ಫೈನಲ್ ಅಕೌಂಟ್ಸ್ ಗೆ ಸಂಬಂಧಪಟ್ಟ ಅಕೌಂಟಿಂಗ್ ತತ್ವಗಳು

@@NEWS_SUBHEADLINE_BLOCK@@

Lohkarya - Udyam Prakashan    12-Dec-2020   
Total Views |

1_1  H x W: 0 x
ಉದ್ಯಮದಲ್ಲಾಗುವ ಲಾಭ ಮತ್ತು ನಷ್ಟ, ಹಾಗೆಯೇ ಉದ್ಯಮಗಳಲ್ಲಿ ಆಸ್ತಿಪಾಸ್ತಿ ಮತ್ತು ಮರುಪಾವತಿ ಇವುಗಳ ಕುರಿತು ಕಾಲಕ್ಕೆ ತಕ್ಕಂತೆ ನಿರ್ಧಾರಿತ ಸಮಯದಲ್ಲಿ ಎಲ್ಲ ವಿವರಗಳ ಅರಿವು ಆಗುತ್ತಿರಬೇಕು, ಎಂಬುದಕ್ಕಾಗಿ ಲೆಕ್ಕಾಚಾರವನ್ನು ಸೂಕ್ತವಾದ ರೀತಿಯಲ್ಲಿ ಇಡಲು ಒಂದು ಹಣಕಾಸು ವರ್ಷವನ್ನು ನಿರ್ಧರಿಸಲಾಗುತ್ತದೆ. ಇಂತಹ ಲೆಕ್ಕಾಚಾರಕ್ಕೆ ಅಧರಿಸಿ ವರ್ಷದ ಕೊನೆಯಲ್ಲಿ ಲಾಭ-ನಷ್ಟದ ವರದಿ ಮತ್ತು ಬ್ಯಾಲೆನ್ಸ್ ಶೀಟ್ ಇಂತಹ ಹಣಕಾಸಿಗೆ ಸಂಬಂಧಪಟ್ಟ ಮಹತ್ವದ ವರದಿಗಳನ್ನು ತಯಾರಿಸಲಾಗುತ್ತದೆ. ಈ ಎಲ್ಲ ಅಂಶಗಳು ಕುರಿತು ‘ಲೋಹಕಾರ್ಯ’ ನವಂಬರ್ 2020 ರ ಸಂಚಿಕೆಯಲ್ಲಿ ಪ್ರಕಟಿಸಿರುವ ಲೇಖನದಲ್ಲಿ ನಾವು ತಿಳಿದುಕೊಂಡೆವು.
ನಮ್ಮ ದೇಶದಲ್ಲಿ ಹೆಚ್ಚಿನ ಕೈಗಾರಿಕೋದ್ಯಮಗಳ ಹಣಕಾಸು ವರ್ಷವು 31 ಮಾರ್ಚ್ ಈ ದಿನದಂದು ಮುಗಿಯುತ್ತದೆ. ಅಲ್ಲದೇ ಆ ತಾರೀಕಿಗೆ ಮುಗಿದಿರುವ ವರ್ಷದ ಲಾಭ-ನಷ್ಟದ ವರದಿ ಅಂದರೆ ಪ್ರಾಫಿಟ್ ಎಂಡ್ ಲಾಸ್ ಅಕೌಂಟ್ ತಯಾರಿಸಲಾಗುತ್ತದೆ. ಹಾಗೆಯೇ 31 ಮಾರ್ಚ್ ಈ ದಿನದ ತನಕದ ಬ್ಯಾಲೆನ್ಸ್ ಶೀಟ್ ಕೂಡಾ ತಯಾರಿಸಲಾಗುತ್ತದೆ. ಈ ಎರಡೂ ವರದಿಗಳಿಂದ 31 ಮಾರ್ಚ್ ಈ ದಿನದಂದು ಮುಗಿದಿರುವ ಹಣಕಾಸು ವರ್ಷದಲ್ಲಿ ತಮ್ಮ ಉದ್ಯಮದಲ್ಲಿ ಹಣಕಾಸಿನ ಕುರಿತಾದ ಸ್ಥಿತಿಯು ಹೇಗಿತ್ತು, ಎಂಬ ಮಾಹಿತಿಯ ಮನವರಿಕೆಯಾಗುತ್ತದೆ. ಆಂಗ್ಲ ಭಾಷೆಯಲ್ಲಿ ಇದನ್ನು ಫೈನಲ್ ಅಕೌಂಟ್ಸ್ ಎಂಬ ಸೂಕ್ತ ಶಬ್ದದಿಂದಲೇ ಕರೆಯಲಾಗಿದೆ. ಈ ಎರಡೂ ಮಹತ್ವದ ಹಣಕಾಸಿಗೆ ಕುರಿತಾದ ವರದಿಯನ್ನು ತಿಳಿದುಕೊಳ್ಳುವಾಗ ಕೆಲವು ಅಂಶಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ. ವರದಿಯನ್ನು ತಯಾರಿಸುವಾಗ ಯಾವ ರೀತಿಯ ಅಕೌಂಟಿಂಗ್ ಕುರಿತಾದ ಅಂಶಗಳನ್ನು ಬಳಸಲಾಗಿದೆ, ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯದ ಅಂಶವಾಗಿದೆ. ಇದನ್ನು ತಿಳಿದುಕೊಂಡರೆ ಮಾತ್ರ ಈ ಎರಡೂ ವರದಿಗಳಲ್ಲಿ ಅಡಗಿರುವ ಅಂಕೆ-ಸಂಖ್ಯೆಗಳ ಕುರಿತಾದ ಅರ್ಥ- ವಿಮರ್ಶೆ- ವಿವರಗಳು ಮನದಟ್ಟಾಗಬಲ್ಲವು. ಪ್ರಸ್ತುತ ಸಂಚಿಕೆಯಲ್ಲಿ ನಾವು ಅಂಕೆ-ಸಂಖ್ಯೆಗಳಿಗೆ ಸಂಬಂಧಪಟ್ಟ ಅರ್ಥ- ವಿಮರ್ಶೆ- ವಿವರಗಳ ಕುರಿತಾಗಿ ತಿಳಿದುಕೊಳ್ಳೋಣ.
ಅಂತಿಮ ಅಕೌಂಟ್ಸ್ ಗೆ ಸಂಬಂಧಪಟ್ಟ ಅಕೌಂಟಿಂಗ್ ನಲ್ಲಿ ಅಡಗಿರುವ ಕೆಲವು ಮೂಲಭೂತ ತತ್ವಗಳು
1. ಉದ್ಯಮದ ಅಸ್ತಿತ್ವವನ್ನು ಮಾಲಿಕರಿಗಿಂತ ಬೇರೆ ರೀತಿಯಲ್ಲಿ ಮನ್ನಿಸುವುದು.
