಯೇ ಮಾಡಲಾಯಿತು. ಈ ಎಲ್ಲ 6 ಬಟನ್ ಗಳನ್ನು ಜಿಗ್ ನ ಪ್ಲೇಟ್ ನಲ್ಲಿ ಮಾಡಿರುವ ರಂಧ್ರಗಳಲ್ಲಿ ಪ್ರೆಸ್ ಫಿಟ್ ಅಳವಡಿಸಿದನಂತರ ಜಿಗ್ ಬಟನ್ ನ ಸರ್ಫೇಸ್ ನ ಒಂದೇ ಹಂತದಲ್ಲಿ ಗ್ರೈಂಡಿಂಗ್ ಮಾಡಲಾಯಿತು. ಈಗ ಈ ಜಿಗ್ ಬಟನ್ ನಲ್ಲಿ ಜಿಗ್ ಪ್ಲೇಟ್ ಅಳವಡಿಸಿ ನಂತರ ಜಿಗ್ ಪ್ಲೇಟ್ ನಲ್ಲಿರುವ ಎಲ್ಲ ಮಹತ್ವದ ರಂಧ್ರಗಳನ್ನು ±0.01 ಮಿ.ಮೀ. ಟಾಲರನ್ಸ್ ನಲ್ಲಿ ತಯಾರಿಸಲಾಯಿತು. ಈ ರೀತಿಯಲ್ಲಿ ಯಂತ್ರಣೆಯನ್ನು ಮಾಡಿದ್ದರಿಂದ ಎಲ್ಲ ಮಹತ್ವದ ರಂಧ್ರಗಳು ಜಿಗ್ ಬಟನ್ ನ ಸರ್ಫೇಸ್ ನಲ್ಲಿ ವರ್ಟಿಕಲ್ ಆಗುತ್ತವೆ.
•ರೌಂಡ್ ಲೊಕೇಟಿಂಗ್ ಪಿನ್ ಮತ್ತು ಡೈಮಂಡ್ ಲೊಕೇಟಿಂಗ್ ಪಿನ್ ಅಳವಡಿಸಲು ಬೇಕಾಗುವ ರಂಧ್ರಗಳನ್ನು H7 ನ ಮಿತಿಯಲ್ಲಿ ಮಾಡಲಾಯಿತು.
•ಕಾರ್ಯವಸ್ತುವಿನಲ್ಲಿ 12 ರಂಧ್ರಗಳನ್ನು ಮಾಡಲು ಯಾವ ಬುಶ್ ಗಳನ್ನು ಅಳವಡಿಸಲಾಗಿದೆಯೋ, ಅದಕ್ಕೋಸ್ಕರ ಯಾವ ರಂಧ್ರಗಳನ್ನು ಜಿಗ್ ಪ್ಲೇಟ್ ನಲ್ಲಿ ಮಾಡಬೇಕಾಗುತ್ತವೆ, ಅವುಗಳು H7 ಮಿತಿಯಲ್ಲಿ ಮಾಡಲಾಯಿತು.
2. ರೌಂಡ್ ಲೊಕೇಟಿಂಗ ಪಿನ್
ಕಾರ್ಯವಸ್ತುವಿನ ರಂಧ್ರದ ಗಾತ್ರವು Ø36 H7 ಈ ಮಿತಿಯಲ್ಲಿದೆ. ಇದರಿಂದಾಗಿ ರೌಂಡ್ ಲೊಕೇಟಿಂಗ್ ಪಿನ್ ನ ವ್ಯಾಸವು Ø36 f8 ಹೀಗೆ ನಿಯಂತ್ರಿಸಲಾಗಿದೆ. ಈ ಪಿನ್ ನ ಜಿಗ್ ಪ್ಲೇಟ್ ನ ಹೊರಗೆ ಇರುವ ಉದ್ದ ಎಷ್ಟು ಇಡಬೇಕು ಇದಕ್ಕೆ ಈ ಮುಂದೆ ನೀಡಿರುವ ಮುತುವರ್ಜಿಯನ್ನು ವಹಿಸುವುದು ಅತ್ಯಾವಶ್ಯಕವಾಗಿದೆ.
