ಕಾರ್ಯವಾಹಿ ಬಂಡವಾಳದ ಕುರಿತು ಮತ್ತು ಅದರ ಸೂಕ್ತವಾದ ನಿರ್ವಹಣೆಯ ಆವಶ್ಯಕತೆಯ ಕುರಿತು ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಂಡೆವು. ಪ್ರಸಕ್ತ ಸಂಚಿಕೆಯಲ್ಲಿ ಕಾರ್ಯವಾಹಿ ಬಂಡವಾಳದ ನಿರ್ವಹಣೆಯನ್ನು ಹೇಗೆ ಮಾಡಬೇಕು. ಅದು ಯೋಗ್ಯ ರೀತಿಯಲ್ಲಿ ನಿರ್ವಹಿಸಲ್ಪಡುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವಲ್ಲಿ ಅದರ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ. ಬ್ಯಾಂಕ್ ಗಳಿಂದ ಈ ಬಂಡವಾಳದ ಕುರಿತು ಹೇಗೆ ಸಹಕರಿಸಲಾಗುತ್ತದೆ, ಇತ್ಯಾದಿ ಅಂಶಗಳ ಕುರಿತು ತಿಳಿದುಕೊಳ್ಳೋಣ.
ಕಾರ್ಯವಾಹಿ ಬಂಡವಾಳದ ಚಕ್ರ ಮತ್ತು ಉದ್ಯಮಗಳ ಟರ್ನ್ ಓವರ್ ಇವುಗಳ ಸಂಬಂಧ
ಕಾರ್ಯವಾಹಿ ಬಂಡವಾಳದ ಚಕ್ರವು ತುಂಬಾ ಮಹತ್ವದ್ದಾಗಿದೆ. ಯಾವುದೇ ಉದ್ಯಮದ ಅಸ್ತಿತ್ವವು ಇದರಲ್ಲಿಯೇ ಅವಲಂಬಿಸಿರುತ್ತದೆ. ಉದ್ಯಮದಲ್ಲಿ ಎಷ್ಟು ಸೇಲ್ ಆಗುತ್ತದೆ ಅಥವಾ ಎಷ್ಟು ಟರ್ನ್ ಓವರ್ ಇದೆ, ಈ ಚಕ್ರದಲ್ಲಿ ಎಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಆ ಬಂಡವಾಳದಿಂದಾಗಿ ಚಕ್ರದಲ್ಲಿ (ರೊಟೇಶನ್) ಒಂದು ಸೈಕಲ್ ಪೂರ್ತಿಯಾಗಲು ಎಷ್ಟು ದಿನಗಳು ತಗಲುತ್ತವೆ, ಎಂಬಿತ್ಯಾದಿ ಅಂಶಗಳಲ್ಲಿ ಉದ್ಯಮದ ಅಸ್ತಿತ್ವವು ಅವಲಂಬಿಸಿರುವುದು ಖಂಡಿತ. ಒಂದು ಥಂಬ್ ರೂಲ್ ನ ಪ್ರಕಾರ ಹೇಳುವುದಾದಲ್ಲಿ, ‘’ಉದ್ಯಮಿಗಳು ಈ ಚಕ್ರದಲ್ಲಿ ಒಂಮ ವರ್ಷದ ಕಾಲಾವಧಿಯಲ್ಲಿ ಹೂಡಿರುವ ಹಣದ ಟರ್ನ್ ಓವರ್ ಎಷ್ಟು ಸಲ ಮಾಡಲಾಗುತ್ತದೆ, ಅಂದರೆ ಎಷ್ಟು ಸಲ ಈ ಚಕ್ರವು ವರ್ಷವೊಂದರಲ್ಲಿ ತಿರುಗುತ್ತದೆ, ಇದಕ್ಕೆ ಅವಲಂಬಿಸಿ ಉದ್ಯಮಿಗಳ ಟರ್ನ್ ಓವರ್ ಇರುತ್ತದೆ.ಅಂದರೆ ಹೆಚ್ಚು ಬಂಡವಾಳವನ್ನು ಹೂಡಿದಲ್ಲಿ ಅದರಿಂದಾಗಿ ಟರ್ನ್ ಓವರ್ ಇನ್ನಷ್ಟು ಹೆಚ್ಚಿಸಬಹುದು. ಅಂತೆಯೇ ಅಷ್ಟೇ ಬಂಡವಾಳವನ್ನು ಕಾಪಾಡಿ, ಚಕ್ರದ ಕಾಲಾವಧಿಯನ್ನು ಕಡಿಮೆ ಮಾಡಿದಲ್ಲಿ ಒಂದು ವರ್ಷದಲ್ಲಿ ಆಗುವ ರೊಟೇಶನ್ ನಲ್ಲಿ ಹೆಚ್ಚಳ ಮಾಡಿದರೂ ಕೂಡಾ ಟರ್ನ್ ಓವರ್ ಹೆಚ್ಚಾಗಬಲ್ಲದು. ಈಗ ಒಂದು ಉದಾಹರಣೆಯನ್ನು ನೋಡೋಣ. (ಸಂದರ್ಭ- ಸಪ್ಟೆಂಬರ್ 2020 ರ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನ) ಕಾರ್ಯವಾಹಿ ಬಂಡವಾಳದ ರೊಟೇಶನ್ ಒಂದು ತಿಂಗಳದ್ದಾಗಿದ್ದರಿಂದ ಒಂದು ವರ್ಷದಲ್ಲಿ ಈ ರೊಟೇಶನ್ ನ 12 ಸೈಕಲ್ ಗಳು ಪೂರ್ತಿಯಾಗುತ್ತವೆ. ಅಲ್ಲದೇ ಅದೇ ಪ್ರಮಾಣದಲ್ಲಿ ಟರ್ನ್ ಓವರ್ ವೃದ್ಧಿಸುತ್ತದೆ. ಈ ಪರಿಸ್ಥಿತಿಯಲ್ಲಿ ಉದ್ಯಮಿಗಳು ತಮ್ಮ ಎರವಲಿನ ನಿರ್ವಹಣೆಯಲ್ಲಿ (ಕ್ರೆಡಿಟ್ ಮ್ಯಾನೆಜ್ ಮೆಂಟ್) ಬದಲಾವಣೆಗಳನ್ನು ಮಾಡಿ ಗ್ರಾಹಕರಿಗೆ ಕೇವಲ 45 ದಿನಗಳ ಕ್ರೆಡಿಟ್ ನೀಡಿದಲ್ಲಿ ಈ ಚಕ್ರ ಕೇವಲ ಅರ್ಧ ತಿಂಗಳದ್ದೇ (15 ದಿನಗಳದ್ದೇ) ಇರಬಲ್ಲದು. 