ಉದ್ಯಮದಲ್ಲಿ ಮಾಲಿಕರ ಅಸ್ತಿತ್ವಕ್ಕಿಂತ ಉದ್ಯಮದ ಅಸ್ತಿತ್ವವು ವಿಭಿನ್ನವಾಗಿರುತ್ತದೆ, ಎಂದು ತಿಳಿದುಕೊಂಡು ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಅಂದರೆ ಯಾವುದೇ ಪ್ರೊಪ್ರೈಟರ್ ಶಿಪ್ ನಲ್ಲಿ ಕಾನೂನಿನ ದೃಷ್ಟಿಯಲ್ಲಿ ವ್ಯವಸಾಯವೆಂದರೆ, ಒಂದು ವೇಳೆ ಮಾಲಿಕರೇ ಆಗಿದ್ದರೂ ಕೂಡಾ ಲೆಕ್ಕಾಚಾರವನ್ನು ಇಡಲು ಮಾಲಿಕರು ವ್ಯವಸಾಯಕ್ಕಿಂತ ವಿಭಿನ್ನರು ಎಂಬುದಾಗಿ ತಿಳಿಯಲಾಗುತ್ತದೆ. ಮಾಲಿಕರು ಉದ್ಯಮದಲ್ಲಿ ಅಥವಾ ವ್ಯವಸಾಯದಲ್ಲಿ ಹೂಡಿರುವ ಬಂಡವಾಳವನ್ನು ಉದ್ಯಮಕ್ಕೆ ಲಭಿಸಿರುವ ಸಾಲ ಎಂದೇ ತಿಳಿಯಲಾಗುತ್ತದೆ. ಇದೇ ರೀತಿಯಲ್ಲಿ ಮಾಲಿಕರು ಆಗಾಗ ಉದ್ಯಮದಿಂದ ತೆಗೆದಿರುವ ಮುಂಗಡ ಮೊತ್ತ (ಅಡ್ವಾನ್ಸ್) ಎಂಬುದಾಗಿ ತಿಳಿದುಕೊಂಡು ಅದನ್ನು ನೊಂದಾಯಿಸಲಾಗುತ್ತದೆ. ವ್ಯವಹಾರದ ಲೆಕ್ಕಾಚಾರವನ್ನು ಮಾಲಿಕರದ್ದು ಅಲ್ಲ, ಅದನ್ನು ಉದ್ಯಮದ ವ್ಯವಹಾರದ ಒಂದು ಭಾಗವೆಂದು ನೊಂದಾಯಿಸಲಾಗುತ್ತದೆ. ಮಾಲಿಕರು ಮತ್ತು ಉದ್ಯಮದ ವ್ಯವಹಾರಗಳನ್ನು ಬೇರೆ ಬೇರೆ ಎಂದು ಪರಿಗಣಿಸುವ ತತ್ವವೇ ಇಂತಹ ಉದ್ಯಮಗಳಲ್ಲಿರುವ ಲೆಕ್ಕಾಚಾರದ ಒಂದು ಮಹತ್ವದ ಭಾಗವಾಗಿವೆ. ಇದೇ ತತ್ವವನ್ನು ಆಧರಿಸಿ ಮಾಲಿಕರ ವೈಯಕ್ತಿಕ ಆಸ್ತಿಪಾಸ್ತಿಗಳು ಮತ್ತು ಮರುಪಾವತಿಗಳನ್ನು ಉದ್ಯಮಗಳಲ್ಲಿರುವ ವ್ಯವಹಾರದಲ್ಲಿ ಪರಿಗಣಿಸಲಾಗುವುದಿಲ್ಲ. ಅದಕ್ಕೋಸ್ಕರವೇ ಇಂತಹ ಉದ್ಯಮಗಳ ವ್ಯವಹಾರದಲ್ಲಿ ಬ್ಯಾಲೆನ್ಸ್ ಶೀಟ್ ನಲ್ಲಿ ಯಾವ ಆಸ್ತಿಪಾಸ್ತಿಗಳ ಮತ್ತು ಮೀಸಲಾಗಿಟ್ಟಿರುವ ಮರುಪಾವತಿಗಳನ್ನು ತೋರಿಸಲಾಗುತ್ತದೆ. ಇಂತಹ ಎಲ್ಲ ಮರುಪಾವತಿಗಳು ಕೇವಲ ಉದ್ಯಮದ ವ್ಯವಹಾರಕ್ಕೆ ಸಂಬಂಧಪಟ್ಟದ್ದಾಗಿರುತ್ತವೆ. ಇದರಲ್ಲಿ ಮಾಲಿಕರ ವೈಯಕ್ತಿಕವಾದ ಆಸ್ತಿಪಾಸ್ತಿ, ಸಂಪತ್ತು ಇವುಗಳನ್ನು ಸೇರಿಸಲಾಗುವುದಿಲ್ಲ. ಉದ್ಯಮಗಳ ವ್ಯವಹಾರದಲ್ಲಿ ಮಾಲಿಕರು ಹೂಡಿರುವ ಬಂಡವಾಳವು ಅವರ ದೃಷ್ಟಿಕೋನದಲ್ಲಿ ಅದು ಆ ಉದ್ಯಮದ ಸಂಪತ್ತಾಗಿರುತ್ತದೆ. ಇದರ ಕುರಿತು ಇನ್ನಷ್ಟು ವಿಚಾರ ಮಾಡಿದಲ್ಲಿ ಉದ್ಯಮದ ವ್ಯವಹಾರದ ಬ್ಯಾಲೆನ್ಸ್ ಶೀಟ್ ನಲ್ಲಿರುವ ಮಾಲಿಕರ ಬಂಡವಾಳ, ಲಿಯಾಬಿಲಿಟಿ. ಅಂದರೆ ಮರುಪಾವತಿಗಳನ್ನು ಬದಿಗಿಟ್ಟು, ಉದ್ಯಮದ ವ್ಯವಹಾರದ ಇನ್ನಿತರ ಮರುಪಾವತಿಗಳಂತೆ ಮರುಪಾವತಿಗಳನ್ನು ಲಿಯಾಬಿಲಿಟಿ ಅಥವಾ ಮರುಪಾವತಿ ಎಂಬುದಾಗಿಯೇ ತೋರಿಸಲಾಗುತ್ತದೆ.
2. ಉದ್ಯಮದ ಅಸ್ತಿತ್ವವನ್ನು ಶಾಶ್ವತವೆಂದು ಪರಿಗಣಿಸುವುದು
ಉದ್ಯಮವು ಶಾಶ್ವತವಾಗಿ ಮುಂದುವರಿಯಲು ವ್ಯವಹಾರದ ಲೆಕ್ಕಾಚಾರವನ್ನು ಇಡಲಾಗುತ್ತದೆ. ಇದನ್ನು ಪರಿಗಣಿಸಿಯೇ ಎಲ್ಲ ರೀತಿಯ ಲೆಕ್ಕಾಚಾರಗಳನ್ನು ತಪ್ಪಿಲ್ಲದೇ ಇಡಲಾಗುತ್ತದೆ. ಈ ಕಲ್ಪನೆಯಿಂದಾಗಿ ದೀರ್ಘ ಕಾಲಾವಧಿಯಲ್ಲಿ ಲಾಭವನ್ನು ನೀಡುವ ಖರ್ಚುಗಳನ್ನು ನೊಂದಾಯಿಸಲಾಗುತ್ತದೆ. ಅವುಗಳಲ್ಲಿ ಮಶಿನ್ ಗಳ ಖರೀದಿ. ಮಶಿನ್ ಗೆ ಮಾಡಿರುವ ಒಟ್ಟು ಖರ್ಚನ್ನು ಒಂದೇ ವರ್ಷದಲ್ಲಿ ತೋರಿಸದೇ, ಅದನ್ನು ಆಸ್ತಿಪಾಸ್ತಿ ಎಂದು ನೊಂದಾಯಿಸಲಾಗುತ್ತದೆ. ಪ್ರತಿಯೊಂದು ಹಣಕಾಸು ವರ್ಷದಲ್ಲಿ ಮಶಿನ್ ನ ಬಳಕೆ ಮಾಡುವ ಖರ್ಚು ಎಂಬುದಾಗಿ ಆಯಾ ಹಣಕಾಸು ವರ್ಷದಲ್ಲಿ ಸವಕಳಿಯ (ಡಿಪ್ರಿಸಿಯೇಶನ್) ಮೌಲ್ಯವನ್ನು ಲಾಭದಿಂದ ಕಳೆಯಲಾಗುತ್ತದೆ.