•ರೆಸ್ಟ್ ಬಟನ್ ನ ಸರ್ಫೇಸ್ ಕಾರ್ಯವಸ್ತುವಿನ ಸರ್ಫೇಸ್ ಸ್ವಲ್ಪ ಮೇಲೆ ಇರುವಾಗ (ಸಾಮಾನ್ಯವಾಗಿ 5 ಮಿ.ಮೀ.) ರೌಂಡ್ ಲೊಕೇಟಿಂಗ್ ಪಿನ್ ಸಾಮಾನ್ಯವಾಗಿ ವ್ಯಾಸದಷ್ಟು ರಂಧ್ರದ ಒಳಗೆ ಹೋಗಿರಬೇಕು. ಈ ಜಿಗ್ ನ ಕುರಿತು ಅದು 30 ಮಿ.ಮೀ.ನಷ್ಟು ಒಳಗೆ ಇರಲೇಬೇಕು.
•ರೌಂಡ್ ಲೊಕೇಟಿಂಗ್ ಪಿನ್ ಕಾರ್ಯವಸ್ತುವಿನಲ್ಲಿ ಸಾಮಾನ್ಯವಾಗಿ ಅರ್ಧ ವ್ಯಾಸದಷ್ಟು ಒಳಗೆ ಹೋದ ನಂತರ ಡೈಮಂಡ್ ಪಿನ್ ಕಾರ್ಯವಸ್ತುವಿನಲ್ಲಿ ಇರುವ ರಂಧ್ರದಲ್ಲಿ ಹೋಗಲು ಪ್ರಾರಂಭಿಸಬೇಕು. ಅಂದರೆ ರೌಂಡ್ ಪಿನ್ ಡೈಮಂಡ್ ಪಿನ್ ಗಿಂತ ಹೆಚ್ಚು ಉದ್ದವಾಗಿರುವುದು ಅತ್ಯಾವಶ್ಯಕವಾಗಿದೆ. ಇದರಿಂದಾಗಿ ಜಿಗ್ ಪ್ಲೇಟ್ ಕಾರ್ಯವಸ್ತುವಿನಲ್ಲಿ ಯೋಗ್ಯವಾದ ರೀತಿಯಲ್ಲಿ ಅಳವಡಿಸುವುದು ಸುಲಭವಾಗುತ್ತದೆ.
•ರೌಂಡ್ ಲೊಕೇಟಿಂಗ್ ಪಿನ್ ಮತ್ತು ಡೈಮಂಡ್ ಪಿನ್ ಇವೆರಡಕ್ಕೂ ದೊಡ್ಡ ಚ್ಯಾಂಫರ್ (3x300) ನೀಡಿದ್ದರಿಂದ ಕಾರ್ಯವಸ್ತುವನ್ನು ಸಹಜವಾಗಿ ತೆಗೆಯಬಹುದು ಮತ್ತು ಅಳವಡಿಸಬಹುದು. ಕೆಲಸಗಾರರಿಗೆ ಆಯಾಸವುಂಟಾಗುವುದಿಲ್ಲ.
ಈ ಜಿಗ್ ಪ್ಲೇಟ್ ನಲ್ಲಿ ರೌಂಡ್ ಲೊಕೇಟಿಂಗ್ ಪಿನ್ ಪ್ರೆಸ್ ಫಿಟ್ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಇದನ್ನು ಸಂಪೂರ್ಣವಾಗಿ ಹಾರ್ಡ್ ಮಾಡಿದರೂ ನಡೆಯುತ್ತದೆ, ಆದರೆ ಒಂದುವೇಳೆ ರೌಂಡ್ ಲೊಕೇಟಿಂಗ್ ಪಿನ್ ನಟ್ ಅಥವಾ ಸ್ಕ್ರೂ ನ ಸಹಾಯದಿಂದ ಅಳವಡಿಸಿದಲ್ಲಿ ಕೇಸ್ ಹಾರ್ಡ್ ಮಾಡಬೇಕಾಗುತ್ತದೆ.
3. ಡೈಮಂಡ್ ಲೊಕೇಟಿಂಗ್ ಪಿನ್
ಕಾರ್ಯವಸ್ತುವಿನ ರಂಧ್ರದ ಆಕಾರವು Ø32 H7 ಇದೆ. ಇದರಿಂದಾಗಿ ಡೈಮಂಡ್ ಲೊಕೇಟಿಂಗ್ ಪಿನ್ ನ ವ್ಯಾಸವು Ø36 f8 ಈ ರೀತಿಯಲ್ಲಿ ನಿಯಂತ್ರಿಸಲಾಗಿದೆ. ಕಾರ್ಯವಸ್ತುವನ್ನು ಸುಲಭವಾಗಿ ತೆಗೆಯುಲು ಮತ್ತು ಅಳವಡಿಸಲು ಡೈಮಂಡ್ ಲೊಕೇಟಿಂಗ್ ಪಿನ್ ನೀಡುವುದು ಅತ್ಯಾವಶ್ಯಕವಾಗಿದೆ.
ಈ ಜಿಗ್ ಪ್ಲೆಟ್ ನಲ್ಲಿ ಡೈಮಂಡ್ ಲೊಕೇಟಿಂಗ್ ಪಿನ್ ಪ್ರೆಸ್ ಫಿಟ್ ಅಳವಡಿಸಲಾಗಿದೆ. ಇದರಿಂದಾಗಿ ಅದನ್ನು ಪೂರ್ತಿಯಾಗಿ ಹಾರ್ಡ್ ಮಾಡಬಹುದು. ಒಂದು ವೇಳೆ ಡೈಮಂಡ್ ಲೊಕೇಟಿಂಗ್ ಪಿನ್ ನಟ್ ಅಥವಾ ಸ್ಕ್ರೂನ ಸಹಾಯದಿಂದ ಅಳವಡಿಸಿದಲ್ಲಿ ಕೇಸ್ ಹಾರ್ಡ್ ಮಾಡಬೇಕಾಗುತ್ತದೆ. ಮೇಲೆ ತಿಳಿಸಿದಂತೆ ಡೈಮಂಡ್ ಲೊಕೇಟಿಂಗ್ ಪಿನ್ ನ ಉದ್ದ ರೌಂಡ್ ಲೊಕೇಟಿಂಗ್ ಪಿನ್ ಗಿಂತ ಕಡಿಮೆ ಇಡಬೇಕಾಗುತ್ತದೆ.
4. ಜಿಗ್ ಬಟನ್
ಜಿಗ್ ಬಟನ್ ಇದು ಸಂಪೂರ್ಣವಾಗಿ ಹಾರ್ಡ್ ಮಾಡಲಾಗಿರುತ್ತದೆ ಮತ್ತು ಜಿಗ್ ಪ್ಲೇಟ್ ನಲ್ಲಿ ಪ್ರೆಸ್ ಫಿಟ್ ಅಳವಡಿಸಲಾಗಿರುತ್ತದೆ. ಈ ಜಿಗ್ ಪ್ಲೇಟ್ ನಲ್ಲಿ 6 ಜಿಗ್ ಬಟನ್ ಗಳನ್ನು ಬಳಸಲಾಗಿದೆ. ಈ ಎಲ್ಲ ಬಟನ್ ಗಳನ್ನು ಜಿಗ್ ಪ್ಲೇಟ್ ನಲ್ಲಿ ಪ್ರೆಸ್ ಫಿಟ್ ಅಳವಡಿಸಿದನಂತರ ಜಿಗ್ ಬಟನ್ ನ ಸರ್ಫೇಸ್ ನ ಒಂದೇ ಹಂತದಲ್ಲಿ ಗ್ರೈಂಡಿಂಗ್ ಮಾಡಲಾಗುತ್ತದೆ. ಈ ಜಿಗ್ ಬಟನ್ ನ ಬದಲಾಗಿ ರೆಸ್ಟ್ ಪ್ಯಾಡ್ ಬಳಸದಿದ್ದಲ್ಲಿ, ರೆಸ್ಟ್ ಪ್ಯಾಡ್ ಗೆ ಪ್ರಾಧಾನ್ಯತೆಯನ್ನು ನೀಡಬೇಕು. ಜಿಗ್ ಬಟನ್ ಒಂದು ಪರ್ಯಾಯವಾದ ವ್ಯವಸ್ಥೆ ಎಂದು ತೋರಿಸಲಾಗಿದೆ.