15 ದಿನಗಳ ರೊಟೇಶನ್ ಆಗಿದ್ದರಿಂದ ವರ್ಷದಲ್ಲಿ 24 ಸೈಕಲ್ ಗಳು ಪೂರ್ತಿಯಾಗಬಲ್ಲವು. ಇದರಿಂದಾಗಿ ಟರ್ನ್ ಓವರ್ ಇಮ್ಮಡಿಯಾಗಬಲ್ಲದು. ಕಾರ್ಯವಾಹಿ ಬಂಡವಾಳದ ರೊಟೇಶನ್ ಈ ರೀತಿಯಲ್ಲಿ ಸೇಲ್ಸ್ ನ ಸಾಮರ್ಥ್ಯದಲ್ಲಿ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಪರಿಣಾಮವನ್ನು ಬೀರುತ್ತದೆ. ಆದರೆ ಪ್ರತ್ಯಕ್ಷ ವ್ಯವಹಾರದಲ್ಲಿ ಸೇಲ್ಸ್ ನ ಮೌಲ್ಯ, ಟೆಕ್ನಾಲಾಜಿಗೆ ಮಾಡಿರುವ ದೀರ್ಘ ಕಾಲಾವಧಿಯ ಖರ್ಚು, ಹೊಸ ಮಶಿನರಿಗಳ ಖರೀದಿ ಇಂತಹ ಅನೇಕ ಘಟಕಗಳಿಂದಾಗಿ ಸೇಲ್ಸ್ ನಲ್ಲಿ ಪರಿಣಾಮ ಉಂಟಾಗುತ್ತದೆ, ಎಂಬುದನ್ನು ಗಮನದಲ್ಲಿಡಬೇಕು. ಆದರೆ ಕಾರ್ಯವಾಹಿ ಬಂಡವಾಳದ ಸೂಕ್ತ ನಿರ್ವಹಣೆಯು ವ್ಯವಹಾರದ ಹೆಚ್ಚಳಕ್ಕೆ ಸಹಕಾರವನ್ನು ನೀಡುತ್ತದೆ. ಆದರೆ ವ್ಯವಹಾರದ ನಿರ್ವಹಣೆಯನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ ಉದ್ಯಮದಲ್ಲಿ ಇಳಿತವಾಗುವುದು ಮಾತ್ರ ಖಂಡಿತ. ಆದುದರಿಂದ ಯಾವುದೇ ವ್ಯವಹಾರದ ಅಥವಾ ಉದ್ಯಮದ ನಿರ್ವಹಣೆಯಲ್ಲಿ ಕಾರ್ಯವಾಹಿ ಬಂಡವಾಳದ ಕಡೆಗೆ ಉದ್ಯಮಿಗಳು ಸೂಕ್ಷ್ಮವಾಗಿ ಗಮನ ಹರಿಸುವುದು ಮಹತ್ವದ್ದಾಗಿದೆ. ಒಂದು ವೇಳೆ ಇದನ್ನು ನಿರ್ಲಕ್ಷಿಸಿದಲ್ಲಿ ವಿಪರೀತವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಕಾರ್ಯವಾಹಿ ಬಂಡವಾಳದ ನಿರ್ವಹಣೆ
ಈ ಹಿಂದಿನ ಅಂಕಣದಲ್ಲಿ ಉಲ್ಲೇಖಿಸಿದಂತೆ, ಕಾರ್ಯವಾಹಿ ಬಂಡವಾಳದ ಸ್ವರೂಪವು ಪ್ರತಿಯೊಂದು ಉದ್ಯಮಗಳಲ್ಲಿ ಬೇರೆ ಬೇರೆಯೇ ಇರುತ್ತದೆ. ಉದಾಹರಣೆ, ವ್ಯವಹಾರವು ಯಾವ ಉದ್ಯಮದ ಕ್ಷೇತ್ರದಲ್ಲಿ ನಿರತವಾಗಿದೆ, ವಸ್ತುಗಳ ಮಾರಾಟ (ಸೇಲ್ಸ್) ಮಾಡಲಾಗುತ್ತಿದೆಯೇ, ಅಥವಾ ಸೇವೆಯನ್ನು (ಸರ್ವಿಸ್) ನೀಡಲಾಗುತ್ತದೆಯೇ, ವ್ಯವಹಾರವು ಕಾಲೋಚಿತವಾಗಿದೆಯೇ (ಸಿಜನಲ್) ಅಥವಾ ವರ್ಷವಿಡಿ ಈ ವ್ಯವಹಾರವು ನಡೆಯುತ್ತದೆಯೇ ಇತ್ಯಾದಿ ಅಂಶಗಳನ್ನು ಗಮನಿಸಬೇಕಾಗುತ್ತದೆ. ಇಂಜಿನಿಯರಿಂಗ್ ಉದ್ಯಮಗಳ ಕುರಿತು ವಿಚಾರ ಮಾಡಿದಾಗ ಸಾಮಾನ್ಯವಾಗಿ ಕಾರ್ಯವಾಹಿ ಬಂಡವಾಳದಲ್ಲಿ ಉತ್ಪಾದನೆಯಾಗಿರುವ ವಸ್ತುಗಳ ದಾಸ್ತಾನಿನ (ಸ್ಟಾಕ್) ಮೌಲ್ಯ ಇನ್ನಿತರ ಕರಂಟ್ ಆಸ್ತಿ-ಪಾಸ್ತಿಗಳ ಹೋಲಿಕೆಯಲ್ಲಿ ತುಂಬಾ ಹೆಚ್ಚು ಇರುತ್ತದೆ. ಅದರ ನಂತರದ ಕ್ರಮಾಂಕವೆಂದರೆ ಗ್ರಾಹಕರಿಂದ ಬರಲಿರುವ ಎರವಲಿನ ಮೊತ್ತ ಮತ್ತು ಕೊನೆಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ನಗದಿ. ಈ ಎಲ್ಲವನ್ನು ನಿರ್ವಹಿಸುವಾಗ ಕಾರ್ಯವಾಹಿ ಬಂಡವಾಳದಲ್ಲಿ ಅನೇಕ ಕರಂಟ್ ಆಸ್ತಿ-ಪಾಸ್ತಿಗಳು ಮತ್ತು ಸಾಲಗಳು (ಇತರರಿಗೆ ನೀಡಬೇಕಾಗಿರುವ ಮೊತ್ತ) ಇವೆಲ್ಲದರ ಪ್ರಮಾಣದ ಕುರಿತೂ ಪ್ರಮುಖವಾಗಿ ವಿಮರ್ಶಿಸಬೇಕಾಗುತ್ತದೆ. ಇದಕ್ಕೆ ಅನುಸಾರವಾಗಿ ನಿರ್ವಹಣೆಯ ಸೂಕ್ತ ನಿಲುವನ್ನು ನಿರ್ಧರಿಸಬೇಕಾಗುತ್ತದೆ.