ಅಕೌಂಟಿಂಗ್ ಮಾಡುತ್ತಿರುವಾಗ ಆಸ್ತಿಪಾಸ್ತಿಗಳು ಮತ್ತು ಪಾವತಿಸುವಿಕೆಯ ಕುರಿತು ವರ್ಗೀಕರಣ ಮಾಡುವಾಗ ಒಂದು ವರ್ಷಕ್ಕಿಂತ ಕಡಿಮೆ ಕಾಲಾವಧಿಯ ಆಸ್ತಿಪಾಸ್ತಿ ಮತ್ತು ಪ್ರಸ್ತುತ ಪಾವತಿಸುವಿಕೆ (ಕರಂಟ್ ಪೆಮೆಂಟ್ಸ್) ಈ ಶೀರ್ಷಿಕೆಯಲ್ಲಿ ಲೆಕ್ಕಿಸಲಾಗುತ್ತದೆ. ದೈನಂದಿನ ಖರ್ಚಿಗೋಸ್ಕರ ಬೇಕಾಗುವ ನಗದು, ಕಚ್ಚಾ ವಸ್ತುಗಳು, ಉತ್ಪಾದನೆಯ ಪ್ರಕ್ರಿಯೆಯಲ್ಲಿರುವ ಅಪೂರ್ಣವಾದ ವಸ್ತುಗಳು, ಸಿದ್ಧಪಡಿಸಿರುವ ವಸ್ತುಗಳು, ಎರವಲಾಗಿ ವಸ್ತುಗಳನ್ನು ಮಾರಾಟ ಮಾಡಿದ್ದರಿಂದ ಗ್ರಾಹಕರಿಂದ ಬರಬೇಕಾಗಿರುವ ಬಿಲ್ ಗಳ ಮೊತ್ತ, ಪೂರೈಕೆಗಾರರಿಗೆ (ಸಪ್ಲಾಯರ್) ಬಿಲ್ ಗಳನ್ನು ನೀಡುವುದು ಇತ್ಯಾದಿ ಪ್ರಸ್ತುತ ಪಾವತಿಸುವಿಕೆಯಲ್ಲಿ ಸೇರಿರುತ್ತದೆ. ಉದ್ಯಮದ ವ್ಯವಹಾರದಲ್ಲಿ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಯು ತುಂಬಾ ಹೆಚ್ಚಾ ಕಾಲಾವಧಿಯ ತನಕ ಉಳಿಯುವ ಸಾಧ್ಯತೆ ಇರುತ್ತದೆ. ಇವೆಲ್ಲವನ್ನು ಸ್ಥಿರ ಆಸ್ತಿಪಾಸ್ತಿ ಮತ್ತು ದೀರ್ಘ ಕಾಲಾವಧಿಯ ಮರುಪಾವತಿಸುವಿಕೆಯ ಶೀರ್ಷಿಕೆಯ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುತ್ತದೆ. ಉದಾಹರಣೆ, ಜಮೀನು, ಕಟ್ಟಡ, ಮಶಿನರಿ, ಪೆಟಂಟ್ಸ್, ಟರ್ಮ್ ಲೋನ್ ಇತ್ಯಾದಿ.
3. ಇಮ್ಮಡಿ ಪರಿಣಾಮಗಳ ತತ್ವ
ಉದ್ಯಮಗಳ ಲೆಕ್ಕಾಚಾರವು ಜಗತ್ತಿನೆಲ್ಲೆಡೆ ಸಾಮಾನ್ಯವಾಗಿ ಡಬಲ್ ಎಂಟ್ರಿ ಬುಕ್ ಕೀಪಿಂಗ್ ನ ತತ್ವಗಳನ್ನು ಅವಲಂಬಿಸಲಾಗುತ್ತದೆ. ಈ ತತ್ವಕ್ಕೆ ಅನುಗುಣವಾಗಿ ಯಾವುದೇ ವ್ಯವಹಾರದ ಲೆಕ್ಕಾಚಾರದಲ್ಲಿ ನೊಂದಾಣಿಕೆಯನ್ನು ಮಾಡುವಾಗ ಆ ವ್ಯವಹಾರದಿಂದಾಗಿ ಕನಿಷ್ಠ ಎರಡು ರೀತಿಯ ಅಕೌಂಟಿಂಗ್ ಪರಿಣಾಮಗಳು ಆಗಲೇಬೇಕು, ಎಂಬುದನ್ನು ಗಮನಿಸಿಯೇ ಲೆಕ್ಕಾಚಾರವನ್ನು ಇಡಲಾಗುತ್ತದೆ. ಉದಾಹರಣೆ, ಉದ್ಯಮವನ್ನು ಪ್ರಾರಂಭಿಸಲು ಮಾಲಿಕರು ಹತ್ತು ಸಾವಿರ ರೂಪಾಯಿಯನ್ನು ನಗದಿಯಾಗಿ ಆಸ್ತಿಪಾಸ್ತಿ ಎಂಬ ಸ್ವರೂಪದಲ್ಲಿ ಹೂಡಿದಲ್ಲಿ, ಈ ಅಂಶವನ್ನು ಲೆಕ್ಕಾಚಾರದ ನೊಂದಾಣಿಕೆಯಲ್ಲಿ ಬಂದಿರುವ ನಗದನ್ನು ಆಸ್ತಿಪಾಸ್ತಿ ಎಂದು ನೊಂದಾಯಿಸಲಾಗುತ್ತದೆ. ಹಾಗೆಯೇ ಮಾಲಿಕರಿಗೆ ಅಷ್ಟೇ ಮೊತ್ತದ ಸಾಲ ಇದೆ ಲೆಕ್ಕಾಚಾರ ಎಂದು ಗಮನಿಸಬೇಕು. ಇಂತಹ ಇಮ್ಮಡಿ ಪರಿಣಾಮಗಳ ತತ್ವಕ್ಕೆ ಅನುಸಾರವಾಗಿ ಯಾವುದೇ ಹಣಕಾಸು ವ್ಯವಹಾರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅಕೌಂಟಿಂಗ್ ನ ಪರಿಣಾಮಗಳಾಗುತ್ತವೆಯೋ, ಅದರಲ್ಲಿ ಹಲವಾರು ಡೆಬಿಟ್ ಸ್ವರೂಪದಲ್ಲಿ, ಕೆಲವು ಕ್ರೆಡಿಟ್ ಸ್ವರೂಪದಲ್ಲಿರುತ್ತವೆ. ಯಾವುದೇ ವ್ಯವಹಾರದಲ್ಲಿ ಕೇವಲ ಎರಡೇ ಅಕೌಂಟಿಂಗ್ ಪರಿಣಾಮ ಉಂಟಾಗುತ್ತಿದ್ದಲ್ಲಿ, ಅಂದರೆ ಆ ವ್ಯವಹಾರದ ಸಂಬಂಧವು ಕೇವಲ ಎರಡೇ ಅಕೌಂಟ್ಸ್ ಗಳೊಂದಿಗೆ ಇದ್ದಲ್ಲಿ, ಅದರಲ್ಲಿ ಒಂದು ಖಾತೆಗೆ ಆ ವ್ಯವಹಾರದ ನಗದಿ ಮೊತ್ತವನ್ನು ಡೆಬಿಟ್ ಹಾಕಲಾಗುತ್ತದೆ. ಉಳಿದಿರುವ ಇನ್ನೊಂದು ಖಾತೆಯಲ್ಲಿ ಅಷ್ಟೇ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ. ಪ್ರತಿಯೊಂದು ವ್ಯವಹಾರಕ್ಕೋಸ್ಕರ ಲೆಕ್ಕಾಚಾರದಲ್ಲಿ ಡಬಲ್ ಎಂಟ್ರಿಯ ಪದ್ಧತಿಗೆ ಅನುಸಾರವಾಗಿ ಯಾವ ಎಂಟ್ರಿ ಅಥವಾ ನೊಂದಣಿಯನ್ನು ಮಾಡಲಾಗುತ್ತದೆಯೋ, ಅದರಲ್ಲಿರುವ ಡೆಬಿಟ್ ಮತ್ತು ಕ್ರೆಡಿಟ್ ಪರಿಣಾಮಗಳ ಒಟ್ಟು ಮೊತ್ತವು ಯಾವುಗಲೂ ಒಂದೇ ರೀತಿಯಲ್ಲಿರುತ್ತದೆ. ಪ್ರತಿಯೊಂದು ವ್ಯವಹಾರವನ್ನು ನೊಂದಾಯಿಸುವಾಗ ಡೆಬಿಟ್ ಮತ್ತು ಕ್ರೆಡಿಟ್ ಇವೆರಡರ ಪರಿಣಾಮವನ್ನು ಸರಿಸಮಾನವಾದ ರೀತಿಯ ಮೊತ್ತದಿಂದ ನೊಂದಾಯಿಸಲಾಗುತ್ತದೆ. ಇದರಿಂದಾಗಿ ವರ್ಷದ ಕೊನೆಯಲ್ಲಿ ಬ್ಯಾಲೆನ್ಸ್ ಶೀಟ್ ತಯಾರಿಸಲು ಲೆಕ್ಕಾಚಾರದ ಬರವಣಿಗೆಯನ್ನು ಅವಲಂಬಿಸಲಾಗುತ್ತದೆ. ಆಗ ಇಡಿ ವರ್ಷದಲ್ಲಿ ಮಾಡಿರುವ ಎಲ್ಲ ಹಣಕಾಸಿನ ವ್ಯವಹಾರಗಳ ನೊಂದಣಿಗಳನ್ನು ಒಟ್ಟು ಲೆಕ್ಕ ಮಾಡಿದಾಗ ಅದು ಒಂದೇ ರೀತಿ ಇರುತ್ತದೆ. ಇದರಿಂದಾಗಿ ಉದ್ಯಮದ ಒಟ್ಟು ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಯು ಒಂದೇ ಮೊತ್ತದ್ದಾಗಿರುವುದು ಕಂಡುಬರುತ್ತದೆ. ನಾವು ಈ ಹಿಂದೆ ನೋಡಿದಂತೆ ಲೆಕ್ಕಾಚಾರದ ನೊಂದಾಣಿಕೆಯನ್ನು ಮಾಡಲು ವ್ಯವಹಾರವನ್ನು ಮಾಲಿಕರಿಗಿಂತ ಬೇರೆ ಅಸ್ತಿತ್ವ ಇರುವಂತಹದ್ದು ಎಂಬುದಾಗಿ ತಿಳಿಯಲಾಗಿದೆ. ಆದರೆ ಅದೇ ಸಮಯದಲ್ಲಿ ವ್ಯವಹಾರದಲ್ಲಿ ತಮ್ಮದೇ ಆದದ್ದು ಏನೂ ಇರುವುದಿಲ್ಲ, ಎಂಬ ತತ್ವವನ್ನು ಅವಲಂಬಿಸಲಾಗುತ್ತದೆ. ಇದರಿಂದಾಗಿ ವ್ಯವಹಾರದಲ್ಲಿ ಯಾವ ಆಸ್ತಿಪಾಸ್ತಿಗಳು ಇರುತ್ತವೆಯೋ ಅವುಗಳನ್ನು ಪಡೆಯಲು ಉದ್ಯಮಕ್ಕೆ ಮಾಲಿಕರು ಮತ್ತು ಇನ್ನಿತರರಿಂದ ಅಷ್ಟೇ ಸಾಲವೂ ಉಂಟಾಗಿರುತ್ತದೆ. ವ್ಯವಹಾರದ ಎಷ್ಟು ಆಸ್ತಿಪಾಸ್ತಿಗಳಿವೆಯೋ, ಅಷ್ಟೇ ಪಾವತಿಸುವಿಕೆಯೂ ಇರಬೇಕು, ಎಂಬ ರೀತಿಯ ಹೊಂದಾಣಿಕೆಯು ಯಾವಾಗಲು ಸರಿಹೊಂದಿರುತ್ತದೆ. ಇದನ್ನೇ ನಾವು ಬ್ಯಾಲೆನ್ಸ್ ಶೀಟ್ ಅಥವಾ ಲೆಕ್ಕಾಚಾರದ ವರದಿ ಎಂದು ಹೇಳುತ್ತೇವೆ.
ವ್ಯವಹಾರದ ಲೆಕ್ಕಾಚಾರವನ್ನು ಇಡುವವನು ವ್ಯವಹಾರದಲ್ಲಿರುವ ಆಸ್ತಿಪಾಸ್ತಿ ಮತ್ತು ಪಾವತಿಸುವಿಕೆಯ ಕಡೆಗೆ ಅಲಿಪ್ತವಾಗಿ ವೀಕ್ಷಿಸುತ್ತಿರುತ್ತಾನೆ. ಹಾಗೆಯೇ ಲೆಕ್ಕಾಚಾರದ ನೊಂದಾಣಿಕೆಯನ್ನು ಮಾಡುವಾಗ ವ್ಯವಹಾರವು ತನ್ನದಲ್ಲ, ಎಂಬುದಾಗಿ ತಿಳಿದುಕೊಂಡು ಕೆಲಸ ಮಾಡುತ್ತಿರುತ್ತಾನೆ. ಅಂದರೆ ‘ಇದಂ ನ ಮಮ’ ಎಂಬ ಆಧ್ಯಾತ್ಮಿಕ ತತ್ವವನ್ನು ಅವನು ತನ್ನ ವ್ಯವಹಾರದಲ್ಲಿ ಅನುಸರಿಸುತ್ತಾನೆ. ಬ್ಯಾಲೆನ್ಸ್ ಶೀಟ್ ಈ ಶೀರ್ಷಿಕೆಯಲ್ಲಿ ಇರುವಂತೆ ಬ್ಯಾನೆಲ್ಸ್ ಮತ್ತು ಅದರ ವಿವರಗಳನ್ನು ನೀಡುವ ಶೀಟ್ ಅಂದರೆ ಉಳಿಕೆ ಮತ್ತು ಅದರ ವಿವರಗಳು ಅಡಗಿದೆ. ಲೆಕ್ಕಾಚಾರ ಮಾಡುವಾಗ ಪ್ರತಿಯೊಂದು ವ್ಯವಹಾರದ ನೊಂದಣಿಯಲ್ಲಿರುವ ಡೆಬಿಟ್ ಮತ್ತು ಕ್ರೆಡಿಟ್ ಒಂದೇ ರೀತಿ ಇಟ್ಟಲ್ಲಿ ಮಾತ್ರ ಬ್ಯಾಲೆನ್ಸ್ ಸಾಧಿಸಬಹುದು.