5. ಹೆಡ್ ಲೆಸ್ ಜಿಗ್ ಬುಶ್
ಈ ಕಾರ್ಯವಸ್ತುವಿನಲ್ಲಿ 12 ರಂಧ್ರಗಳು ಒಂದೇ ಮಾಪನದಲ್ಲಿರುತ್ತವೆ. ಇದರಿಂದಾಗಿ ಎಲ್ಲ ಬುಶ್ ಗಳು ಒಂದೇ ಗಾತ್ರದಲ್ಲಿವೆ. ಈ ಎಲ್ಲ ಜಿಗ್ ಬುಶ್ ಗಳು ಸಂಪೂರ್ಣವಾಗಿ ಹಾರ್ಡ್ ಮಾಡಲಾಗಿರುತ್ತವೆ ಮತ್ತು ಅವುಗಳನ್ನು ಪ್ರೆಸ್ ಫಿಟ್ ಅಳವಡಿಸಲಾಗಿರುತ್ತದೆ. ಈ ಬುಶ್ ಗಳನ್ನು ಪ್ರಮಾಣೀಕರಿಸಲಾಗಿರುತ್ತದೆ. ಆದ್ದರಿಂದ ಯಾವುದೊಂದು ಬುಶ್ ಹಾಳಾದಲ್ಲಿ ತಕ್ಷಣ ಬದಲಾಯಿಸುವುದೂ ಸಾಧ್ಯವಿದೆ. (ಸಂದರ್ಭ : IS 666-1 : Jig Bushes, Part 1: Headed and Headless Jig Bushes) ಈ ಜಾಗದಲ್ಲಿ ಲೈನರ್ ಬುಶ್ ಮತ್ತು ರಿನ್ಯುಯೇಬಲ್ ಸ್ಲಿಪ್ ಬುಶ್ ಕೂಡಾ ಬಳಸಬಹುದು.
6. ಹ್ಯಾಂಡಲ್
ವಿವಿಧ ಪ್ರಕಾರದಲ್ಲಿ ತಯಾರಿಸಿರುವ ಹ್ಯಾಂಡಲ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳನ್ನು ಬಾರ್ ಅಥವಾ ಪೈಪ್ ನಿಂದ ತಯಾರಿಸಲಾಗಿರುತ್ತದೆ. ಸಾಮಾನ್ಯವಾಗಿ ಈ ಹ್ಯಾಂಡಲ್ ಗಳನ್ನು ಸ್ಕ್ರೂಗಳ ಸಹಾಯದಿಂದ ಅಳವಡಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ಹ್ಯಾಂಡಲ್ ಆಯ್ಕೆ ಮಾಡಿ ಬಳಸಬೇಕು. ಎರಡು ಹ್ಯಾಂಡಲ್ ಗಳ ಬಳಕೆಯಿಂದಾಗಿ ಜಿಗ್ ಪ್ಲೇಟ್ ಸಹಜವಾಗಿ ಬಳಸಬಹುದು. ಹ್ಯಾಂಡಲ್ ತಯಾರಿಸುವಾಗ ಜಿಗ್ ಪ್ಲೇಟ್ ಸಹಜವಾಗಿ ಬಳಸಬಹುದು. ಹ್ಯಾಂಡಲ್ ಅಳವಡಿಸುವಾಗ ಜಿಗ್ ಪ್ಲೇಟ್ ನ ಗಾತ್ರದ ಮತ್ತು ಭಾರದ ಕುರಿತು ವಿಚಾರ ಮಾಡಬೇಕು.