ಕಾರ್ಯವಾಹಿ ಬಂಡವಾಳದ ನಿರ್ವಹಣೆಯ ಗುರಿಯನ್ನು ಯಾವಾಗಲೂ ಲಿಕ್ವಿಡಿಟಿ ಮತ್ತು ಪ್ರಾಫಿಟ್ಯಾಬಿಲಿಟಿ ಇವೆರಡರಲ್ಲಿ ಹೊಂದಾಣಿಸಬೇಕಾಗುತ್ತದೆ. ಕರಂಟ್ ಆಸ್ತಿ-ಪಾಸ್ತಿ (ಲಯಾಬಿಲಿಟಿ) ಹೆಚ್ಚು ಪ್ರಮಾಣದಲ್ಲಿ ಹೂಡಿದ್ದಲ್ಲಿ ಮತ್ತು ಅದೇ ಪ್ರಮಾಣದಲ್ಲಿ ಒಂದು ವೇಳೆ ಟರ್ನ್ ಓವರ್ ಇಲ್ಲದಿದ್ದಲ್ಲಿ, ಅಂದರೆ ಉತ್ಪಾದಿಸಲಾಗಿರುವ ವಸ್ತು-ಸಾಮಗ್ರಿಗಳು ಹಾಗೆಯೇ ಬಿದ್ದುಕೊಂಡಿದ್ದಲ್ಲಿ, ಎರವಲಿನ ರಿಕವರಿ ಸೂಕ್ತವಾಗಿ ಸಮಯಕ್ಕೆ ಸರಿಯಾಗಿ ಆಗದಿದ್ದಲ್ಲಿ ಎರವಲಿನ ಅಂಕೆ-ಸಂಖ್ಯೆಗಳು ಹೆಚ್ಚಾಗುತ್ತಿದ್ದಲ್ಲಿ, ಆಗ ಕರಂಟ್ ಅಕೌಂಟ್ ನಲ್ಲಿ ಬೃಹತ್ ಪ್ರಮಾಣದಲ್ಲಿ ಬಡ್ಡಿ ರಹಿತವಾದ ಮೊತ್ತವು ಉಳಿಯುತ್ತಿದ್ದಲ್ಲಿ, ಕಾರ್ಯವಾಹಿ ಬಂಡವಾಳದ ಪ್ರಮಾಣ ಹೆಚ್ಚು ಇದ್ದರೂ ಕೂಡಾ ಅದು ಅನುತ್ಪಾದಕವಾಗಿದ್ದರಿಂದ ಉದ್ಯಮದಲ್ಲಿ ಲಭಿಸುವ ಲಾಭದಲ್ಲಿ ವಿಪರೀತವಾದ ಪರಿಣಾಮನ್ನುಂಟು ಮಾಡುತ್ತದೆ. ಅಂದರೆ ಲಾಭದ ಪ್ರಮಾಣವು ತುಂಬಾ ಕಡಿಮೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ವೀಕ್ಷಿಸಿದಲ್ಲಿ ಕಾರ್ಯವಾಹಿ ಬಂಡವಾಳದಲ್ಲಿ ತುಂಬಾ ಕಡಿಮೆ ಹಣ ಹೂಡಿದ್ದಲ್ಲಿ ಪೂರೈಕೆಗಾರರಿಂದ ನೀಡಲಾಗುವ ಎರವಲಿನಲ್ಲಿಯೇ ಎಲ್ಲವೂ ಅವಲಂಬಿಸಿರುತ್ತದೆ. ‘ಇಸಕಿ ಟೋಪಿ ಉಸಕೆ ಸಿರ್ ಪರ್’ ಎಂಬ ಹಿಂದಿ ಭಾಷೆಯ ವಾಕ್ಯದಂತೆ ಎಲ್ಲ ರೀತಿಯಲ್ಲಿ ಕಸರತ್ತು ಮಾಡುವಾಗ ಯಾವುದೇ ರೀತಿಯ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಹಣ ಇಲ್ಲವೆಂಬ ಕಾರಣದಿಂದ ಉದ್ಯಮದಲ್ಲಿರುವ ಅವಕಾಶಗಳನ್ನು ಬಿಡಬೇಕಾಗಬಹುದು. ಇದೇ ಕಾರಣದಿಂದ ಸೇಲ್ಸ್ ಮತ್ತು ಲಾಭದಲ್ಲಿ ವಿಪರೀತ ಪರಿಣಾಮಗಳು ಉದ್ಭವಿಸುತ್ತವೆ. ಸೂಕ್ತವಾದ ನಿರ್ವಹಣೆಯನ್ನು ಮಾಡಿದಲ್ಲಿ ಎರಡೂ ಅಂಶಗಳನ್ನು ನಿರ್ಲಕ್ಷಿಸಿ ಉದ್ಯಮಕ್ಕೆ ಬೇಕಾಗುವಷ್ಟೇ ಮತ್ತು ಆವಶ್ಯಕತೆ ಇರುವಾಗಲೇ ಕಾರ್ಯವಾಹಿ ಬಂಡವಾಳ ಉಪಲಬ್ಧವಾಗಬಲ್ಲದು, ಎಂಬ ಕುರಿತು ಮುತುವರ್ಜಿಯನ್ನು ವಹಿಸಲಾಗುತ್ತದೆ. ಇದರಲ್ಲಿಯೂ ‘ಜಸ್ಟ್ ಇನ್ ಟೈಮ್’ ರೀತಿಯನ್ನು ಅವಲಂಬಿಸಿ ಕನಿಷ್ಠ ಮತ್ತು ತಮ್ಮಲ್ಲಿರುವ ಆರ್ಡರ್ ಪೂರ್ತಿಗೊಳಿಸಲು ಮುಂದಿನ ದಿನಗಳಲ್ಲಾಗುವ ಉತ್ಪಾದನೆಗೋಸ್ಕರ ಎಷ್ಟು ಆವಶ್ಯಕವಿದೆಯೇ, ಅಷ್ಟೇ ವಸ್ತುಗಳನ್ನು ಖರೀದಿಸಲಾಗುತ್ತದೆ. ಅಲ್ಲದೇ ವಸ್ತುಗಳ ಸಂಗ್ರಹಣೆಯಲ್ಲಿ ದೊಡ್ಡ ಪ್ರಮಾಣದ ಬಂಡವಾಳವು ಸಿಲುಕುವ ಅಪಾಯವನ್ನೂ ತಡೆಯಲಾಗುತ್ತದೆ. ಇದರಂತೆಯೇ ಗ್ರಾಹಕರಿಗೆ ಕ್ಯಾಶ್ ಡಿಸ್ಕೌಂಟ್ ನೀಡಿ ಅಡವಾನ್ಸ್ ನೀಡಲು ಅಥವಾ ಕ್ರೆಡಿಟ್ ಪಿರಿಯಡ್ ನ ಮೊದಲು ಪೆಮೆಂಟ್ ನೀಡುವಂತೆ ಮಾಡಿ ಬಾಕಿಯು ಕಡಿಮೆಯಾಗುವಂತೆ ಮುತುವರ್ಜಿಯನ್ನು ವಹಿಸಲಾಗುತ್ತದೆ. ಅದರಂತೆ ಹೆಚ್ಚುವರಿ ಬ್ಯಾಂಕ್ ಬ್ಯಾಲೆನ್ಸ್ ಉಳಿಯುತ್ತಿದ್ದಲ್ಲಿ, ಅದನ್ನು ಬಳಸಿ ಕ್ಯಾಶ್ ಡಿಸ್ಕೌಂಟ್ ಪಡೆದು ಕಚ್ಚಾವಸ್ತುಗಳನ್ನು ನಗದಿಯಲ್ಲಿ ಖರೀದಿಸಿ ಹೆಚ್ಚು ಲಾಭವನ್ನು ಪಡೆಯುವ ಪ್ರಯತ್ನವನ್ನು ಮಾಡಬಹುದು. ಇದರ ವಿರುದ್ಧ ಪರಿಸ್ಥಿತಿಯಲ್ಲಿ ವ್ಯವಸಾಯವನ್ನು ಹೆಚ್ಚಿಸಲು ಬಂಡವಾಳ ಕಡಿಮೆ ಇದ್ದಲ್ಲಿ ಬ್ಯಾಂಕ್ ನಿಂದ ಕ್ಯಾಶ್ ಕ್ರೆಡಿಟ್, ಓವರ್ ಡ್ರಾಫ್ಟ್ ಇತ್ಯಾದಿಗಳನ್ನು ಪಡೆದು ಹಣದ ವ್ಯವಸ್ಥೆಯನ್ನು ಮಾಡುವುದೂ ಸಾಧ್ಯ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಾರ್ಯವಾಹಿ ಬಂಡವಾಳದ ನಿರ್ವಹಣೆಯನ್ನು ಮಾಡುವಾಗ ಈ ಬಂಡವಾಳವನ್ನು ಸಮಯಕ್ಕೆ ಸರಿಯಾಗಿ ಮತ್ತು ಉದ್ಯಮಗಳ ಬೇಡಿಕೆಯನ್ನು ಪೂರೈಸಲು ಉಪಲಬ್ಧವಾಗಬಲ್ಲವು, ಇದನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕವಾಗಿದೆ.
ಉದ್ಯಮದಲ್ಲಿ ಈ ಬಂಡವಾಳದ ಕುರಿತು ಇರುವ ಬೇಡಿಕೆಗಳು ಪರಿಸ್ಥಿತಿಗೆ ಅನುಸಾರವಾಗಿ ಆಗಾಗ ಬದಲಾಗುತ್ತವೆ. ಇದರಿಂದಾಗಿ ಸ್ಥಿರ ಆಸ್ತಿ-ಪಾಸ್ತಿಗಳ (ಫಿಕ್ಸ್ಡ್ ಅಸೆಟ್) ಕುರಿತು ಹೇಳುವುದಾದಲ್ಲಿ, ಒಮ್ಮೆ ಯಾವುದೇ ಮೊತ್ತವನ್ನು ಉದ್ಯಮದಲ್ಲಿ ಹೂಡಿದಲ್ಲಿ ಮಾಲಿಕರ ಜವಾಬ್ದಾರಿಯು ಮುಗಿಯಿತು, ಎಂದು ಹೇಳಬಹುದು. ಆದರೆ ಕಾರ್ಯವಾಹಿ ಬಂಡವಾಳದ ಕುರಿತು ಈ ಸ್ಥಿತಿಯು ಇರುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಉದ್ಯಮದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಚ್ಚೂ ಅಲ್ಲ ಮತ್ತು ಕಡಿಮೆಯೂ ಅಲ್ಲ ಎಂಬ ಪ್ರಮಾಣದಲ್ಲಿ ಬಂಡವಾಳದ ಪೂರೈಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಸದ್ಯದ ಉದಾಹರಣೆಯನ್ನು ನೀಡುವುದಾದಲ್ಲಿ, ಅಕಸ್ಮಾತ್ತಾಗಿ ಲಾಕ್ ಡೌನ್ ಘೋಷಿಸಿದ ನಂತರ ಅನೇಕ ಉದ್ಯಮಗಳ ಮಾರುಕಟ್ಟೆಯಲ್ಲಿದ್ದ ವಸೂಲಾತಿಗಳು ಅಲ್ಲಲ್ಲಿಯೇ ನಿಂತವು. ಇದರಿಂದಾಗಿ ಪ್ರತಿದಿನದ ಖರ್ಚಿಗೆ ಬೇಕಾಗುವ ನಗದಿಯು ವ್ಯವಹಾರದಲ್ಲಿ ಇರುವುದು ಅತ್ಯಾವಶ್ಯಕವಾಯಿತು. ಸಾಕಷ್ಟು ಪ್ರಮಾಣದಲ್ಲಿ ನಗದಿಯ ಬೇಡಿಕೆಯನ್ನು ಉದ್ಯಮಗಳಲ್ಲಿ ಮಾಲಿಕರು, ಹೊಸದಾದ ಬಂಡವಾಳವೆಂದು ತಂದು ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆದು, ಅನೇಕ ಉದ್ಯಮಿಗಳಿಗೆ ವ್ಯವಸಾಯವನ್ನು ಉಳಿಸಿಕೊಳ್ಳುವಲ್ಲಿ ಬೇರೆ ದಾರಿಯೇ ಇರಲಿಲ್ಲ.
ಕಾರ್ಯವಾಹಿ ಬಂಡವಾಳದ ನಿರ್ವಹಣೆಯ ಮೌಲ್ಯಮಾಪನ
ಕಾರ್ಯವಾಹಿ ಬಂಡವಾಳದ ನಿರ್ವಹಣೆಯನ್ನು ಯೋಗ್ಯ ರೀತಿಯಲ್ಲಿ ಮಾಡಲಾಗುತ್ತಿದೆಯೇ ಇಲ್ಲವೇ, ಎಂಬುದನ್ನು ಪರಿಶೀಲಿಸಲು ಈ ಬಂಡವಾಳದ ಆಗಾಗಿನ ಸ್ಥಿತಿಯ ಕುರಿತು ಹಲವಾರು ರೇಶೋ (ಅನುಪಾತ) ಅಂದರೆ ಅನುಪಾತದ ಪ್ರಮಾಣ ಎಂಬುದಾಗಿ ಈ ನಿಯತಾಂಕಗಳನ್ನು ಬಳಸಲಾಗುತ್ತದೆ. ಕೆಲವು ನಿಯತಾಂಕಗಳನ್ನು ಈ ಕೆಳಗೆ ನೀಡಲಾಗಿದೆ.