4. ಆದಾಯ ಮತ್ತು ಖರ್ಚನ್ನು ಸರಿಹೊಂದಾಣಿಸುವುದು
ವ್ಯವಹಾರದ ಆದಾಯ ಮತ್ತು ಅದನ್ನು ಪಡೆಯಲು ಮಾಡಿರುವ ಖರ್ಚು ಇವುಗಳ ಲೆಕ್ಕಾಚಾರದಲ್ಲಿ ಸರಿಹೊಂದಾಣಿಕೆ ಆಗುತ್ತಿದೆಯೇ ಅಥವಾ ಇಲ್ಲವೇ, ಎಂಬುದನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು. ಆದಾಯ ಮತ್ತು ಖರ್ಚು ಇವೆರಡನ್ನೂ ಲಾಭನಷ್ಟದ ವರದಿಯಲ್ಲಿ ತೋರಿಸುವ ಮುಂಚೆ ಅವುಗಳ ಹೊಂದಾಣಿಕೆಯನ್ನು ಹೇಗೆ ಮಾಡಲಾಗಿದೆ ಮತ್ತು ಅವುಗಳನ್ನು ಒಂದರೊಂದಿಗೆ ಸರಿಹೊಂದಾಣಿಸಿದಾಗ ಯಾವುದೂ ಅಪೂರ್ಣವಾಗಿ ಇಲ್ಲ ತಾನೇ, ಎಂಬುದನ್ನು ಪರಿಶೀಲಿಸಲಾಗುತ್ತದೆ. ಉದಾಹರಣೆ, ಯಾರೇ ವ್ಯಾಪಾರಿಯು ವಿಶಿಷ್ಟವಾದ ಬೇಡಿಕೆಯನ್ನು (ಆರ್ಡರ್) ಪೂರ್ತಿಗೊಳಿಸಲು ಒಂದು ಲಕ್ಷ ರೂಪಾಯಿಯ ವಸ್ತುಗಳನ್ನು ಖರೀದಿಸಿದ್ದಲ್ಲಿ, ಆದರೆ ಪ್ರತ್ತುತ ಹಣಕಾಸು ವರ್ಷದ ಕೊನೆಯೊಳಗೆ ಆ ವಸ್ತುಗಳ ಮಾರಾಟವಾಗದಿದ್ದಲ್ಲಿ, ಉಳಿದಿರುವ ವಸ್ತುಗಳು ಆ ವರ್ಷದಲ್ಲಿ ಮಾಡಲಾದ ಖರ್ಚು ಎಂಬುದಾಗಿ ತೋರಿಸದೇ, ಅದನ್ನು ದಾಸ್ತಾನು ಮಾಡಿರುವ ವಸ್ತುಗಳು ಎಂದು ಬ್ಯಾಲೆನ್ಸ್ ಶೀಟ್ ನಲ್ಲಿ ತೋರಿಸಲಾಗುತ್ತದೆ. ಮುಂದೆ ಯಾವ ವರ್ಷದಲ್ಲಿಅದರ ಮಾರಾಟವಾಗುತ್ತದೆಯೋ, ಆ ವರ್ಷದ ಬ್ಯಾಲೆನ್ಸ್ ಶೀಟ್ ನಲ್ಲಿ ಅದನ್ನು ಖರ್ಚು ಎಂಬುದಾಗಿ ಪರಿಗಣಿಸಲಾಗುತ್ತದೆ.
ಇನ್ನೊಂದು ಉದಾಹರಣೆಯನ್ನು ನೀಡುವುದಾದಲ್ಲಿ, ಒಮ್ಮೊಮ್ಮೆ ಹೀಗೂ ಆಗುತ್ತದೆ, ಪೂರೈಕೆಗಾರರಿಂದ ಬಂದಿರುವ ಮಟೀರಿಯಲ್ ಬಳಸಿ ತಯಾರಾಗಿರುವ ವಸ್ತುಗಳ ಮಾರಾಟವಾಗಿರುತ್ತದೆ. ಆದರೆ ಕಾರ್ಯಾಲಯದ ಕೆಲಸದಲ್ಲಾದ ವಿಳಂಬದಿಂದಾಗಿ ಪ್ರಸ್ತುತ ವಸ್ತುಗಳ ಬಿಲ್ ಗಳು ಪೂರೈಕೆಗಾರರಿಂದ ವರ್ಷದ ಕೊನೆಯ ತನಕ ಸಿಕ್ಕಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಕೇವಲ ಮಾರಾಟವನ್ನು ಲೆಕ್ಕಾಚಾರದಲ್ಲಿ ನೊಂದಾಯಿಸಲಾಗಿರುತ್ತದೆ, ಆದರೆ ಅದರ ಮಾರಾಟವಾಗಲು ಪಡೆದಿರುವ ವಸ್ತುಗಳನ್ನು ಖರೀದಿ ಮಾಡಲಾಗಿರುತ್ತದೆ, ಅದನ್ನು ಖರ್ಚು ಎಂಬುದಾಗಿ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುವುದಿಲ್ಲ. ಪ್ರಸ್ತುತ ವರ್ಷದಲ್ಲಿ ಮಾಡಲಾದ ಮಾರಾಟದ ಸಂಪೂರ್ಣ ಮೊತ್ತವನ್ನು ಲಾಭವೆಂದು ಪರಿಗಣಿಸಿ ಅದನ್ನು ಲಾಭನಷ್ಟದ ವರದಿಯಲ್ಲಿ ತೋರಿಸಲಾಗುತ್ತದೆ. ಇದರಿಂದಾಗಿ ಮುಂದಿನ ವರ್ಷದಲ್ಲಿ ಬಿಲ್ ಬಂದಾಗ ಆ ವರ್ಷದ ಲಾಭನಷ್ಟದ ವರದಿಯಲ್ಲಿ ಇದು ಕೇವಲ ಖರ್ಚು ಮಾತ್ರ ಕಾಣಸಿಗಬಲ್ಲದು. ಇದರಿಂದಾಗಿ ಮೊದಲ ವರ್ಷದ ಲಾಭ ಮತ್ತು ಎರಡನೇ ವರ್ಷದ ನಷ್ಟ ಎರಡನ್ನೂ ತಪ್ಪಾಗಿ ತೋರಿಸಲಾಗುತ್ತದೆ. ಕಾರಣ ಪ್ರಸ್ತುತ ವರ್ಷದ ಮಾರಾಟದ ಆದಾಯದೊಂದಿಗೆ ಸಂಬಂಧಪಟ್ಟ ಖರೀದಿಯ ಖರ್ಚನ್ನು ಸರಿಹೊಂದಾಣಿಸಿರುವುದಿಲ್ಲ. ಇದನ್ನು ಸರಿಹೊಂದಿಸಬೇಕು ಎಂಬುದಕ್ಕಾಗಿಯೇ ಒಂದು ವೇಳೆ ಪೂರೈಕೆಗಾರರಿಂದ ಬಿಲ್ ಸಿಗದಿದ್ದರೂ ಕೂಡಾ ತಾವು ಮಾಡಿರುವ ಖರೀದಿಯ ಆರ್ಡರ್ ಅಧರಿಸಿ ಪ್ರಸ್ತುತ ವಸ್ತುಗಳ ಮೌಲ್ಯಮಾಪನವನ್ನು ಮಾಡಿ ಆ ಮೌಲ್ಯವನ್ನು ಖರ್ಚು ಎಂಬುದಾಗಿ ಲೆಕ್ಕಾಚಾರದಲ್ಲಿ ನೊಂದಾಯಿಸಲಾಗುತ್ತದೆ. ಆದಾಯ ಪಡೆಯಲು ಮಾಡಿರುವ ಖರ್ಚು ಕೂಡಾ ಲೆಕ್ಕಾಚಾರದಲ್ಲಿ ನೊಂದಾಯಿಸಿಲಾಗುತ್ತದೆ ಮತ್ತು ಲಾಭದ ನೈಜ ಸ್ಥಿತಿಯನ್ನು ತೋರಿಸಲಾಗುತ್ತದೆ.
ಆದಾಯ ಮತ್ತು ಖರ್ಚು ಇವೆರಡನ್ನೂ ಸರಿಹೊಂದಿಸುವ ತತ್ವಕ್ಕೆ ಮ್ಯಾಚಿಂಗ್ ಪ್ರಿನ್ಸಿಪಲ್ ಎಂದು ಕರೆಯಲಾಗುತ್ತದೆ. ಈ ತತ್ವವನ್ನು ಪಾಲಿಸಿದ್ದರಿಂದಲೇ ಹಣಕಾಸು ವರ್ಷದ ಲಾಭನಷ್ಟದ ವರದಿಯಲ್ಲಿ ಕಂಡುಬರುವ ಲಾಭವು ಆಯಾ ವರ್ಷದಲ್ಲಾದ ಹಣಕಾಸಿನ ವ್ಯವಹಾರಗಳ ಪರಿಪೂರ್ಣವಾದ ಅಂಶ, ಎಂಬುದರ ಕುರಿತು ಖಾತರಿಯಾಗುತ್ತದೆ. ಈ ತತ್ವವನ್ನು ಪಾಲಿಸದೇ ಇದ್ದಲ್ಲಿ ಒಂದೇ ಹಣಕಾಸು ವರ್ಷದಲ್ಲಿ ಆದಾಯದ ನೊಂದಾಣಿಕೆ ಮತ್ತು ಮುಂದಿನ ವರ್ಷದಲ್ಲಿ ಕೇವಲ ಖರ್ಚಿನ ನೊಂದಾಣಿಕೆಯನ್ನು ಮಾಡಲಾಗಿ ಎರಡೂ ವರ್ಷಗಳ ಲಾಭ ಅಥವಾ ನಷ್ಟವು ಪ್ರತ್ಯಕ್ಷವಾಗಿ ಆಗದೇ ಇರುವುದನ್ನು ತೋರಿಸುವುದನ್ನು ತಡೆಯಬಹುದು.
5. ನೀತಿಗಳಲ್ಲಿರುವ ನಿರಂತರತೆ
ಲೆಕ್ಕಾಚಾರವನ್ನು ನೊಂದಾಯಿಸುವ ಕುರಿತು ಎಲ್ಲೆಡೆಯಲ್ಲಿಯೂ ಅನೇಕ ರೀತಿಯ ತತ್ವಗಳು, ಕಲ್ಪನೆಗಳು ಮತ್ತು ನಿಯಮಗಳು ಇರುವುದು ಕಂಡುಬರುತ್ತದೆ. ಆದರೂ ಕೂಡಾ ಕೆಲವು ಅಂಶಗಳನ್ನು ಅವಲಂಬಿಸುವಾಗ ಬೇರೆಬೇರೆ ಪರ್ಯಾಯಗಳನ್ನು ಆಯ್ಕೆ ಮಾಡುವುದು ಅಕೌಂಟಿಂಗ್ ನ ಪದ್ಥತಿಯಲ್ಲಿ ಮನ್ನಣೆಯಿರುವ ಅಂಶವಾಗಿದೆ. ಇದರಿಂದಾಗಿ ಇಂತಹ ವಿಕಲ್ಪಗಳಿಂದ ಕೂಡಿರುವ ನೀತಿಯನ್ನು ತತ್ವ ಮತ್ತು ಕಲ್ಪನೆ ಈ ಕುರಿತಾದ ವ್ಯವಹಾರದಲ್ಲಿ ವಿಶಿಷ್ಟ ರೀತಿಯ ಪರ್ಯಾಯಗಳನ್ನು ಆಯ್ಕೆ ಮಾಡಿದ್ದಲ್ಲಿ, ಲೆಕ್ಕಾಚಾರವನ್ನು ಬರೆಯುವಾಗ ಪ್ರತಿಯೊಂದು ಹಣಕಾಸು ವರ್ಷದಲ್ಲಿ ಶಾಶ್ವತವಾಗಿ ಇಡಲಾಗಿದೆ, ಎಂಬುದಾಗಿ ತಿಳಿಯಲಾಗುತ್ತದೆ. ಒಂದು ವೇಳೆ ಹೀಗೆ ಮಾಡದೇ ಇದ್ದಲ್ಲಿ ಪ್ರತಿಯೊಂದು ಹಣಕಾಸು ವರ್ಷದ ಲೆಕ್ಕಾಚಾರಕ್ಕೆ ಅನುಸಾರವಾಗಿ ಕಾಣುವ ಪರಿಣಾಮಗಳ ಹೋಲಿಕೆಯನ್ನು ಯೋಗ್ಯವಾಗಿ ಮಾಡುವುದು ಅಸಾಧ್ಯ. ಈ ನೀತಿಯಲ್ಲಿ ನಿರಂತರತೆ ಎಂಬುದರ ಅರ್ಥವೆಂದರೆ, ಒಂದು ಸಲ ಆಯ್ಕೆ ಮಾಡಿರುವ ಪರ್ಯಾಯವು ಯಾವಾಗಲೂ ಬದಲಾಯಿಸಬಾರದು, ಎಂಬುದಾಗಿಲ್ಲ. ಪರಿಸ್ಥಿತಿಗೆ ಅನುಸಾರವಾಗಿ ಯಾವುದೊಂದು ಹಣಕಾಸು ವರ್ಷದಲ್ಲಿ ಅಕೌಂಟಿಂಗ್ ನ ನೀತಿಯಲ್ಲಿ ಬದಲಾವಣೆ ಮಾಡಬೇಕಾದಲ್ಲಿ ಇಂತಹ ಬದಲಾವಣೆಗಳ ಕುರಿತಾದ ಮಾಹಿತಿಯನ್ನು ಹಣಕಾಸಿನ ವರದಿಯಲ್ಲಿ ನೀಡುವುದೂ ಅತ್ಯಾವಶ್ಯಕವಾಗಿದೆ.
 
ಉದಾಹರಣೆ, ಉಳಿದಿರುವ ವಸ್ತುಗಳ, ಅಂದರೆ ಸ್ಟಾಕ್ ನ ಮೌಲ್ಯಮಾಪನವನ್ನು ಮಾಡುವಾಗ ಫಿಫೋ (ಫರ್ಸ್ಟ್ ಇನ್ ಫರ್ಸ್ಟ್ ಔಟ್), ಲಿಫೋ (ಲಾಸ್ಟ್ ಇನ್ ಫರ್ಸ್ಟ್ ಔಟ್) ಅಥವಾ ವೆಟೆಡ್ ಎವರೇಜ್ ಇಂತಹ ವಿವಿಧ ಪರ್ಯಾಯಗಳನ್ನು ಅವಲಂಬಿಸುವ ಸ್ವಾತಂತ್ರ್ಯವು ಉದ್ಯಮಿಗಳಿಗೆ ಸಿಗುತ್ತದೆ. ಆದರೆ ಒಂದು ವರ್ಷದಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಮೌಲ್ಯಮಾಪನ ಮಾಡಿದಲ್ಲಿ ಮುಂದಿನ ವರ್ಷದ ಉಳಿದಿರುವ ಸ್ಟಾಕ್ ನ ಮೌಲ್ಯಮಾಪನವನ್ನು ಕೂಡಾ ಅದೇ ರೀತಿಯಲ್ಲಿ ಮಾಡುವುದೂ ಅತ್ಯಾವಶ್ಯಕವಾಗಿದೆ. ಹಾಗೆ ಮಾಡದೇ ಇದ್ದಲ್ಲಿ ಲಾಭ ಅಥವಾ ನಷ್ಟ ಇವುಗಳ ನಿಜವಾದ ಸ್ಥಿತಿಯನ್ನು ತೋರಿಸಲಾಗುವುದಿಲ್ಲ. ಯಾವುದೇ ಕಾರಣಗಳಿಂದಾಗಿ ಒಂದು ವೇಳೆ ಮೌಲ್ಯಮಾಪನದ ಬೇರೆ ರೀತಿಯನ್ನು ಕಾರ್ಯಗತಗೊಳಿಸುವ ಆವಶ್ಯಕತೆ ಯಾವುದೊಂದು ವರ್ಷದಲ್ಲಿ ಉಂಟಾದರೆ ಬದಲಾಯಿಸುವುದು ಸಾಧ್ಯವಿದೆ. ಆದರೆ ಈ ರೀತಿಯಲ್ಲಿ ಬದಲಾವಣೆ ಮಾಡಿದ್ದರಿಂದ ಲಾಭ ಮತ್ತು ನಷ್ಟ ಇವೆರಡರಲ್ಲಿ ಅದರ ಪರಿಣಾಮವು ಎಷ್ಟು ಪ್ರಮಾಣದಲ್ಲಿ ಉಂಟಾಗಿದೆ, ಎಂಬ ಅಂಶವನ್ನು ಅಂತಿಮ ಅಕೌಂಟ್ಸ್ ನ ಸೂಚನೆಯಲ್ಲಿ ಬರೆಯಬೇಕಾಗುತ್ತದೆ.
6. ಕಾಂಝರ್ವೆಟಿಸಮ್
ಲೆಕ್ಕಾಚಾರವನ್ನು ಇಡುವಾಗ ಕಾಂಝರ್ವೇಟಿಜಮ್ ಎಂಬ ತತ್ವವನ್ನು ಅವಲಂಬಿಸುವ ಒಂದು ಮಹತ್ವದ ತತ್ವವು ಅಕೌಂಟಿಂಗ್ ನ ಪದ್ಧತಿಯಲ್ಲಿದೆ. ಇದರ ಅರ್ಥವೆಂದರೆ, ಯಾವುದೇ ರೀತಿಯ ಆದಾಯ ಸಿಕ್ಕಿದೆ, ಎಂಬುದನ್ನು ನೊಂದಾಯಿಸುವ ಮುಂಚೆ ಈ ರೀತಿಯ ಆದಾಯವು ಕಾನೂನು ಪ್ರಕಾರ ಲಭಿಸಿದೆಯೇ, ಎಂಬುದನ್ನು ಖಾತರಿ ಮಾಡಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಯಾವುದೇ ರೀತಿಯ ನಷ್ಟ ಅಥವಾ ಖರ್ಚು ಆಗುವ ಸಾಧ್ಯತೆ ಕಂಡುಬರುತ್ತಿದ್ದಲ್ಲಿ, ಈ ಅಂಶಗಳು ಪ್ರತ್ಯಕ್ಷವಾಗಿ ಆಗದಿದ್ದರೂ ಕೂಡಾ ಅದರ ನೊಂದಾಣಿಕೆಯನ್ನು ಮಾಡಲಾಗುತ್ತದೆ. ಲೆಕ್ಕಾಚಾರದಲ್ಲಿ ತೋರಿಸಿರುವ ಆರ್ಥಿಕ ಸ್ಥಿತಿಯ ನಿಜವಾಗಿದೆ ಎಂಬುದನ್ನು ತೋರಿಸುವುದೇ ಇದರ ಉದ್ದೇಶವಾಗಿರುತ್ತದೆ. ಇದರಿಂದಾಗಿ ವ್ಯವಸಾಯದ ಸೌಂದರ್ಯದಿಂದ ಕೂಡಿರುವ ಆರ್ಥಿಕ ಸ್ಥಿತಿಯ ಚಿತ್ರವನ್ನು ಬಣ್ಣಿಸುವುದಕ್ಕಿಂತ, ಇದ್ದದ್ದಕ್ಕಿಂತ ಬೇರೆಯೇ ರೀತಿಯಲ್ಲಿ ವರ್ಣಿಸುವ ಒಲುಮೆಯು ಲೆಕ್ಕಾಚಾರವನ್ನು ಇಡುವವರಲ್ಲಿ ಇರುತ್ತದೆ. ಇದರ ಹಿಂದೆ ದಾರಿ ತಪ್ಪಿಸುವಂತಹ ವಾಸ್ತವಕ್ಕೆ ವಿರುದ್ಧ ರೀತಿಯಲ್ಲಿರುವ ಸ್ಥಿತಿಯನ್ನು ತೋರಿಸುವುದಕ್ಕಿಂತ ನೈಜ ಮತ್ತು ಕಠೋರವಾದರೂ ಸರಿ, ಆದರೆ ನಿಖರತವಾದ ಸ್ಥಿತಿಯನ್ನು ತೋರಿಸುವ ದೃಷ್ಟಿಕೋನವು ಇರುತ್ತದೆ. ಉದಾಹರಣೆ, ಹಣಕಾಸು ವರ್ಷದ ಕೊನೆಯಲ್ಲಿ ಎಷ್ಟು ವಸ್ತುಗಳು ಉಳಿಕೆಯಲ್ಲಿರುತ್ತವೆಯೋ, ಅದರ ಮೌಲ್ಯವನ್ನು ಲಾಭ-ನಷ್ಟದ ವರದಿಗೋಸ್ಕರ ಹಿಡಿಯುವಾಗ ಖರೀದಿಯ ಬೆಲೆ ಅಥವಾ ಮಾರುಕಟ್ಟೆಯಲ್ಲಿರುವ ಬೆಲೆ, ಇವೆರಡರಲ್ಲಿ ಯಾವುದು ಕಡಿಮೆ ಇರುತ್ತದೆಯೋ, ಆ ಬೆಲೆಯಲ್ಲಿ ಉಳಿಕೆಯ ವಸ್ತುಗಳ ಮೌಲ್ಯಮಾಪನವನ್ನು ಮಾಡಲಾಗುತ್ತದೆ. ‘ಕಾಸ್ಟ್ ಎಂಡ್ ಮಾರ್ಕೆಟ್ ಪ್ರೈಸ್ ವಿಚ್ ಎವರ್ ಇಸ್ ಲೋವರ್’ ಈ ತತ್ವಕ್ಕೆ ಅನುಸಾರವಾಗಿ ಉಳಿದಿರುವ ವಸ್ತುಗಳ ಮಾರುಕಟ್ಟೆಯಲ್ಲಿರುವ ಬೆಲೆ, ಒಂದು ವೇಳೆ ಖರೀದಿ ಮಾಡಿರುವ ಬೆಲೆಗಿಂತ ಹೆಚ್ಚು ಇದ್ದಲ್ಲಿ, ಇಂತಹ ಹೆಚ್ಚಿಸಿರುವ ಬೆಲೆಯಿಂದಾಗಿ ಲಭಿಸುವ ಲಾಭದ ಕುರಿತು ವಿಚಾರ ಮಾಡಲಾಗುವುದಿಲ್ಲ. ಆದರೆ ಮಾರುಕಟ್ಟೆಯಲ್ಲಿರುವ ಬೆಲೆಯಲ್ಲಿ ಒಂದು ವೇಳೆ ಇಳಿತವಾದಲ್ಲಿ ಪ್ರತ್ಯಕ್ಷವಾಗಿ ವಸ್ತುಗಳ ಮಾರಾಟ ಆಗದಿದ್ದರೂ ಕೂಡಾ ಉಳಿದಿರುವ ವಸ್ತುಗಳ ಮಾರಾಟದಿಂದ ಉಂಟಾಗುವ ಸಂಭಾವ್ಯ ನಷ್ಟ ಮಾತ್ರ ಮಾರುಕಟ್ಟೆಯ ಬೆಲೆಗೆ ಅನುಸಾರವಾಗಿ ವಸ್ತುಗಳ ಮೌಲ್ಯಮಾಪನ ಮಾಡಿ ಲೆಕ್ಕಾಚಾರದಲ್ಲಿ ಹಿಡಿಯಲಾಗುತ್ತದೆ.