ಈಗ ಕ್ಲ್ಯಾಂಪ್ ಮಾಡಲು ವ್ಯವಸ್ಥೆಯ ಇರುವ ಲೊಕೇಟರ್ ಹೇಗೆ ತಯಾರಿಸಬಹುದು, ಎಂಬುದನ್ನು ನೋಡೋಣ. (ಚಿತ್ರ ಕ್ರ. 2)
ಲೊಕೇಟರ್
ಚಿತ್ರ ಕ್ರ. 2 ರಲ್ಲಿರುವ ಲೊಕೇಟರ್ ಕಾರ್ಯವಸ್ತುವಿನಲ್ಲಿ Ø36 H7 ಈ ವ್ಯಾಸದಲ್ಲಿ ಲೊಕೇಟ್ ಮಾಡಲಾಗಿದೆ. ಲೊಕೇಟರ್ ನ ವ್ಯಾಸವು Ø36-0.2 ಮಿ.ಮೀ.ನಲ್ಲಿ ನಿಯಂತ್ರಿಸಬೇಕು. ಇದರಿಂದಾಗಿ ಕಾರ್ಯವಸ್ತುವು ಸಾಕಷ್ಟು ಪ್ರಮಾಣದಲ್ಲಿ ಲೊಕೇಟ್ ಆಗಬಹುದು. ಆದರೆ ಅದನ್ನು ನಿರ್ದೋಷವಾಗಿ ಲೊಕೇಟ್ ಮಾಡಲು ಯೋಗ್ಯವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಚಿತ್ರ ಕ್ರ. 2 ರಲ್ಲಿ ಒಂದು ಸರಿಯುವ ಪಿನ್ ಕಾಣುತ್ತಿದೆ. ಈ 3 ಸರಿಯುವ ಪಿನ್ ಗಳನ್ನು ಕೇಂದ್ರ ಬಿಂದುವಿನಿಂದ ಸಮನಾದ ಕೋನದಲ್ಲಿ (1200) ಅಳವಡಿಸಲಾಗಿದೆ. ಕಾರ್ಯವಸ್ತುವಿನ ಒಳಗೆ ಲೊಕೇಟರ್ ಹೋಗಿ ಜಿಗ್ ಪ್ಲೇಟ್ ಕಾರ್ಯವಸ್ತುವಿಗೆ ತಗಲುತ್ತದೆ. ಅದರ ನಂತರ ತಿರುಗಿಸಿದರಿಂದ ಕ್ಲ್ಯಾಂಪಿಂಗ್ ಸ್ಕ್ರೂ ಕೆಳಗೆ ಬರುತ್ತದೆ ಮತ್ತು ಆ ಮೂರೂ ಸರಿಯುವ ಪಿನ್ ಗಳನ್ನು ಹೊರಗೆ ತಳ್ಳುತ್ತದೆ. ಈ ಪಿನ್ ಕಾರ್ಯವಸ್ತುಗಳ Ø36 H7 ಈ ವ್ಯಾಸದಲ್ಲಿ ದೃಢವಾಗಿ ಅಳವಡಿಸಲ್ಪಡುತ್ತದೆ. ಹಾಗೆಯೇ ಈ ಕ್ಲ್ಯಾಂಪಿಂಗ್ ಸ್ಕ್ರೂ ವಿರುದ್ಧವಾಗಿ ತಿರುಗಿಸಿದ್ದರಿಂದ ಲೊಕೇಟರ್, ಕಾರ್ಯವಸ್ತುವಿನಿಂದ ಹೊರಗೆ ತೆಗೆಯಲಾಗುತ್ತದೆ.
ಡಾಗ್ ಪಾಯಿಂಟ್ ನೊಂದಿಗೆ ಕ್ಲ್ಯಾಂಪಿಂಗ್ ಸ್ಕ್ರೂ
ಈ ಸ್ಕ್ರೂ ಗಳ ಮುಂಭಾಗದ ತುದಿಗಳ ವ್ಯಾಸವು ಥ್ರೆಡಿಂಗ್ ನ ಮಾಪನಕ್ಕಿಂತ ಕಡಿಮೆ ಮಾಡಲಾಗಿರುತ್ತದೆ. ಯಾವುದೇ ಸ್ಕ್ರೂ ನ ಗಾತ್ರವನ್ನು ಈ ರೀತಿಯಲ್ಲಿ ತಯಾರಿಸಿದ್ದಲ್ಲಿ ಅದಕ್ಕೆ ಡಾಗ್ ಪಾಯಿಂಟ್ ಸ್ಕ್ರೂ (ಚಿತ್ರ ಕ್ರ. 3) ಎಂದು ಹೇಳುತ್ತಾರೆ. ಇದರ ನಿರಂತರವಾದ ಬಳಕೆಯಿಂದಾಗಿ ಅದರ ಸರ್ಫೇಸ್ ಅಗಲ ಅಥವಾ ದೊಡ್ಡದಾಗುತ್ತದೆ. ಅದಕ್ಕೋಸ್ಕರವೇ ಸ್ಕ್ರೂ ನ ಡಾಗ್ ಪಾಯಿಂಟ್ ಇರುವ ಭಾಗವು ಫ್ಲೇಮ್ ಹಾರ್ಡ್ ಮಾಡಲಾಗಿರುತ್ತದೆ. ಕ್ಲ್ಯಾಂಪಿಂಗ್ ಸ್ಕ್ರೂ ಮತ್ತು ಸರಿಯುವ ಪಿನ್ ಇವೆರಡರಲ್ಲಿ ಹಾರ್ಡ್ ಬಾಲ್ ಅಳವಡಿಸಿದ್ದರಿಂದ ಕ್ಲ್ಯಾಂಪಿಂಗ್ ಸ್ಕ್ರೂ ಮೇಲೆ-ಕೆಳಗೆ ಮಾಡಿದರೂ ಕೂಡಾ ಸರಿಯುತ್ತಿರುವ ಪಿನ್ ಕೂಡಾ ಒಳಗೆ ಮತ್ತು ಹೊರಗೆ ಬರುತ್ತದೆ. ಇದರಿಂದಾಗಿ ಕ್ಲ್ಯಾಂಪಿಂಗ್ ಮತ್ತು ಡೀ-ಕ್ಲ್ಯಾಂಪಿಂಗ್ ಸಹಜವಾಗಿ ಮತ್ತು ತಕ್ಷಣ ಆಗುತ್ತದೆ.