1. ಕರಂಟ್ ರೇಶೋ= ಕರಂಟ್ ಅಸೆಟ್ಸ್ (ಚಾಲ್ತಿ ಆಸ್ತಿ-ಪಾಸ್ತಿ) ÷ ಕರಂಟ್ ಪೆಮೆಂಟ್ಸ್ (ಚಾಲ್ತಿ ಪಾವತಿ)
ಕಾರ್ಯವಾಹಿ ಬಂಡವಾಳದ ಸ್ಥಿತಿಯು ಹೇಗಿದೆ, ಎಂಬುದನ್ನು ಸಾಮಾನ್ಯವಾಗಿ ತಿಳಿದುಕೊಳ್ಳಲು ಕರಂಟ್ ರೆಶೋ ತುಂಬಾ ಉಪಯುಕ್ತವಾಗಿದೆ. ಸಾಮಾನ್ಯವಾಗಿ ಈ ಅನುಪಾತವು ಎರಡು ವಿಧದಲ್ಲಿರುವುದನ್ನು ಆದರ್ಶವೆಂದು ತಿಳಿಯಲಾಗುತ್ತದೆ. ಅಂದರೆ ಕರಂಟ್ ಅಸೆಟ್ಸ್ ಕರಂಟ್ ಪೆಮೆಂಟ್ಸ್ ಗಳಿಗಿಂತ ಇಮ್ಮಡಿ ಇದ್ದಲ್ಲಿ ಪೆಮೆಂಟ್ಸ್ ಗಳನ್ನು ಪಾವತಿಸಲು ವ್ಯವಹಾರದಲ್ಲಿ ಸಾಕಷ್ಟು ನಗದಿ ಇದೆ ಎಂದು ತಿಳಿಯಲಾಗುತ್ತದೆ. ಇದರಿಂದ ಸಪ್ಲೈಯರ್ ನಿಂದ ವಸ್ತುಗಳ ಪೂರೈಕೆಯು ಯೋಗ್ಯವಾಗಿ ಆಗುತ್ತಿದ್ದಲ್ಲಿ, ವ್ಯವಹಾರದ ರೊಟೇಶನ್ ಯಾವುದೇ ಅಡೆತಡೆಗಳಿಲ್ಲದೇ ನಡೆಯುವ ಸಾಧ್ಯತೆ ಇರುತ್ತದೆ. ಸಾಕಷ್ಟು ಬಫರ್ ಇರುವುದರಿಂದ ಉದ್ಯಮಿಗಳೂ ಯಾವುದೇ ರೀತಿಯ ಹಿಂಜರಿಕೆ ಇಲ್ಲದೇ ಸಾಕಷ್ಟು ಪ್ರಮಾಣದಲ್ಲಿ ವ್ಯವಹಾರದಲ್ಲಿರುವ ಇನ್ನಿತರ ಅಂಶಗಳ ಕಡೆಗೆ ಗಮನ ಹರಿಸಬಲ್ಲರು. ಈ ಅನುಪಾತವು ತುಂಬಾ ಹೆಚ್ಚು ಇದ್ದಲ್ಲಿ ಮಾತ್ರ ಕರಂಟ್ ಎಸೆಟ್ ನಲ್ಲಿ ಹೂಡಿರುವ ಬಂಡವಾಳವು ಅನುತ್ಪಾದಕವಾಗಿದೆಯೇ, ಎಂಬುದನ್ನು ಪರಿಶೀಲಿಸಬೇಕು. ಈ ರೀತಿಯ ಅನುತ್ಪಾದಕ ಅಸೆಟ್ ಗಳಲ್ಲಿ ಸಿಲುಕಿರುವ ಬಂಡವಾಳವನ್ನು ಬೇಗನೇ ಬಿಡುಗಡೆ ಮಾಡುವಲ್ಲಿ ಚಟುವಟಿಕೆಗಳನ್ನು ಮುಂದುವರಿಸುವುದೂ ಅತ್ಯಾವಶ್ಯಕವಾಗಿದೆ. ಇದಕ್ಕೆ ವಿರುದ್ಧವಾಗಿ ಈ ಅನುಪಾತವು ತುಂಬಾ ಕಡಿಮೆ ಇದ್ದಲ್ಲಿ ವ್ಯವಸಾಯವು ಪೂರೈಕೆಗಾರರ, ಬ್ಯಾಂಕ್ ನಿಂದ ಪಡೆದಿರುವ ಸಾಲದಿಂದಲೇ ನಡೆಸಲ್ಪಡುವ ಸಾಧ್ಯತೆ ಇರುತ್ತದೆ. ಇದರಲ್ಲಿ ಯಾವುದೇ ರೀತಿಯ ಕೊರತೆಗಳು ಉಂಟಾದಲ್ಲಿ ಉದ್ಯಮಗಳ ರೊಟೇಶನ್ ಅಡಚಣೆಯಲ್ಲಿ ಸಿಲುಕುವ ಅಪಾಯವನ್ನೂ ಎದುರಿಸಬೇಕಾಗುತ್ತದೆ.
2. ಎಸಿಡ್ ಟೆಸ್ಟ್ ರೆಶೋ ಅಥವಾ ಲಿಕ್ವಿಡ್ ರೆಶೋ = (ನಗದಿ + ಬ್ಯಾಂಕ್ ಬ್ಯಾಲೆನ್ಸ್ + ಎರವಲು) ÷ ಕರಂಟ್ ಪೆಮೆಂಟ್ಸ್ (ಪಾವತಿ)
ಈ ಅನುಪಾತದ ಕುರಿತು ವಿಚಾರ ಮಾಡಿದಾಗ ತಕ್ಷಣ ಒಂದು ಮಹತ್ವದ ಅಂಶವು ಗಮನಕ್ಕೆ ಬರುತ್ತದೆ. ಕರಂಟ್ ಅಸೆಟ್ ಗಳಲ್ಲಿ ಯಾವ ಅಸೆಟ್ ಗಳು ನಗದಿಯಲ್ಲಿ ರೂಪಾಂತರಿಸಲ್ಪಟ್ಟಿವೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ನೀಡಬಲ್ಲವು, ಅಷ್ಟೇ ಅಸೆಟ್ಸ್, ಕರಂಟ್ ಪೆಮೆಂಟ್ ನೀಡುವ ನಿಟ್ಟಿನಲ್ಲಿ ಎಷ್ಟು ಪ್ರಮಾಣದಲ್ಲಿ ಬೇಕಾಗಲಿವೆ, ಎಂಬುದನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಅನುಪಾತ ಇದೊಂದು ಆದರ್ಶ ರೀತಿ ಎಂದು ತಿಳಿಯಲಾಗುತ್ತದೆ. ಕರಂಟ್ ಅಸೆಟ್ಸ್ ಗಳು ಕರಂಟ್ ಪೆಮೆಂಟ್ ಗಳು ಎಷ್ಟಿವೆಯೇ, ಅಷ್ಟೇ ಪೆಮೆಂಟ್ ಗಳನ್ನು ನೀಡಲು ಉದ್ಯಮಗಳಲ್ಲಿ ಸಾಕಷ್ಟು ನಗದಿ ಮೊತ್ತ ಉಪಲಬ್ಧವಿದೆ, ಎಂಬುದಾಗಿ ತಿಳಿಯಲಾಗುತ್ತದೆ. ಉದ್ಯಮದಲ್ಲಿ ಸಂಗ್ರಹಿಸಿಟ್ಟಿರುವ ವಸ್ತುಗಳನ್ನು ಮಾರಾಟ ಮಾಡಿದ ನಂತರ ಅದರ ವಸೂಲಿಯಾಗುವ ಕುರಿತು ದಾರಿ ನೋಡದೇ, ಎಷ್ಟು ಹಣ ಒಟ್ಟಾಗುತ್ತದೆಯೋ, ಅಷ್ಟೇ ಕರಂಟ್ ಪೆಮೆಂಟ್ ಪಾವತಿಸುವಲ್ಲಿ ದಾರಿ ನೋಡದಿದ್ದರೂ ಕೂಡಾ ಹಣವನ್ನು ಒಟ್ಟು ಮಾಡುವುದು ಸಾಧ್ಯ. ಕರಂಟ್ ಪೆಮೆಂಟ್ ನೀಡಲು ಇದು ಸಾಕೇ, ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಂದರೆ ವ್ಯವಹಾರದಲ್ಲಿ ಸಾಲಗಾರರು ನಾಳೆಯೇ ಹಣ ಮರುಪಾವತಿಸಿ ಎಂದು ಗಡಿಬಿಡಿ ಮಾಡಿದಲ್ಲಿ, ಅವರಿಗೆ ಹೇಗೆ ಮರುಪಾವತಿಸಬಹುದು ಎಂಬುದೂ ಗಮನಕ್ಕೆ ಬರುತ್ತದೆ. ಈ ಅನುಪಾತವು ತುಂಬಾ ಹೆಚ್ಚು ಇರುವುದು, ಅಂದರೆ ಅನಾವಶ್ಯಕವಾದ ಉಳಿಕೆ (ಬ್ಯಾಲೆನ್ಸ್), ವಸೂಲಾತಿಯಲ್ಲಿ ನಿರ್ಲಕ್ಷ್ಯ, ಸೂಕ್ತ ಸಮಯದಲ್ಲಿ ವಸೂಲಾತಿ ಆಗದೇ ಇರುವುದು ಇಂತಹ ಸಮಸ್ಯೆಗಳಲ್ಲಿ ವ್ಯವಹಾರವು ಸಿಲುಕುವ ಸಾಧ್ಯತೆ ಇರುತ್ತದೆ.
ಕಾರ್ಯವಾಹಿ ಬಂಡವಾಳಕ್ಕೋಸ್ಕರ ಬ್ಯಾಂಕ್ ಗಳಿಂದ ಸಾಲದ ಪರ್ಯಾಯ
ಬ್ಯಾಂಕ್ ಗಳಿಂದ ಉದ್ಯಮಿಗಳು ಬಂಡವಾಳಕ್ಕೋಸ್ಕರ ಎರಡು ವಿಧದಲ್ಲಿ ಅರ್ಥಿಕ ಸಹಾಯವನ್ನು ಪಡೆಯಬಲ್ಲರು. ಹಣದ ರೂಪದಲ್ಲಿ ಪ್ರತ್ಯಕ್ಷ ಸಾಲ ಇದೊಂದಾದರೆ, ಎರಡನೆಯದಾಗಿ ಬ್ಯಾಂಕ್ ಗಳು ಉದ್ಯಮಿಗಳಿಂದ ಅವರ ಸಾಲಗಾರರಿಗೆ ಸೂಕ್ತ ಸಮಯದಲ್ಲಿ ಮರುಪಾವತಿ ಮಾಡಲಾಗುತ್ತದೆ, ಎಂಬುದರ ಬಗ್ಗೆ ಕೇವಲ ಶ್ಯುರಿಟಿ (ಖಾತರಿ) ನೀಡಿ ಅಪರೋಕ್ಷವಾಗಿ ಕಾರ್ಯವಾಹಿ ಬಂಡವಾಳವನ್ನು ಲಭ್ಯ ಮಾಡಿಕೊಡುವುದು. ಪ್ರತ್ಯಕ್ಷವಾಗಿ ಸಾಲದ ಪ್ರಮುಖ ಯೋಜನೆಗಳನ್ನು ಈ ಮುಂದೆ ನೀಡಲಾಗಿದೆ.
ಕ್ಯಾಶ್ ಕ್ರೆಡಿಟ್
ವಸ್ತುಗಳ ಸಂಗ್ರಹ ಮತ್ತು ಡೆಟರ್ಸ್ ಗೆ (ಸಾಲಕ್ಕೆ) ಅಡಮಾನದ ರೀತಿಯ ಅಲ್ಪಾವಧಿಯ ಸಾಲದ ಮಿತಿಯನ್ನು ಬ್ಯಾಂಕ್ ಗಳಿಂದ ಉದ್ಯಮಿಗಳಿಗೆ ಮಂಜೂರು ಮಾಡಲಾಗುತ್ತದೆ. ಈ ಮಿತಿಯ ತನಕ ಉದ್ಯಮಿಗಳು ಕ್ಯಾಶ್ ಕ್ರೆಡಿಟ್ ಖಾತೆಯಿಂದ ಪೆಮೆಂಟ್ ಮಾಡಬಲ್ಲರು ಮತ್ತು ಹೆಚ್ಚುವರಿ ಹಣವು ಜಮೆಯಾದಂತೆ ಆ ಖಾತೆಯಲ್ಲಿ ಜಮೆ ಮಾಡುತ್ತಾರೆ. ಎಷ್ಟು ಮೊತ್ತವನ್ನು ಬಳಸಲಾಗಿದೆಯೋ, ಅಷ್ಟೇ ಮೊತ್ತದ ಬಡ್ಡಿಯು ಅನ್ವಯಿಸುತ್ತದೆ ಮತ್ತು ಅಷ್ಟೇ ಮೊತ್ತದ ವಸೂಲಾತಿಯನ್ನು ಮಾಡಲಾಗುತ್ತದೆ.
ಓವರ್ ಡ್ರಾಫ್ಟ್
ಫಿಕ್ಸ್ಡ್ ಡಿಸಾಸಿಟ್, ಫಿಕ್ಸ್ಡ್ ಮತ್ತು ಕರಂಟ್ ಅಸೆಟ್ ಇತ್ಯಾದಿ ಅಡಮಾನಕ್ಕೆ ಬ್ಯಾಂಕ್ ಉದ್ಯಮಿಗಳಿಗೆ ಅವರ ಕರಂಟ್ ಖಾತೆಯಿಂದ ಉಳಿದಿರುವ ಮೊತ್ತಕ್ಕಿಂತ ಒಂದು ವಿಶಿಷ್ಟವಾದ ಮಿತಿಯ ತನಕ ಹೆಚ್ಚು ನಗದಿ ಮೊತ್ತವನ್ನು ತೆಗೆಯಲು ಮನ್ನಣೆಯನ್ನು ನೀಡುತ್ತಾರೆ. ಅಂದರೆ ಆ ಮಿತಿಗಿಂತ ಹೆಚ್ಚುವರಿ ಕಾರ್ಯವಾಹಿ ಬಂಡವಾಳವು ಉದ್ಯಮಿಗಳಿಗೆ ಉಪಲಬ್ಧವಾಗಬಲ್ಲದು ಮತ್ತು ಉಳಿದಿರುವ ಮೊತ್ತಕ್ಕಿಂತ ಎಷ್ಟು ಹೆಚ್ಚು ಮೊತ್ತವು ಖಾತೆಯಿಂದ ಪ್ರತ್ಯಕ್ಷವಾಗಿ ಖರ್ಚು ಮಾಡಲಾಗುತ್ತದೆಯೋ, ಅಷ್ಟೇ ಮೊತ್ತದ ಬಡ್ಡಿಯನ್ನು ವಸೂಲು ಮಾಡಲಾಗುತ್ತದೆ.
ಬಿಲ್ ಡಿಸ್ಕೌಂಟಿಂಗ್
ಯಾವ್ಯಾವ ಬಿಲ್ ಗಳ ಹಣವು ಬಾಕಿ ಇದೆಯೋ, ಅದನ್ನು ಅಡಮಾನ ಎಂದು ತಿಳಿದು ಬ್ಯಾಂಕ್ ಉದ್ಯಮಿಗಳಿಗೆ, ಗ್ರಾಹಕರ ಕ್ರೆಡಿಟ್ ಪಿರಿಯಡ್ ಮುಗಿಯುವ ಮುಂಚೆಯೇ ಹಣವನ್ನು ಲಭ್ಯ ಮಾಡಿ ಕೊಡುತ್ತಾರೆ. ಬಿಲ್ ಗಳ ವಸೂಲಾತಿ ಆದ ನಂತರ ಬಂದಿರುವ ಮೊತ್ತವನ್ನು ಬಿಲ್ ಡಿಸ್ಕೌಂಟಿಂಗ್ ನ ಖಾತೆಯಲ್ಲಿ ಜಮೆ ಮಾಡುತ್ತಾರೆ.
ಪೆಕಿಂಗ್ ಕ್ರೆಡಿಟ್
ರಫ್ತು ಮಾಡುವವರಿಗೆ (ಎಕ್ಸ್ ಪೋರ್ಟರ್ಸ್) ವಸ್ತುಗಳನ್ನು ರಫ್ತು ಮಾಡುವ ಮುಂಚೆ ಮತ್ತು ನಂತರವೂ ಬಿಲ್ ಗಳ ಮೊತ್ತವು ಜಮೆಯಾಗುವ ತನಕ ಬ್ಯಾಂಕ್ ವಿಶೇಷ ಸವಲತ್ತಿನ ಬಡ್ಡಿ ದರದಲ್ಲಿ ಸಾಲವನ್ನು ಉಪಲಬ್ಧ ಮಾಡಿಕೊಡುತ್ತಾರೆ.
ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್
ನಿಗದಿತ ಮೊತ್ತದ ಕಾರ್ಯವಾಹಿ ಬಂಡವಾಳವು ಉದ್ಯಮಗಳಲ್ಲಿ ಯಾವಾಗಲೂ ಸಿಲುಕುತ್ತಿದ್ದಲ್ಲಿ ಮತ್ತು ಮಾಲಿಕರ ಸ್ವಂತದ್ದೇ ಆದ ಬಂಡವಾಳವು ಅದಕ್ಕೋಸ್ಕರ ಸಾಕಾದಲ್ಲಿ, ಬ್ಯಾಂಕ್ ಗಳು ಅದರಲ್ಲಿರುವ ವ್ಯತ್ಯಾಸದ ಮೊತ್ತವನ್ನು ದೀರ್ಘ ಕಾಲಾವಧಿಯ ಸಾಲದ ರೂಪದಲ್ಲಿ ನೀಡುತ್ತವೆ. ಕ್ಯಾಶ್ ಕ್ರೆಡಿಟ್ ನಂತೆ ಒಂದೇ ವರ್ಷದಲ್ಲಿ ಮರುಪಾವತಿ ಅಥವಾ ನವೀಕರಣವನ್ನು ಮಾಡುವ ಆವಶ್ಯಕತೆ ಇರುವುದಿಲ್ಲ.
ಅಡಮಾನಕ್ಕೆ ಆಧರಿಸಿರುವ ಅಪರೋಕ್ಷ ರೀತಿಯ ಆರ್ಥಿಕ ಸಹಾಯದ ಪರ್ಯಾಯ (ಫಂಡ್ ಗಳೊಂದಿಗೆ ಆಧರಿಸದೇ ಇರುವುದು)
ಬ್ಯಾಂಕ್ ಗಳಿಗೋಸ್ಕರ ಈ ರೀತಿಯಲ್ಲಿ ಉದ್ಯಮಿಗಳಿಗೆ ಕಾರ್ಯವಾಹಿ ಬಂಡವಾಳಕ್ಕೋಸ್ಕರ ಸಹಾಯ ಮಾಡುವುದು ಹೆಚ್ಚು ಸುಲಭವಾಗಿರುತ್ತದೆ. ಕಾರಣ ಬ್ಯಾಂಕ್ ಗಳಿಗೆ ಪ್ರತ್ಯಕ್ಷವಾಗಿ ಯಾವುದೇ ರೀತಿಯ ಧನ ಸಹಾಯವನ್ನು ನೀಡುವ ಆವಶ್ಯಕತೆ ಇರುವುದಿಲ್ಲ. ಆದರೆ ಉದ್ಯಮಿಗಳಿಂದ ಮರುಪಾವತಿಯಾಗಬಲ್ಲದು, ಎಂಬುದರ ಕುರಿತು ಅಡಮಾನವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ಇಂತಹ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರ ವ್ಯಾಪ್ತಿಯಲ್ಲಿಯೇ ಅನೇಕ ಬಾರಿ ಮಂಜೂರಾತಿಯನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಮುಖವಾದ ಅಂಶವೆಂದರೆ ಬ್ಯಾಂಕ್ ಗ್ಯಾರಂಟಿ ಮತ್ತು ಲೆಟರ್ ಆಫ್ ಕ್ರೆಡಿಟ್ (ಎಲ್.ಸಿ.) ಎಂಬ ಎರಡು ಪರ್ಯಾಯಗಳು ಉದ್ಯಮಿಗಳಿಗೆ ಲಭಿಸಬಲ್ಲವು. ಇದರಲ್ಲಿ ಬ್ಯಾಂಕ್, ಉದ್ಯಮಿಗಳ ಪೂರೈಕೆಗಾರರಿಗೆ ಅಥವಾ ಇನ್ನಿತರ ಯಾವುದೇ ಸಾಲಗಾರರಿಗೆ, ಉದ್ಯಮಿಗಳಿಂದ ಸೂಕ್ತ ಸಮಯದಲ್ಲಿ ಪೆಮೆಂಟ್ ಸಿಗುತ್ತದೆ, ಎಂಬ ಶ್ಯುರಿಟಿಯನ್ನು ನೀಡುತ್ತಾರೆ. ಒಂದು ವೇಳೆ ಉದ್ಯಮಿಗಳಿಂದ ಪೆಮೆಂಟ್ ಬರದಿದ್ದಲ್ಲಿ ಅದನ್ನು ಮರುಪಾವತಿಸುವ ಜವಾಬ್ದಾರಿಯನ್ನು ಬ್ಯಾಂಕ್ ವಹಿಸುತ್ತದೆ. ಅಂದರೆ ಉದ್ಯಮಿಗಳು ಸೂಕ್ತ ಸಮಯದಲ್ಲಿ ಪೆಮೆಂಟ್ ಮಾಡದಿದ್ದಲ್ಲಿ, ಮಾತ್ರ ಪ್ರತ್ಯಕ್ಷವಾದ ಧನ ಸಹಾಯವನ್ನು ಮಾಡುವ ಪ್ರಸಂಗವು ಎದುರಾದಲ್ಲಿ ಬ್ಯಾಂಕ್ ಅದರ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅಂದರೆ ಉದ್ಯಮಿಗಳಿಂದ ಪೆಮೆಂಟ್ ಮಾಡುವ ಜವಾಬ್ದಾರಿಯನ್ನು ಸೂಕ್ತ ಸಮಯದಲ್ಲಿ ನಿರ್ವಹಿಸದಿದ್ದಲ್ಲಿ, ಧನ ಸಹಾಯವನ್ನು ಮಾಡುವ ಪ್ರಸಂಗವು ಬ್ಯಾಂಕ್ ನ ಎದುರು ಉದ್ಭವಿಸುತ್ತದೆ. ಸಾಮಾನ್ಯವಾಗಿ ಯಾರೇ ಉದ್ಯಮಿಗಳು ಈ ರೀತಿಯ ಪರಿಸ್ಥಿತಿಯ ಎದುರಾಗಬಾರದು, ಎಂಬುದಕ್ಕೋಸ್ಕರ ಮುನ್ನಚ್ಚರಿಕೆಯನ್ನು ವಹಿಸುತ್ತಾರೆ. ಅಲ್ಲದೇ ಸಾಧ್ಯವಾದಷ್ಟು ಮಟ್ಟಿಗೆ ತಾನೇ ಸೂಕ್ತ ಸಮಯದಲ್ಲಿ ನಿರ್ಧರಿಸಿದಂತೆ ಪೆಮೆಂಟ್ ಮಾಡುತ್ತಾನೆ. ಬ್ಯಾಂಕ್ ಗಳಿಗೆ ಮಾತ್ರ ಯಾವುದೇ ಬಂಡವಾಳವನ್ನು ಹೂಡದೇ ಗ್ಯಾರಂಟಿ ಫೀ ಮತ್ತು ಎಲ್.ಸಿ. ಶುಲ್ಕಗಳ ರೂಪದಲ್ಲಿ ಆದಾಯ ಲಭಿಸುತ್ತದೆ. ಇದರಂತೆ ಉದ್ಯಮಿಗಳಿಗೂ ಸಪ್ಲಾಯರ್ ರಿಂದ ಅಥವಾ ಸಾಲಗಾರರಿಂದ ಎರವಲಾಗಿ ಸಹಜವಾಗಿ ವಸ್ತುಗಳನ್ನು ಅಥವಾ ಸರ್ವಿಸೆಸ್ ಪಡೆಯುವುದು ಸಾಧ್ಯ. ಈ ರೀತಿಯಲ್ಲಿ ಬ್ಯಾಂಕ್ ಮತ್ತು ಉದ್ಯಮಿಗಳಿಗೆ ಈ ಸ್ಥಿತಿಯು ‘ವಿನ್-ವಿನ್’ ಆಗುತ್ತದೆ. ಉದ್ಯಮಿಗಳು ಯಾವಾಗಲೂ ಹಣದ ರೂಪದಲ್ಲಿ ಲಭ್ಯವಿರುವ ಸಾಲದ ಯೋಜನೆಗಳೊಂದಿಗೆ ಇಂತಹ ಅಪ್ರತ್ಯಕ್ಷ ವಾಗಿ ಆದರೆ ಸಹಜವಾದ ಪರ್ಯಾಯಗಳ ಕುರಿತು ವಿಚಾರ ಮಾಡಬೇಕು.
ಮುಂದಿನ ಸಂಚಿಕೆಯಲ್ಲಿ ನಾವು ವ್ಯವಹಾರದಲ್ಲಿರುವ ಆರ್ಥಿಕ ಡ್ಯಾಶ್ ಬೋರ್ಡ್ ನಲ್ಲಿರುವ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದರಲ್ಲಿ ವ್ಯವಹಾರದ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ವಿವರಗಳು, ಕ್ಯಾಶ್ ಫ್ಲೋ ಸ್ಟೇಟ್ ಮೆಂಟ್ ಹಾಗೆಯೇ ಪ್ರತಿ ವಾರಕ್ಕೆ ಅಥವಾ ತಿಂಗಳಿಗೆ ಸಿಗಲೇ ಬೇಕಾಗಿರುವ ಇಂತಹ ನಿರ್ವಹಣೆಯ ವರದಿ (ಮ್ಯಾನೆಜ್ ಮೆಂಟ್ ರಿಪೋರ್ಟ್) ಇವುಗಳನ್ನು ಸೇರಿಸಲಾಗಲಿದೆ.
ಮುಕುಂದ ಅಭ್ಯಂಕರ್
ಚಾರ್ಟರ್ಡ್ ಅಕೌಂಟಂಟ್
9822475611
ಮುಕುಂದ ಅಭ್ಯಂಕರ್ ಇವರು ಚಾರ್ಟರ್ಡ್ ಅಕೌಂಟಂಟ್ ಆಗಿದ್ದಾರೆ. ಕಳೆದ 30 ವರ್ಷಗಳ ಕಾಲಾವಧಿಯಲ್ಲಿ ಅವರು ಅನೇಕ ಕಂಪನಿಗಳ ಲೆಕ್ಕ ಪರಿಶೋಧನೆಯ (ಆಡಿಟ್) ಮತ್ತು ಹಣಕಾಸುಗಳ ಕುರಿತಾದ ಆಗುಹೋಗುಗಳ ವಿಶ್ಲೇಷಣೆಯ ಕೆಲಸವನ್ನು ಮಾಡುತ್ತಿದ್ದಾರೆ.