7. ಮಹತ್ವದ ಎಲ್ಲ ಆರ್ಥಿಕ ವ್ಯವಹಾರಗಳನ್ನು ನೊಂದಾಯಿಸುವುದು (ಮಟೀರಿಯಾಲಿಟಿ)
ವ್ಯವಸಾಯದ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮವನ್ನು ಬೀರಬಲ್ಲ ಇಂತಹ ಎಲ್ಲ ಚಟುವಟಿಕೆಗಳ ನೊಂದಾಣಿಕೆಗಳನ್ನು ಲೆಕ್ಕಾಚಾರದಲ್ಲಿ ಹಿಡಿಯಲಾಗಿದೆಯೇ, ಎಂಬುದನ್ನು ಅಂತಿಮ ಅಕೌಂಟ್ (ಫೈನಲ್ ಅಕೌಂಟ್ಸ್) ತಯಾರಿಸುವ ಮುಂಚೆ ಯಾವಾಗಲೂ ದೃಢೀಕರಿಸಲಾಗುತ್ತದೆ. ವಿಶಿಷ್ಟ ಆರ್ಥಿಕ ವ್ಯವಹಾರಗಳನ್ನು ಲೆಕ್ಕಾಚಾರದಲ್ಲಿ ನೊಂದಾಯಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ ಅಥವಾ ಇಲ್ಲ, ಎಂಬುದರ ಕುರಿತಾದ ತೀರ್ಮಾನವನ್ನು ಪರಿಸ್ಥಿತಿಗೆ ಅನುಸಾರವಾಗಿ ಮಾಡಬೇಕಾಗುತ್ತದೆ. ಉದ್ಯಮಗಳಲ್ಲಿ ಒಟ್ಟು ಮಾರಾಟದ ಹೋಲಿಕೆಯನ್ನು ಮಾಡುವಾಗ ಕಂಡುಬರುವ ಯಾವುದೇ ವ್ಯವಹಾರದ ಮೊತ್ತವು ಇದರಲ್ಲಿರುವ ಒಂದು ಪ್ರಮುಖವಾದ ಅಂಶವಾಗಿದ್ದರೂ ಕೂಡಾ ಅದು ಮಾತ್ರ ಒಂದು ಅಂಶವಾಗಿದೆ ಎಂಬುದಾಗಿ ತಿಳಿಯಬಾರದು. ಉದಾಹರಣೆ, 500 ಕೋಟಿ ರೂಪಾಯಿಗಳ ಟರ್ನ್ ಓವರ್ ಇರುವ ಯಾವುದೇ ಕಂಪನಿಯ ಲೆಕ್ಕಾಚಾರದಲ್ಲಿ 1000 ರೂಪಾಯಿಗಳ ಬಿಲ್ ನ ನೊಂದಾಣಿಕೆಯನ್ನು ಮಾಡುವುದನ್ನು ಮರೆತು ಹೋಗಿದ್ದಲ್ಲಿ, ಹಾಗೆಯೇ ಈ ರೀತಿಯ ಚಿಕ್ಕ-ಪುಟ್ಟ ಮೊತ್ತಗಳ ಕುರಿತಾದ ಇನ್ನಷ್ಟು ತಪ್ಪುಗಳು ಆದಲ್ಲಿ ಅಂತಿಮ ವರದಿಯಲ್ಲಿ ತೋರಿಸಲಾಗಿರುವ ಕಂಪನಿಯ ಲಾಭ ಅಥವಾ ನಷ್ಟದ ವರದಿಯ ವಿಶ್ವಾಸಾರ್ಹತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗುವುದಿಲ್ಲ. ಆದರೆ ನೊಂದಾಯಿಸದೇ ಇರುವ 1000 ರೂಪಾಯಿಗಳ ಮಾರಾಟವು, ಆ ಕಂಪನಿಯ ಯಾವುದೊಂದು ಹೊಸ ಉತ್ಪಾದನೆಯ ಆ ವರ್ಷದಲ್ಲಿ ಮೊದಲಾಗಿಯೇ ಮಾಡಿರುವ ಒಟ್ಟು ಮಾರಾಟವಾಗಿದ್ದಲ್ಲಿ, ಆ ಬಿಲ್ ಲೆಕ್ಕಾಚಾರದಲ್ಲಿ ಹಿಡಿಯದೇ ಇರುವ ತಪ್ಪನ್ನು, ಮಹತ್ವದ ಮಾಹಿತಿಯನ್ನು ಫೈನಲ್ ಅಕೌಂಟ್ಸ್ ಓದುವವರಿಂದ ದೂರ ಇಡುವ ಉದ್ದೇಶದಿಂದ ಮಾಡಲಾಗಿದೆ, ಎಂಬುದಾಗಿ ಭಾವಿಸಲ್ಪಡಬಹುದು. ಇಂತಹ ಫೈನಲ್ ಅಕೌಂಟ್ಸ್ ಕಂಪನಿಯ ಆ ಹಣಕಾಸು ವರ್ಷದ ಆರ್ಥಿಕ ಸ್ಥಿತಿಯೊಂದಿಗೆ ತೋರಿಸುವುದಿಲ್ಲ, ಎಂಬುದಾಗಿಯೂ ಭಾವಿಸಲ್ಪಡಬಹುದು.
ಮೇಲಿನ ಎಲ್ಲ ತತ್ವಗಳನ್ನು ಆಧರಿಸಿ ಲೆಕ್ಕಾಚಾರವನ್ನು ಇಡಲಾಗುತ್ತದೆ. ವರ್ಷದ ಕೊನೆಯಲ್ಲಿ ಫೈನಲ್ ಅಕೌಂಟ್ಸ್ ತಯಾರಿಸಲಾಗುತ್ತದೆ, ಇದೇ ಲೆಕ್ಕಾಚಾರದ ಸಾರಾಂಶ. ಮುಂದಿನ ಸಂಚಿಕೆಯಲ್ಲಿ ಫೈನಲ್ ಅಕೌಂಟ್ಸ್ ಹೇಗೆ ತಯಾರಿಸಲಾಗುತ್ತದೆ, ಅದನ್ನು ಹೇಗೆ ಅರಿತುಕೊಳ್ಳಬೇಕು, ಈ ಕುರಿತು ಇನ್ನಷ್ಟು ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳಲಿದ್ದೇವೆ. 
@@AUTHORINFO_V1@@