ಸರಿಯುವ ಪಿನ್
ಈ ಪಿನ್ ನ ಮುಂಭಾಗದಲ್ಲಿ ದೊಡ್ಡ ಚ್ಯಾಂಫರ್ ನೀಡಲಾಗಿದೆ. ಈ ಪಿನ್ ಫ್ಲೇಮ್ ಹಾರ್ಡ್ ಮಾಡಲಾಗಿರುತ್ತದೆ. ಮೂರೂ ಪಿನ್ ಒಟ್ಟಾಗಿ ಮತ್ತು ಒಂದೇ ರೀತಿಯಲ್ಲಿ ಹೊರಬರುವುದರಿಂದ ಕಾರ್ಯವಸ್ತುವಿನ ವ್ಯಾಸ ಮತ್ತು ಲೊಕೇಟರ್ ನ ವ್ಯಾಸವು ಸೆಂಟ್ರಿಕ್ ಆಗುತ್ತವೆ. ಸರಿಯುತ್ತಿರುವ ಪಿನ್ ನಿಂದಾಗಿ ಉಂಟಾಗುವ ಚಟುವಟಿಕೆಯನ್ನು ಚಿತ್ರ ಕ್ರ. 2 ರಲ್ಲಿ ಕೆಂಪು ಬಣ್ಣದ ಬಾಣಗಳಿಂದ ತೋರಿಸಲಾಗಿದೆ.
ಈ ರೀತಿಯ ವಿವಿಧ ಕಲ್ಪನೆಗಳನ್ನು ಪ್ರತ್ಯಕ್ಷವಾಗಿ ಕಾರ್ಯಗತಗೊಳಿಸಬೇಕು. ಸ್ವಂತ ಅನುಭವದಿಂದಲೇ ಈ ಅಂಶಗಳು ಸಾಧ್ಯವಾಗುತ್ತವೆ. ಆದ್ದರಿಂದಲೇ ನೋಡಿ ತಿಳಿ, ಮಾಡಿ ಕಲಿ ಎಂಬುದಾಗಿ ಹೇಳಲಾಗಿದೆ. ಸ್ವಂತಕ್ಕೆ ಲಭಿಸಿರುವ ಅನುಭವವೇ ಮಹತ್ವದ್ದಾಗಿದೆ.
ಅಜಿತ ದೇಶಪಾಂಡೆ
ಅತಿಥಿ ಪ್ರಾಧ್ಯಾಪಕರು,
ARAI SAE
9011018388
ಅಜಿತ ದೇಶಪಾಂಡೆ ಇವರು ಜಿಗ್ಸ್ ಮತ್ತು ಫಿಕ್ಸ್ಚರ್ ಕ್ಷೇತ್ರದಲ್ಲಿ ಸುಮಾರು 37 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇವರು ಕಿರ್ಲೋಸ್ಕರ್, ಗ್ರೀವ್ಜ್ ಲೊಂಬಾರ್ಡಿನಿ ಲಿ., ಟಾಟಾ ಮೋಟರ್ಸ್ ಇಂತಹ ವಿವಿಧ ಕಂಪನಿಗಳಲ್ಲಿ ಬೇರೆ ಬೇರೆ ಅಧಿಕಾರ ಸ್ಥಾನಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ.